ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ನೀಡಿದ ಬೆರಳಚ್ಚುಗಳ ದುರ್ಬಳಕೆ!

KannadaprabhaNewsNetwork | Published : Nov 2, 2023 1:01 AM

ಸಾರಾಂಶ

ಸಬ್ಬ್‌ ರಿಜಿಸ್ಟ್ರರ್ರ್‌ ಕಚೇರಿಗೆ ನೀಡಿದ್ದ ಬೆರಳಚ್ಚುಗಳ ದುರ್ಬಳಕೆ
ಕನ್ನಡಪ್ರಭ ವಾರ್ತೆ ಉಡುಪಿ ಉಡುಪಿ ಸಬ್ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೀಡಲಾಗಿದ್ದ ಬೆರಳಚ್ಚನ್ನು ವಂಚಕರು ಅಕ್ರಮವಾಗಿ ಬಳಸಿಕೊಂಡು 3 ಮಂದಿಯ ಖಾತಿಯಿಂದ ಹಣವನ್ನು ಲಪಟಾಯಿಸಿದ ಹೊಸ ರೀತಿಯ ವಂಚನೆ ಬೆಳಕಿಗೆ ಬಂದಿದೆ. ಕೊಡವೂರು ಗ್ರಾಮದ ಹರೀಶ (51) ಅವರ ಖಾತೆಯಿಂದ 15 ಸಾವಿರ ರು., ಮಲ್ಪೆಯ ದಿವಾಕರ (36) ಅವರ ಖಾತೆಯಿಂದ 28 ಸಾವಿರ ರು., ರಮೇಶ್ (35) ಉಡುಪಿ ಅವರ ಖಾತೆಯಿಂದ 10 ಸಾವಿರ ರು. ರು.ಗಳನ್ನು ವಂಚಕರು ಲಪಟಾಯಿಸಿದ್ದಾರೆ. ಅವರೆಲ್ಲರೂ ಮಲ್ಪೆಯ ಕೊಡವೂರಿನ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ಹರೀಶ್ ತಮ್ಮ ಜಮೀನು ಅಡವಿಟ್ಟು ಸಾಲ ತೆಗೆದಿದ್ದು, ಈ ಬಗ್ಗೆ ಆ.5ರಂದು ಉಡುಪಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬೆರಳಚ್ಚು ನೀಡಿದ್ದರು. ದಿವಾಕರ ಅವರು ಜಮೀನು ಅಡವಿಟ್ಟು ಸಾಲ ಪಡೆಯುವುದಕ್ಕೆ ಸೆ.27ರಂದು ಉಡುಪಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬೆರಳಚ್ಚು ನೀಡಿದ್ದರು. ರಮೇಶ್‌ ಮೇ 6ರಂದು ಇಲ್ಲಿನ ಕಡೆಕಾರು ಗ್ರಾಮದ ಶ್ರೀ ವೀರಾಂಜನೇಯ ಪೂಜಾ ಮಂದಿರಕ್ಕೆ ಜಮೀನು ದಾನಪತ್ರ ಮಾಡುವುದಕ್ಕಾಗಿ ಉಡುಪಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬೆರಳಚ್ಚು ನೀಡಿದ್ದರು. ಇದೀಗ ದುಷ್ಕರ್ಮಿಗಳು ಅಕ್ರಮವಾಗಿ ಅವರ ಬೆರಳಚ್ಚುಗಳನ್ನು ಪಡೆದು ದುರುಪಯೋಗಪಡಿಸಿಕೊಂಡು ಅವರ ಖಾತೆಯಿಂದ ಹಣವನ್ನು ಆನ್ ಲೈನ್ ಬ್ಯಾಂಕಿಂಗ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ಮೂವರು ಮಲ್ಪೆ ಪೊಲೀಸ್‌ ಠಾಣೆಗೆ ದೂರುನೀಡಿದ್ದಾರೆ. ಕೊಡವೂರು ಗ್ರಾಮದವರೇ ಆದ ಜಯಂತಿ (43) ಎಂಬವರ ಬೆರಳಚ್ಚನ್ನು ದುರುಪಯೋಗ ಮಾಡಿಕೊಂಡು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಮಲ್ಪೆ ಶಾಖೆಯ ಖಾತೆಯಿಂದ 6000 ರು.ಗಳನ್ನು ವರ್ಗಾವಣೆ ಮಾಡಲಾಗಿದ್ದು, ದೂರು ನೀಡಲಾಗಿದೆ. ಇದೀಗ ಉಪನೋಂದಣಾಧಿಕಾರಿ ಕೇಚರಿಯಂತಹ ಸರ್ಕಾರ ಕಚೇರಿಗಳಿಗೆ ನೀಡಲಾಗುವ ಬೆರಳಚ್ಚುಗಳು ಕೂಡ ಈ ರೀತಿ ವಂಚಕರ ಪಾಲಾಗಿ ದುರ್ಬಳಕೆಯಾಗಿ ಹಣ ದೋಚುವ ದಂಧೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.

Share this article