ಕಲಬುರಗಿ: ಕನ್ನಡ ರಾಜ್ಯೋತ್ಸವ ದಿನಾಚರಣೆಗೆ ಸೀಮಿತವಾಗದೆ ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಕನ್ನಡತನವೆಂಬುದು ಜನಜೀವನದಲ್ಲಿ ಸಮನ್ವಯವಾಗಬೇಕಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ. ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು. ಬುಧವಾರ ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ 68ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ತಾಯಿ ಭುವನೇಶ್ವರಿಗೆ ಪುಷ್ಪಾರ್ಚಣೆ ಸಲ್ಲಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಲಬುರಗಿ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗುತ್ತಿದೆ. ಏಕ ಬಳಕೆಯ ಪ್ಲಾಸ್ಟಿಕ್ ಕವರ್ ಬಳಕೆ ತ್ಯಜಿಸಿ ಪರಿಸರ ಸಂರಕ್ಷಣೆಗೆ ಎಲ್ಲರು ಮುಂದಾಗಬೇಕು ಎಂದು ಕರೆ ನೀಡಿದರು. ಪ್ರಸಕ್ತ 2023ರ ಜೂನ್ ಮಾಹೆಯಲ್ಲಿ ಶೇ.43ರಷ್ಟು ಮಳೆ ಕೊರತೆ ಮತ್ತು ಜುಲೈ ತಿಂಗಳಿನಲ್ಲಿ ಶೇ.93ರಷ್ಟು ಹೆಚ್ಚಿನ ಮಳೆ ಕಾರಣ 10,531 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದ್ದು, 14.21 ಕೋಟಿ ರು. ಪರಿಹಾರ ಧನವನ್ನು ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ವರುಣನ ಅವಕೃಪೆಯಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ 11 ತಾಲೂಕುಗಳನ್ನು ತೀವ್ರ ಬರ ಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಬರ ನಿರ್ವಹಣೆ ಕಾರ್ಯಗಳು ಪ್ರಗತಿಯಲ್ಲಿವೆ. ಬರಗಾಲದಿಂದ ಜಿಲ್ಲೆಯಲ್ಲಿ 2.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಹಾನಿ ಮೊತ್ತ 1,755.23 ಕೋಟಿ ರು. ಎಂದು ಅಂದಾಜಿಸಿದೆ. ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ 257.11 ಕೋಟಿ ರು. ಇನ್ಪುಟ್ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದರು. ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳನ್ನು ‘ಅರಿವು ಕೇಂದ್ರ’ ಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ರಾಜ್ಯದಾದ್ಯಂತ 4,000 ಗ್ರಾಮ ಪಂಚಾಯಿತಿಗಳಲ್ಲಿ “ಕೂಸಿನ ಮನೆ” ಶಿಶುಪಾಲನಾ ಕೇಂದ್ರಗಳು ತೆರೆಯಲಾಗುತ್ತಿದೆ. ಜಿಲ್ಲೆಯಲ್ಲಿ 209 ಕೇಂದ್ರ ಸ್ಥಾಪನೆಯ ಕಾರ್ಯ ವಿವಿಧ ಹಂತಗಳಲ್ಲಿದೆ ಎಂದರು. ಹೆಲ್ತ್ ಎಟಿಎಂಗೆ ಉತ್ತಮ ಸ್ಪಂದನೆ: ಸಿಎಸ್ಆರ್ ನಿಧಿಯಡಿ 5 ಕೋಟಿ ರು. ವೆಚ್ಚದಲ್ಲಿ ಹೃದ್ರೋಗ, ಎಚ್ಐವಿ, ಸ್ಯಾಚುರೇಚನ್, ಇಸಿಜಿ, ಡೇಂಘಿ, ಮಲೇರಿಯಾ ಮುಂತಾದ 50ಕ್ಕೂ ಹೆಚ್ಚು ರಕ್ತ ತಪಾಸಣೆಗಳ ವರದಿಯನ್ನು 10 ನಿಮಿಷದಲ್ಲಿಯೇ ಒದಗಿಸುವ ‘ಹೆಲ್ತ್ ಎಟಿಎಂʼ ಜಿಲ್ಲೆಯ 25 ಕಡೆ ಪ್ರಾಯೋಗಿಕವಾಗಿ ಸ್ಥಾಪನೆಗೊಂಡಿದ್ದು, ಕಳೆದ 2 ತಿಂಗಳಲ್ಲಿ 13,516 ಜನರು ಉಚಿತ ಆರೋಗ್ಯ ತಪಾಸಣೆಗೆ ಒಳಪಡುವ ಮೂಲಕ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು. ಪುಣ್ಯ, ಪ್ರವಾಸಿ ಕ್ಷೇತ್ರ ಅಭಿವೃದ್ಧಿ: ಜಿಲ್ಲೆಯ ಶ್ರೀ ದತ್ತಾತ್ರೇಯನ ಪುಣ್ಯಕ್ಷೇತ್ರ ಗಾಣಗಾಪೂರ, ಬೌದ್ಧ ಧರ್ಮದ ನೆಲೆಯಾಗಿರುವ ಸನ್ನತಿ, ಕಲಬುರಗಿ ಗುರುದ್ವಾರ, ರಾಷ್ಟ್ರಕೂಟರ ಆಳ್ವಿಕೆಯ ಮಳಖೇಡ್ ಕೋಟೆಗಳನ್ನು ಸಮಗ್ರ ಅಭಿವೃದ್ಧಿಪಡಿಸಲಾಗುವುದು ಎಂದರು. ಖಾಲಿ ಹುದ್ದೆ ಭರ್ತಿಗೆ ಕ್ರಮ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸಂವಿಧಾನದ 371(ಜೆ) ಕಲಂ ಅಡಿಯಲ್ಲಿ ಕಲ್ಯಾಣ ಕರ್ನಾಟಕ್ಕೆ ನೀಡಲಾದ ವಿಶೇಷ ಸ್ಥಾನಮಾನದ ಅನುಷ್ಠಾನಕ್ಕಾಗಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಮೇಲ್ವಿಚಾರಣೆಗೆ ನನ್ನ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯು ಈಗಾಗಲೆ ಸಭೆಗಳನ್ನು ನಡೆಸಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ, ಮುಂಬಡ್ತಿ ಮೂಲಕ ಭರ್ತಿ ಮಾಡುವಂತೆ ಎಲ್ಲಾ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು. ಕಲಾ ತಂಡಗಳ ಭವ್ಯ ಮೆರಣಿಗೆ: ಸಚಿವ ಪ್ರಿಯಾಂಕ್ ಖರ್ಗೆ ಅವರು ಡೊಳ್ಳು ಬಾರಿಸುವ ಮೂಲಕ ಕಲಾ ತಂಡಗಳ ಭವ್ಯ ಮೆರಣಿಗೆಗೆ ಚಾಲನೆ ನೀಡಿದರು. ಬೀಸು ಕಂಸಾಳೆ, ಡೊಳ್ಳು ಕುಣಿತ, ಹೆಜ್ಜೆ ಮೇಳದೊಂದಿಗೆ ಕಲಾವಿದರು ಹಾಡುತ್ತಾ, ಕುಣಿಯುತ್ತ ಹೆಜ್ಜೆ ಹಾಕಿದರು. ನೂರಾರು ಸಂಖ್ಯೆಯಲ್ಲಿ ಮಕ್ಕಳು ಕೈಯಲ್ಲಿ ಕನ್ನಡ ಧ್ವಜ, ಭಿತ್ತಿಪತ್ರ ಹಿಡಿದು ಕನ್ನಡಾಂಬೆಗೆ ಜೈಕಾರ ಹಾಕಿದರು. ನಗರೇಶ್ವರ ಶಾಲೆಯಿಂದ ಸೂಪರ್ ಮಾರ್ಕೆಟ್ ಮಾರ್ಗವಾಗಿ ಡಾ.ಎಸ್.ಎಂ.ಪಂಡಿತ್ ರಂಗಮಂದಿರ ವರೆಗೆ ನಡೆದು ಮೆರವಣಿಗೆ ಸಂಪನ್ನಗೊಂಡಿತ್ತು. ಇನ್ನು ಕೆ.ಕೆ.ಆರ್.ಟಿ.ಸಿ., ಜೆಸ್ಕಾಂ, ತೋಟಗಾರಿಕೆ, ಕೃಷಿ, ಆರೋಗ್ಯ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ ಇಲಾಖೆಯಿಂದ ಆಯಾ ಇಲಾಖೆಯ ಯೋಜನೆ, ಕನ್ನಡ ನಾಡು-ನುಡಿ ಬಗ್ಗೆ ಅರಿವು ಮೂಡಿಸುವ ಸ್ತಬ್ಧಚಿತ್ರ ಮೆರವಣಿಗೆ ಜನಮನ ಸೆಳೆದವು. ಮರುಬಳಕೆ ಬ್ಯಾಗ್ ವಿತರಣೆ: ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ಮುಕ್ತ ಕಲಬುರಗಿ ಅಭಿಯಾನ ಅಂಗವಾಗಿ ಮರುಬಳಕೆಯ ಬ್ಯಾಗ್‍ಗಳನ್ನು ಮಕ್ಕಳಿಗೆ ವಿತರಣೆ ಮಾಡುವ ಮೂಲಕ ಸಚಿವ ಪ್ರಿಯಾಂಕ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಕನ್ನಡದಿಂದ ಕರ್ನಾಟಕ ರೂಪುಗೊಂಡ ಬಗೆಯನ್ನೂ ಸಾರಿ ಹೇಳುವಂತೆ ವಿಶಿಷ್ಟ ರೀತಿಯಲ್ಲಿ ಈ ಬ್ಯಾಗ್ ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ನಾಡಿನ ಇತಿಹಾಸವನ್ನು ಮುನ್ನೆಲೆಗೆ ತರುವ ಹಾಗೂ ಸುಸ್ಥಿರ ಹಾಗೂ ಸ್ವಚ್ಛ ಕಲಬುರಗಿಗೆ ರಹದಾರಿ ಹಾಕುವ ಎರಡೂ ಉದ್ದೇಶಗಳನ್ನು ಹೊಂದಲಾಗಿದೆ. ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ಶಶೀಲ್ ಜಿ. ನಮೋಶಿ, ಬಿ.ಜಿ.ಪಾಟೀಲ, ಚಂದ್ರಶೇಖರ ಪಾಟೀಲ ಗುಮನಾಬಾದ, ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ಮಹನಗರ ಪಾಲಿಕೆ ಮೇಯರ್ ವಿಶಾಲ ಎಸ್. ಧರ್ಗಿ, ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಡಿ.ಸಿ. ಬಿ.ಫೌಜಿಯಾ ತರನ್ನುಮ್, ನಗರ ಪೆÇಲೀಸ್ ಆಯುಕ್ತ ಚೇತನ ಆರ್., ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಆಕಾಶ ಶಂಕರ್, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಮಮತಾ ಕುಮಾರಿ, ತಹಶೀಲ್ದಾರ ನಾಗಮ್ಮ ಕಟ್ಟಿಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.