ಎಕ್ಸ್ ಪ್ರೆಸ್ ಕೆನಾಲ್: ಹೋರಾಟ ತೀವ್ರಗೊಳಿಸಲು ನಿರ್ಧಾರ

KannadaprabhaNewsNetwork |  
Published : May 25, 2025, 01:01 AM IST
ಸುದ್ದಿಗೋಷ್ಠಿಯಲ್ಲಿ ಬಿ. ಸುರೇಶಗೌಡ | Kannada Prabha

ಸಾರಾಂಶ

ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳಿಗೆ ಮಾರಕವಾಗಲಿರುವ ಎಕ್ಸ್ ಪ್ರೆಸ್ ಲಿಂಕ್‌ ಕೆನಾಲ್‌ ಯೋಜನೆ ಕೈ ಬಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವ ಹೋರಾಟವನ್ನು ತೀವ್ರಗೊಳಿಸಲಾಗುವುದು. ಈ ಹೋರಾಟದಲ್ಲಿ ಜಿಲ್ಲೆಯ ಸರ್ವಪಕ್ಷಗಳ ಶಾಸಕರು ಬೆಂಬಲ ನೀಡುವಂತೆ ಶಾಸಕ ಬಿ.ಸುರೇಶ್‌ಗೌಡರು ಕೋರಿದರು.

ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳಿಗೆ ಮಾರಕವಾಗಲಿರುವ ಎಕ್ಸ್ ಪ್ರೆಸ್ ಲಿಂಕ್‌ ಕೆನಾಲ್‌ ಯೋಜನೆ ಕೈ ಬಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವ ಹೋರಾಟವನ್ನು ತೀವ್ರಗೊಳಿಸಲಾಗುವುದು. ಈ ಹೋರಾಟದಲ್ಲಿ ಜಿಲ್ಲೆಯ ಸರ್ವಪಕ್ಷಗಳ ಶಾಸಕರು ಬೆಂಬಲ ನೀಡುವಂತೆ ಶಾಸಕ ಬಿ.ಸುರೇಶ್‌ಗೌಡರು ಕೋರಿದರು. ಶನಿವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಕ್‌ ಕೆನಾಲ್ ವಿರುದ್ಧದ ಹೋರಾಟದ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಯವರಿಗೆ ವಿಚಾರ ತಿಳಿಸಿ ಹೋರಾಟ ಬೆಂಬಲಿಸುವಂತೆ ಕೋರಲಾಗಿದೆ. ಈ ಕುರಿತು ಸೋಮವಾರ ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣರ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಜಿಲ್ಲೆಯ ಎಲ್ಲಾ ಪಕ್ಷಗಳ ಶಾಸಕರು ಸಭೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಹೋರಾಟದ ಮುಂದಿನ ರೂಪುರೇಷುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ಹೋರಾಟ ಬೆಂಬಲಿಸಿ ಭಾಗವಹಿಸಲು ಜಿಲ್ಲೆಯ ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಅವರನ್ನು ಕೋರಲಾಗುವುದು ಹಾಗೂ ಲಿಂಕ್‌ ಕೆನಾಲ್‌ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ ಯೋಜನೆ ರದ್ದುಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಲಿಂಕ್‌ ಕೆನಾಲ್‌ ಯೋಜನೆಯಿಂದ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ವರದಿ ನೀಡುವುದಾಗಿ ಹೇಳಿದ್ದ ಸರ್ಕಾರ ಇದುವರೆಗೂ ನೀಡಿಲ್ಲ. ಯೋಜನೆ ನಿಲ್ಲಿಸುವವರೆಗೂ ಹೋರಾಟ ನಡೆಸುವುದಾಗಿ ಸುರೇಶ್‌ಗೌಡರು ಎಚ್ಚರಿಕೆ ನೀಡಿದರು.ಈ ಯೋಜನೆಯಡಿ ಮಾಗಡಿ, ರಾಮನಗರಕ್ಕೆ ಹೇಮಾವತಿ ನೀರನ್ನು ತೆಗೆದುಕೊಂಡು ಹೋಗುವದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಪರಿಸ್ಥಿತಿ ಉಂಟಾಗುತ್ತದೆ. ಆದರೆ ಅಧಿಕಾರಿಗಳು ಹಾಗೂ ಪೊಲೀಸರನ್ನು ಬಳಸಿಕೊಂಡು ಹೋರಾಟ ಹತ್ತಿಕ್ಕಿ ಕೆನಾಲ್‌ ಕಾಮಗಾರಿ ನಡೆಸುವ ಸರ್ಕಾರದ ಧೋರಣೆ ಯಾವ ರೀತಿ ಸರಿ?ಸರ್ಕಾರದ ಮೊಂಡುತನದ ವಿರುದ್ಧ ಹೋರಾಟನಡೆಸುವುದು ಅನಿವಾರ್ಯಎಂದು ಹೇಳಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಜಿಲ್ಲೆಗೆ ಹಂಚಿಕೆಯಾಗಿರುವ ನೀರಿನಲ್ಲಿ ಶೇಕಡ 12 ರಷ್ಟನ್ನು ಕುಣಿಗಲ್‌ಗೆ ಹರಿಸುವುದರಲ್ಲಿ ನಮ್ಮ ಅಭ್ಯಂತರವಿಲ್ಲ, ಆದರೆ ಎಕ್ಸ್ ಪ್ರೆಸ್ ಕೆನಾಲ್ ನಿರ್ಮಿಸಿ ಮಾಗಡಿ ಹಾಗೂ ಅಲ್ಲಿಂದ ಮುಂದಕ್ಕೆ ನೀರು ತೆಗೆದುಕೊಂಡು ಹೋಗುವುದನ್ನು ವಿರೋಧಿಸುತ್ತೇವೆ. ಇದರಿಂದ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ. ಕೆನಾಲ್‌ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿ ನಮ್ಮ ಪಾಲಿನ ನೀರನ್ನು ಉಳಿಸಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹಾಕಲು ಜಿಲ್ಲೆಯಲ್ಲಿ ಪಕ್ಷಾತೀತ ಹೋರಾಟ ಮಾಡಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡ ದಿಲೀಪ್‌ಕುಮಾರ್ ಮಾತನಾಡಿ, ಗುಬ್ಬಿ ತಾಲೂಕು ಸುಂಕಾಪುರ ಬಳಿ ಕೆನಾಲ್‌ ಕಾಮಗಾರಿ ನಿಲ್ಲಿಸಲು ಒತ್ತಾಯಿಸಿ ಹೋರಾಟಗಾರರು, ರೈತರು ನಡೆಸಿದ್ದ ಪ್ರತಿಭಟನೆಯನ್ನು ಸರ್ಕಾರ ಪೊಲೀಸರನ್ನು ಬಳಸಿಕೊಂಡು ಹತ್ತಿಕ್ಕುವ ಕೆಲಸ ಮಾಡಿದೆ ಎಂದಅವರು, ಎಕ್ಸ್ ಪ್ರೆಸ್ ಲಿಂಕ್‌ ಕೆನಾಲ್‌ ಯೋಜನೆ ಕಿಕ್ ಬ್ಯಾಕ್‌ ಯೋಜನೆ ಎಂದು ಟೀಕಿಸಿದರು. ಮುಖಂಡರಾದ ಸಾಗರನಹಳ್ಳಿ ವಿಜಯಕುಮಾರ್, ಟಿ.ಆರ್.ಸದಾಶಿವಯ್ಯ, ಗೂಳೂರು ಶಿವಕುಮಾರ್, ಜ್ಯೋತಿ ತಿಪ್ಪೇಸ್ವಾಮಿ, ರಾಜಶೇಖರ್, ಸಿದ್ದೇಗೌಡ, ಜೆ.ಜಗದೀಶ್ ಭಾಗವಹಿಸಿದ್ದರು.

PREV

Recommended Stories

ನವೆಂಬರ್‌-ಡಿಸೆಂಬರ್‌ನಲ್ಲಿ 5 ಪಾಲಿಕೆ ಚುನಾವಣೆ: ಡಿಸಿಎಂ
ಹಿಪ್ಪರಗಿ ಜಲಾಶಯಕ್ಕೆ ೧,೧೯,೨೦೦ ಕ್ಯುಸೆಕ್‌ ಒಳಹರಿವು