ಗ್ರಾಮೀಣ ಪ್ರದೇಶಕ್ಕೆ ಮೊಬೈಲ್ ನೆಟ್‍ವರ್ಕ್ ಸೇವೆ ವಿಸ್ತರಿಸಿ

KannadaprabhaNewsNetwork |  
Published : Nov 23, 2024, 12:35 AM IST
ಪೊಟೋ: 22ಎಸ್ಎಂಜಿಕೆಪಿ01ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಮೊಬೈಲ್ ಕಂಪನಿಗಳ ನಿರ್ವಾಹಕ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಮೊಬೈಲ್ ಕಂಪನಿಗಳ ನಿರ್ವಾಹಕ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಡಿಸಿ ಗುರುದತ್ತ ಹೆಗಡೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಮೊಬೈಲ್‌ ನೆಟ್‌ವರ್ಕ್‌ ಉತ್ತಮ ಸೇವೆ ಒದಗಿಸಲು ಬಿಎಸ್‌ಎನ್‌ಎಲ್‌ ಜೊತೆ ಏರ್‌ಟೆಲ್‌, ಜಿಯೋ ಸೇರಿದಂತೆ ಇತರೆ ಮೊಬೈಲ್ ಕಂಪನಿಗಳು ಸೇವೆ ನೀಡುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಮೊಬೈಲ್ ಕಂಪನಿಗಳ ನಿರ್ವಾಹಕ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮೊಬೈಲ್ ನೆಟ್‍ವರ್ಕ್ ಸೇವೆ ಲಭ್ಯವಾಗದಿರುವ ಬಗ್ಗೆ ಸಾರ್ವಜನಿಕರಿಂದ ಅಹವಾಲು ಬರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಯುವಕರಿಗೆ ಆಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಮೊಬೈಲ್ ನೆಟ್‍ವರ್ಕ್ ದೊರಕಿಸಿಕೊಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಜಿಲ್ಲೆಯ ಮಲೆನಾಡು ಪ್ರದೇಶ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ಈಗಾಗಲೇ ಗುರುತಿಸಲಾದ ಅನೇಕ ಸ್ಥಳಗಳಲ್ಲಿ ಬಿಎಸ್ಎನ್‌ಎಲ್‌ ಸ್ಥಾವರಗಳನ್ನು ನಿರ್ಮಿಸಿ ಸೇವೆ ಒದಗಿಸುತ್ತಿದೆ. ಆದರೆ, ಬಿಎಸ್ಎನ್‌ಎಲ್‌ ಸೇವೆ ನಿರೀಕ್ಷಿಸದಷ್ಟು ಪ್ರಮಾಣದಲ್ಲಿ ಜನರಿಗೆ ದೊರಕದಿರುವುದರಿಂದ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಸ್ಥಳಗಳಲ್ಲಿ ಏರ್‌ಟೆಲ್‌, ಜಿಯೋ ಸೇರಿದಂತೆ ಬೇರೆ ಬೇರೆ ಮೊಬೈಲ್ ಕಂಪನಿಗಳ ನಿರ್ವಾಹಕರೂ ಕೂಡ ತಮ್ಮ ಸೇವೆಯನ್ನು ಜನನಿಬಿಡ ಸ್ಥಳಗಳಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿಯೂ ಉಭಯ ಕಂಪನಿಗಳ ನಡುವೆ ಒಡಂಬಡಿಕೆ ಮಾಡಿಕೊಂಡು ತಮ್ಮ ಸೇವಾ ವಲಯವನ್ನು ವಿಸ್ತರಿಸಿಕೊಳ್ಳುವಂತೆ ಸೂಚಿಸಿದರು.

ಅನ್ಯ ಕಂಪನಿಗಳ ಮುಖ್ಯಸ್ಥರು ನೆಟ್‌ವರ್ಕ್‌ ನಿರ್ಮಿಸುವ ಮುನ್ನ ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಬೇಕು. ಜಿಲ್ಲಾಡಳಿತ ವತಿಯಿಂದ ತಮಗೆ ಅಗತ್ಯವಿರುವ ಭೂಮಿ, ವಿದ್ಯುತ್ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗುವುದು. ಸಣ್ಣಪುಟ್ಟ ನ್ಯೂನತೆಗಳ ನಡುವೆಯೂ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿವಿದ ಕಂಪನಿಗಳ ನೆಟ್‍ವರ್ಕ್ ಸೇವೆ ಒದಗಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ಸೇವೆ ಒದಗಿಸುವ ಬಗ್ಗೆ ಇರುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

ಮೊಬೈಲ್ ಕಂಪನಿಗಳ ನಿರ್ವಹಣಾಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ಸ್ಥಾವರಗಳ ನಿರ್ಮಾಣಕ್ಕೆ ಸೂಕ್ತ ನಿವೇಶನ ಒದಗಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಅಲ್ಲದೇ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಸ್ಥಾವರಗಳ ನಿರ್ಮಾಣಕ್ಕೆ ಸ್ಥಳ ಗುರುತಿಸಿ, ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಂಸ್ಥೆಯ ಮುಖ್ಯಸ್ಥರಿಗೆ ಕಳಿಸಿದ್ದು, ಸಂಸ್ಥೆಯ ಮುಖ್ಯಸ್ಥರ ಅನುಮೋದನೆಯ ನಂತರ ಸ್ಥಾವರ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಮ್ಮ ಸಹಕಾರವನ್ನು ಕೋರಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಯೋ, ಏರ್‌ಟೆಲ್‌ ಮತ್ತಿತರ ಮೊಬೈಲ್ ಕಂಪನಿಗಳ ನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ