ಒಳಮೀಸಲು ಸಮೀಕ್ಷೆಯ ಅವಧಿ ವಿಸ್ತರಿಸಿ

KannadaprabhaNewsNetwork | Published : May 16, 2025 2:21 AM
Follow Us

ಸಾರಾಂಶ

ಶಿವಮೊಗ್ಗ: ಪರಿಶಿಷ್ಟ ಜಾತಿಗಳ ಒಳಮೀಸಲಿಗೆ ಸಂಬಂಧಿಸಿದ ಸಮೀಕ್ಷೆಯಲ್ಲಿ ಕೆಲವು ಕಡೆಗಳಲ್ಲಿ ವೀರಶೈವ ಲಿಂಗಾಯತರು ಸುಳ್ಳಿ ಹೇಳಿ ಬೇಡ ಜಂಗಮ ಎನ್ನುವ ಬದಲಿಗೆ ಬೇಡ ಬುಡುಗ ಜಂಗಮ ಎಂದು ಹೇಳಿ ವಿವರ ದಾಖಲಿಸುವ ಮೂಲಕ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಕೊಳ್ಳುತ್ತಿದ್ದಾರೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾನುಪ್ರಸಾದ್ ಆರೋಪಿಸಿದರು.

ಶಿವಮೊಗ್ಗ: ಪರಿಶಿಷ್ಟ ಜಾತಿಗಳ ಒಳಮೀಸಲಿಗೆ ಸಂಬಂಧಿಸಿದ ಸಮೀಕ್ಷೆಯಲ್ಲಿ ಕೆಲವು ಕಡೆಗಳಲ್ಲಿ ವೀರಶೈವ ಲಿಂಗಾಯತರು ಸುಳ್ಳಿ ಹೇಳಿ ಬೇಡ ಜಂಗಮ ಎನ್ನುವ ಬದಲಿಗೆ ಬೇಡ ಬುಡುಗ ಜಂಗಮ ಎಂದು ಹೇಳಿ ವಿವರ ದಾಖಲಿಸುವ ಮೂಲಕ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಕೊಳ್ಳುತ್ತಿದ್ದಾರೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾನುಪ್ರಸಾದ್ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳ ಒಳಮೀಸಲಿಗೆ ಸಂಬಂಧಿಸಿದ ಸರ್ಕಾರವು ಈಗ ಸಮೀಕ್ಷೆ ನಡೆಸುತ್ತಿರುವುದರ ಹಿಂದೆ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಹಲವು ವರ್ಷಗಳ ಹೋರಾಟದ ಪರಿಶ್ರಮವಿದೆ. ಸಾಕಷ್ಟು ಜನರು ಇದಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ, ಈಗ ಒಳ ಮೀಸಲಿನ ಲಾಭ ಪಡೆಯಲು ಕೆಲವರು ಹೊಂಚ ಹಾಕಿರುವುದು ದುರಂತ ಎಂದರು.

ರಾಜ್ಯದಲ್ಲಿ ಒಳಮೀಸಲಿಗೆ ಸಂಬಂಧಿಸಿದ ಸಮೀಕ್ಷೆ ಶುರುವಾಗಿ ಇಲ್ಲಿಗೆ 10 ದಿನಗಳಿಗೂ ಹೆಚ್ಚು ಕಾಲವಾಯಿತು. ಮೊದಲ ಹಂತದಲ್ಲಿನ ಮನೆ ಮನೆ ಸಮೀಕ್ಷೆಗೆ ಇನ್ನೇನು ಎರಡು ದಿನ ಮಾತ್ರ ಬಾಕಿ ಉಳಿದಿವೆ. ಈ ಹಂತದಲ್ಲೂ ಸಮೀಕ್ಷೆ ಸರಿಯಾಗಿ ನಡೆದಿಲ್ಲ. ಬಹಳಷ್ಟು ಮನೆಗಳಿಗೆ ಗಣತಿದಾರರೇ ಹೋಗಿಲ್ಲ. ಹೋದರೂ ಕೂಡ ತಾಂತ್ರಿಕ ಕಾರಣಕ್ಕೆ ದತ್ತಾಂಶ ದಾಖಲಿಸಲು ಆಗಿಲ್ಲ. ಈ ಹಂತದಲ್ಲಿ ಮನೆ ಮನೆ ಸಮೀಕ್ಷೆ ಮುಕ್ತಾಯಗೊಂಡರೆ ಪರಿಶಿಷ್ಟ ವರ್ಗದ ಜನರಿಗೆ ದೊಡ್ಡ ಅನ್ಯಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆ ಸಮೀಕ್ಷೆಯ ಅವಧಿಯನ್ನು ಇನ್ನಷ್ಟು ದಿನಗಳಿಗೆ ವಿಸ್ತರಿಸಬೇಕೆಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿಯ ಬಹಳಷ್ಟು ಜನರು ಈಗಲೂ ಕೂಡ ಆಧಾರ್‌ಕಾರ್ಡ್, ರೇಷನ್ ಕಾರ್ಡ್ ನಂತಹ ದಾಖಲೆಗಳನ್ನು ಹೊಂದುವುದಕ್ಕೆ ಆಗಿಲ್ಲ, ಇಂತಹ ಜನರನ್ನು ಸಮೀಕ್ಷೆಯಿಂದಲೇ ಹೊರಗುಳಿಸುವಂತಹ ಕೆಲಸ ಕೆಲವು ಕಡೆಗಳಲ್ಲಿ ಗಣತಿದಾರರಿಂದಲೇ ಆಗುತ್ತಿದೆ. ಜಾತಿ ಪ್ರಮಾಣ ಪತ್ರಗಳು ಇದ್ದಾಗ್ಯೂಆಧಾರ ಕಾರ್ಡ್, ರೇಷನ್ ಕಾರ್ಡ್ ಇಲ್ಲ ಎಂದು ಪರಿಶಿಷ್ಟ ಜಾತಿ ಜನರನ್ನು ಸಮೀಕ್ಷೆಯಿಂದ ಹೊರಗುಳಿಸುವುದು ಸರಿಯಲ್ಲ. ಅಂತಹ ಅಧಿಕಾರಿಗಳ ಮೇಲೆ ಕ್ರಿಮಿನಲದ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾದಿಗ ದಂಡೋರ ಮುಖಂಡರಾದ ಸಿ.ಮೂರ್ತಿ, ಎಚ್.ಎನ್.ಪ್ರಭು, ರಶ್ಮಿ, ಸುನೀತರಾಜ್ ಇದ್ದರು.

ಮನೆ ಮನೆ ಸಮೀಕ್ಷೆ ಬಳಿಕ ಆನ್‌ಲೈನ್ ಮೂಲಕವೂ ದತ್ತಾಂಶ ದಾಖಲು ಮಾಡಬಹುದೆಂದು ಸರ್ಕಾರ ಹೇಳಿದೆ, ಆದರೆ ಈಗ ಗಣತಿದಾರರೇ ಬಳಸುವ ಆ್ಯಪ್‌ನಲ್ಲಿಯೇ ಸಾಕಷ್ಟು ದೋಷಗಳಿರುವುದರಿಂದ ವಲಸೆಹೋದವರು ಹೇಗೆ ಅದನ್ನು ಬಳಸಿಕೊಂಡು ದತ್ತಾಂಶ ನಮೂದಿಸಲು ಸಾಧ್ಯ ? ಗಣತಿದಾರರಿಗೆ ಆಗದ್ದು, ಸಾಮಾನ್ಯರಿಗೆ ಆಗುತ್ತಾ? ಆ್ಯಪ್ ನಲ್ಲಿನ ಈ ದೋಷವನ್ನು ಆಯೋಗವು ತಕ್ಷಣ ಸರಿಪಡಿಸಬೇಕು.

- ಭಾನುಪ್ರಸಾದ್, ಎಂಆರ್‌ಎಚ್‍ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ