ರಾಮನಗರ: ಹೃದಯಾಘಾತ ಸಂಭವಿಸಿದ ಸಂದರ್ಭದ ಗೋಲ್ಡನ್ ಹವರ್‌ನಲ್ಲಿ ಜೀವರಕ್ಷಕ ಚುಚ್ಚುಮದ್ದು ನೀಡುವ ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಪುನೀತ್ ಹೃದಯ ಜ್ಯೋತಿ ಯೋಜನೆ ನೂರಾರು ಜನರ ಬದುಕನ್ನು ಉಳಿಸಿದೆ. ಇದೂವರೆಗೆ 250 ಜನರನ್ನು ರಕ್ಷಿಸಲಾಗಿದೆ. ರಾಜ್ಯದ 74 ತಾಲೂಕು ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ಹೃದಯ ಸ್ತಂಭನವಾದಾಗ ವ್ಯಕ್ತಿಗೆ ಒಂದರಿಂದ ಮೂರು ಗಂಟೆ ಅವಧಿಯೊಳಗೆ ಜೀವರಕ್ಷಕ ಚುಚ್ಚುಮದ್ದು ನೀಡುವ ಈ ಯೋಜನೆಯನ್ನು ರಾಜ್ಯಾದ್ಯಂತ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ವಿಸ್ತರಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಹಾಗಾಗಿ ಈ ಯೋಜನೆಯನ್ನು ಮುಂಬರುವ ಎರಡು ತಿಂಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಗೃಹ ಆರೋಗ್ಯ ಯೋಜನೆ ರೂಪಿಸಿದೆ. ಪ್ರತಿಯೊಂದು ಮನೆಗೆ ತೆರಳಿ ಮನೆಯ ಸದಸ್ಯರ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿ ಅವರಲ್ಲಿರುವ ಕಾಯಿಲೆ ಗುರುತಿಸಿ, ಅದನ್ನು ಈ ಯೋಜನೆ ಮೂಲಕ ನಿಯಂತ್ರಿಸಲಾಗುವುದು. ದೃಷ್ಟಿ ದೋಷಕ್ಕೆ ಉಚಿತ ಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಿಸುವ ಆಶಾಕಿರಣ ಯೋಜನೆ ಇದೀಗ ಎಂಟು ಜಿಲ್ಲೆಗಳಲ್ಲಿ ಮಾತ್ರ ಲಭ್ಯವಿದ್ದು, ಆ ಯೋಜನೆಯನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ. ಆ ಮೂಲಕ ಕಣ್ಣಿನ ದೋಷವುಳ್ಳವರಿಗೆ ಉಚಿತ ಆಪರೇಷನ್ ನಡೆಸಿ ಉಚಿತ ಕನ್ನಡಕ ವಿತರಿಸಲಾಗುತ್ತಿದೆ ಎಂದರು.ಈ ವರ್ಷದ ಏಪ್ರಿಲ್ ನಂತರ ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರು. ಗೌರವಧನ ನೀಡಲಾಗುವುದು. ರಾಜ್ಯದಲ್ಲಿರುವ ಆರೋಗ್ಯ ಸೇವೆ ಮತ್ತಷ್ಟು ವಿಸ್ತರಿಸಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ. ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಇಲಾಖೆ ಅವಲಂಬಿತವಾಗಿದೆ. ವೈದ್ಯರು ಹಾಗೂ ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಬೇಕು. ಆಗ ಸಾಕಷ್ಟು ಸಮಸ್ಯೆಗಳು ನೀಗುತ್ತವೆ. ವೈದ್ಯರು ಸಹಾನುಭೂತಿಯಿಂದ ರೋಗಿಗಳನ್ನು ತಪಾಸಣೆ ಮಾಡಬೇಕು. ಉತ್ತಮ ವರ್ತನೆ ತೋರಬೇಕು. ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿರುವ ಸಿಟಿ ಸ್ಕ್ಯಾನಿಂಗ್ ಯಂತ್ರ ದುರಸ್ತಿ ಪಡಿಸಲಾಗುವುದು ಹಾಗೂ ಎಂಆರ್‌ಐ ಯಂತ್ರವನ್ನು ಎರಡು ತಿಂಗಳೊಳಗೆ ಒದಗಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.
ರಾಮನಗರ, ಮಾಗಡಿ ಹಾಗೂ ಕನಕಪುರ ತಾಲೂಕು ಆಸ್ಪತ್ರೆಗಳಲ್ಲಿ ಹೃದಯಾಘಾತಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡುವ ಜೀವರಕ್ಷಕ ಚುಚ್ಚುಮದ್ದು ನೀಡಲಾಗುವುದು. ಈ ಇಂಜೆಕ್ಷನ್ ಹೆಪ್ಪುಗಟ್ಟಿದ ರಕ್ತವನ್ನು ಕರಗಿಸುತ್ತದೆ, 18,000 ರು. ಈ ಇಂಜೆಕ್ಷನ್ ನೀಡಿದಲ್ಲಿ ಹೃದಯಾಘಾತವಾದ ವ್ಯಕ್ತಿ ಮುಂದಿನ ಮೂರು ಗಂಟೆಯೊಳಗೆ ಚಿಕಿತ್ಸೆ ಪಡೆಯಲು ನೆರವಾಗಲಿದೆ ಎಂದು ಹೇಳಿದರು.
ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಈ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಯೋಗ, ವ್ಯಾಯಾಮದಂತ ಚಟುವಟಿಕೆಗಳನ್ನು ನಿಯಮಿತವಾಗಿ ಮಾಡಬೇಕು. ಜಿಲ್ಲೆಗೆ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಒದಗಿಸಿಕೊಡುವಂತೆ ಮನವಿ ಮಾಡಿದರು.
23ಕೆಆರ್ ಎಂಎನ್ 5.ಜೆಪಿಜಿ