ಕನ್ನಡಪ್ರಭ ವಾರ್ತೆ ಹಾಸನ
ಮುಂದಿನ ಐದು ವರ್ಷಗಳಲ್ಲಿ ಶಿಕ್ಷಣ ಹಾಗೂ ಔದ್ಯೋಗಿಕ ವಲಯದಲ್ಲಿ ನಾವು ಊಹಿಸಿರದ ರೀತಿಯಲ್ಲಿ ವ್ಯಾಪಕ ಬದಲಾವಣೆಗಳು ಆಗಲಿವೆ ಎಂದು ಅಣ್ಣಾ ವಿಶ್ವವಿದ್ಯಾಲಯದ ಬೌದ್ಧಿಕ ಆಸ್ತಿ ಹಕ್ಕುಗಳ ಕೇಂದ್ರದ ನಿರ್ದೇಶಕ ಡಾ.ಎಂ.ಕಾಂತಬಾಬು ಅವರು ಅಭಿಪ್ರಾಯಪಟ್ಟರು.ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ದತ್ತಾಂಶ ವಿಜ್ಞಾನ ಮತ್ತು ಮಾಹಿತಿ ವ್ಯವಸ್ಥೆ ಕುರಿತ ಎರಡು ದಿನಗಳ ಐಇಇಇ (ಇನ್ಸ್‌ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್) ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ ಪ್ರಸ್ತುತ ಇರುವ ತರಗತಿಗಳು ಮತ್ತು ಕೆಲಸದ ಸ್ವರೂಪವನ್ನು ಬದಲಿಸಲಿದೆ. ಆಸ್ತಿ ಹಾಗೂ ವಿವಾಹ ನೋಂದಣಿ ಮಾಡಿಸುವ ರೀತಿಯಲ್ಲಿಯೇ ಹೊಸ ಆವಿಷ್ಕಾರಗಳನ್ನು ಪೇಟೆಂಟ್ ಕಚೇರಿ ಮೂಲಕ ನೋಂದಣಿ ಮಾಡಿಸುವುದು ಅತ್ಯಗತ್ಯ ಎಂದು ತಿಳಿಸಿದರು.
ಐಇಇಇ ಬೆಂಗಳೂರು ವಿಭಾಗದ ಉಪಮುಖ್ಯಸ್ಥ ಡಾ.ಪರಮೇಶಚಾರಿ ಬಿ.ಡಿ. ಅವರು ಮಾತನಾಡಿ, ಸಂಶೋಧನಾ ಪ್ರಬಂಧಗಳ ಪ್ರಕಟಣೆಯಲ್ಲಿ ಸಂಖ್ಯೆಗಿಂತ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಸಂಶೋಧನಾ ಸಮಾವೇಶಗಳಲ್ಲಿ ಮಂಡನೆಯಾಗಲಿರುವ ಪ್ರಬಂಧಗಳ ಗುಣಮಟ್ಟ ಕಾಯ್ದುಕೊಳ್ಳಲು ಐಇಇಇ ಕಾಳಜಿ ವಹಿಸುತ್ತಿದೆ. ಸಲ್ಲಿಕೆಯಾಗುವ ಪ್ರಬಂಧಗಳಲ್ಲಿ ಶೇ.೩೦ಕ್ಕಿಂತ ಕಡಿಮೆ ಪ್ರಬಂಧಗಳನ್ನು ಮಾತ್ರ ಪ್ರಕಟಣೆಗೆ ಸ್ವೀಕರಿಸಲಾಗುತ್ತಿದೆ. ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಸಮಾವೇಶಕ್ಕೆ ಸಲ್ಲಿಕೆಯಾಗಿರುವ ಪ್ರಬಂಧಗಳ ಪೈಕಿ ಶೇ.೧೫ರಷ್ಟು ಪ್ರಬಂಧಗಳನ್ನು ಮಾತ್ರ ಪ್ರಕಟಣೆಗೆ ಸ್ವೀಕರಿಸಿರುವುದು ಉತ್ತಮ ಬೆಳವಣಿಗೆ. ಐಇಇಇ ನಿಯಮಗಳನ್ನು ಪಾಲಿಸದ ಕಾರಣಕ್ಕೆ ಕೆಲವು ವಿಚಾರ ಸಂಕಿರಣಗಳಲ್ಲಿ ಮಂಡನೆಯಾದ ಪ್ರಬಂಧಗಳು ಆನಂತರ ಪ್ರಕಟಣೆಗೆ ತಿರಸ್ಕೃತವಾಗಿರುವುದೂ ಇದೆ ಎಂದರು.ಐಇಇಇ ಮೈಸೂರು ಉಪವಿಭಾಗದ ಉಪಮುಖ್ಯಸ್ಥ ಡಾ.ಶಿವಶಂಕರ್ ಅವರು ಮಾತನಾಡಿ, ಸಂಶೋಧನೆಯಲ್ಲಿ ಅನಿಶ್ಚಿತತೆ ಮತ್ತು ಸಂಕೀರ್ಣತೆ ಸರ್ವೇಸಾಮಾನ್ಯ. ಉತ್ತಮ ಸಂಶೋಧನೆ ನಡೆಸಿದರೆ ಅದಕ್ಕೆ ಮನ್ನಣೆ ದೊರೆಯಲಿದೆ ಎಂದು ತಿಳಿಸಿದರು.
ಕಾಲೇಜು ನಿರ್ದೇಶಕ ಡಾ.ಎಸ್.ಪ್ರದೀಪ್ ಅವರು ಮಾತನಾಡಿ, ಇಂದು ದತ್ತಾಂಶಕ್ಕೆ ಹೆಚ್ಚಿನ ಮಹತ್ವವಿದೆ. ಕೃತಕ ಬುದ್ಧಿಮತ್ತೆ ಅನ್ವಯಿಸಲು ಕೂಡ ದತ್ತಾಂಶದ ಅಗತ್ಯವಿದೆ. ವಿಚಾರ ಸಂಕಿರಣಗಳು ವಿದ್ಯಾರ್ಥಿಗಳಿಗೆ ಸಂಶೋಧಕರೊಂದಿಗೆ ಒಡನಾಡುವ ಮೂಲಕ ಕಲಿಯುವ ಅವಕಾಶ ಒದಗಿಸಲಿವೆ. ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಪ್ರಶ್ನೆಗಳನ್ನು ಕೇಳುವ ಮೂಲಕ ಹೆಚ್ಚು ತಿಳಿದುಕೊಳ್ಳಬಹುದು ಎಂದು ಹೇಳಿದರು. ಪ್ರಾಂಶುಪಾಲ ಡಾ.ಎ.ಜೆ.ಕೃಷ್ಣಯ್ಯ ಅವರು ಮಾತನಾಡಿ, ವಿಚಾರ ಸಂಕಿರಣವೆಂದರೆ ಜ್ಞಾನವನ್ನು ಸಂಭ್ರಮಿಸುವ ವೇದಿಕೆ ಎಂದರು.ಮಲೇಷಿಯಾದ ಯುನಿವರ್ಸಿಟಿ ಮಲೇಷಿಯಾ ಪೆರ್ಲಿಸ್‌ನ ಪ್ರಾಧ್ಯಾಪಕ ಡಾ.ಸೊಹಿಫುಲ್ ಅನ್ವರ್ ಜೈನೋಲ್ ಮುರಾದ್ ಅವರು ಕೃತಕ ಬುದ್ಧಿಮತ್ತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.ಡೀನ್‌ಗಳಾದ ಡಾ.ಗೀತಾಕಿರಣ್, ಡಾ.ನಂದಿತಾ ಬಿ.ಆರ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಪಿ.ಸಿ.ಶ್ರೀಕಾಂತ್, ಇನ್‌ಫರ್‌ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಆನಂದ ಬಾಬು ಜೆ, ಪ್ರಾಧ್ಯಾಪಕರು ಹಾಗೂ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲು ವಿವಿಧೆಡೆಗಳಿಂದ ಆಗಮಿಸಿದ್ದ ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.