ಮನೆ ಹಕ್ಕುಪತ್ರದ ಹೆಸರಿನಲ್ಲಿ ಹಾನಗಲ್ಲ ತಾಲೂಕಿನಲ್ಲಿ ಸುಲಿಗೆ ಆರೋಪ

KannadaprabhaNewsNetwork |  
Published : Feb 14, 2026, 02:30 AM IST
ಫೋಟೋ : ಸಿದ್ದಲಿಂಗಪ್ಪ ಕಮಡೊಳ್ಳಿ, ಶಿವರಾಜ ಸಜ್ಜನರ | Kannada Prabha

ಸಾರಾಂಶ

ಮನೆ ಹಕ್ಕುಪತ್ರದ ಹೆಸರಿನಲ್ಲಿ ಹಾನಗಲ್ಲ ತಾಲೂಕಿನಲ್ಲಿ ಮನೆ ಕಟ್ಟಿಕೊಂಡವರ ಸುಲಿಗೆ ನಡೆಯುತ್ತಿದೆ, ಅಧಿಕಾರಿಗಳು ಫಲಾನುಭವಿಗಳಿಂದ ಹಣ ದೋಚುತ್ತಿದ್ದಾರೆ ಎಂದು ಒಂದೆಡೆ ಆರೋಪ ಕೇಳಿ ಬರುತ್ತಿದ್ದರೆ, ಇನ್ನೊಂದೆಡೆ ಜನಪ್ರತಿನಿಧಿಗಳೇ ಇದರಲ್ಲಿ ಭಾಗಿಯಾಗಿದ್ದಾರೆ,

ಹಾನಗಲ್ಲ: ಮನೆ ಹಕ್ಕುಪತ್ರದ ಹೆಸರಿನಲ್ಲಿ ಹಾನಗಲ್ಲ ತಾಲೂಕಿನಲ್ಲಿ ಮನೆ ಕಟ್ಟಿಕೊಂಡವರ ಸುಲಿಗೆ ನಡೆಯುತ್ತಿದೆ, ಅಧಿಕಾರಿಗಳು ಫಲಾನುಭವಿಗಳಿಂದ ಹಣ ದೋಚುತ್ತಿದ್ದಾರೆ ಎಂದು ಒಂದೆಡೆ ಆರೋಪ ಕೇಳಿ ಬರುತ್ತಿದ್ದರೆ, ಇನ್ನೊಂದೆಡೆ ಜನಪ್ರತಿನಿಧಿಗಳೇ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಸುಳಿವಿದ್ದರೂ ಈ ಬಗ್ಗೆ ಶಾಸಕರಾಗಲಿ, ಜನಪ್ರತಿನಿಧಿಗಳಾಗಲಿ ಏನೂ ಕ್ರಮ ಕೈಗೊಳ್ಳದೇ ಇರುವುದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಾಗುತ್ತಿದೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನ ಆರೋಪಿಸಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮನೆಗಳಿಗೆ ಹಕ್ಕು ಪತ್ರ ನೀಡುವುದು ನಮ್ಮ ಬಿಜೆಪಿ ಸರ್ಕಾರದಲ್ಲಿಯೇ ಕೈಗೊಂಡ ಯೋಜನೆಯಾಗಿದೆ. ಮನೆಗಳ ಸರ್ವೆ ಆಗಿ ಎಲ್ಲ ಸಿದ್ಧತೆಯಾಗಿತ್ತು. ಆದರೆ ಈಗ ಹಕ್ಕು ಪತ್ರ ವಿತರಿಸುವುದರ ಹೆಸರಿನಲ್ಲಿ ದೊಡ್ಡ ಅವ್ಯವಹಾರಕ್ಕೆ ಈ ಯೋಜನೆ ಸಾಕ್ಷಿಯಾಗುತ್ತಿದೆ. ಉಚಿತವಾಗಿ ಹಕ್ಕು ಪತ್ರ ನೀಡುತ್ತಿದ್ದೇವೆ ಎನ್ನುವ ಕಾಂಗ್ರೆಸ್ ನಾಯಕರು ಎರಡು ಮೂರು ಸಾವಿರ ರು.ಗಳನ್ನು ಜನರಿಂದ ದೋಚುತ್ತಿರುವುದೇಕೆ ಎಂಬ ಪ್ರಶ್ನೆ ಕಾಡುತ್ತಿದೆ. ಸರ್ಕಾರಿ ಖರ್ಚಿನಲ್ಲಿ ಕಾಂಗ್ರೆಸ್ ಸಮಾವೇಶ ಮಾಡುತ್ತಿದೆ. ಹಾನಗಲ್ಲ ತಾಲೂಕಿನಲ್ಲಿ ಕೆಲವು ಖಾಸಗಿ ಜಾಗೆಗಳ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಅವನ್ನೂ ಗಮನಿಸದೇ ಹಕ್ಕುಪತ್ರ ನೀಡಲು ಮುಂದಾಗುತ್ತಿರುವುದು ಸರಿ ಅಲ್ಲ ಎಂದರು. ಇಸ್ಪೀಟ್‌, ಗಾಂಜಾ ಅಬ್ಬರ: ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಇಸ್ಪೀಟ್‌ ಆಟ, ಗಾಂಜಾ ಮಾರಾಟದಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದರೂ ತಾಲೂಕು ಆಡಳಿತ ಗಮನ ಹರಿಸುತ್ತಿಲ್ಲ. ತಾಲೂಕಿನ ಯಾವುದೇ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಏಜೆಂಟ್‌ರ ಕೈಗೊಂಬೆಯಾಗಿರುವ ಸರ್ಕಾರಿ ಇಲಾಖೆಗಳು ಭ್ರಷ್ಟಾಚಾರದ ಕೂಪಗಳಾಗಿವೆ. ಇಲ್ಲಿ ಏಕಮುಖಿ ಆಡಳಿತದಿಂದಾಗಿ ಕಾನೂನು ಸುವ್ಯವಸ್ಥೆಯೂ ಹಾಳಾಗಿದೆ. ಈ ಕುರಿತು ಹತ್ತು ಹಲವು ಬಾರಿ ತಾಲೂಕು ಆಡಳಿತವನ್ನು ಎಚ್ಚರಿಸಿದರೂ ಏನೂ ಪ್ರಯೋಜನವಾಗುತ್ತಿಲ್ಲ. ಹಾನಗಲ್ಲ ತಾಲೂಕು ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.ಬೆಳಗಾಲಪೇಟೆಯ ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಣ್ಣ ಕಮಡೊಳ್ಳಿ ತಾಲೂಕು ಆಡಳಿತದ ಕುರಿತು ಪ್ರತಿಕ್ರಿಯೆ ನೀಡಿ, ತಾಲೂಕು ಆಡಳಿತದಲ್ಲಿ ಅವ್ಯಾಹತವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಭಷ್ಟಾಚಾರದಲ್ಲಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಅಧಿಕಾರಿಗಳ ಮೇಲೆ ಕ್ರಮ ಇಲ್ಲ. ಈ ತಾಲೂಕಿನಲ್ಲಿ ನಿರಂತರ ಲೋಕಾಯುಕ್ತ ದಾಳಿ ನಡೆಯುತ್ತಿರುವುದು ಇಲ್ಲಿನ ಭ್ರಷ್ಟಾಚಾರ ಅಪರಿಮಿವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಸರ್ಕಾರ ಹಾನಗಲ್ಲ ತಾಲೂಕಿನ ಮಟ್ಟಿಗಾದರೂ ಭ್ರಷ್ಟಾಚಾರ ನಿರ್ಮೂಲನೆ ಗ್ಯಾರಂಟಿ ಕೊಡಲಿ ಎಂದರು. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಆಂಬ್ಯುಲೆನ್ಸ್ ಇಲ್ಲ. ರಸ್ತೆ ಗುಂಡಿ ಮುಚ್ಚುವ ಗ್ಯಾರಂಟಿ ಇಲ್ಲ. ಜಂಗಲ್ ಕಟಾವ್ ಆಗಿಲ್ಲ, ವಿದ್ಯುತ್ ಗ್ಯಾರಂಟಿ ಇಲ್ಲ. ಗಾಂಜಾ ಅಫೀಮು ನಿಯಂತ್ರಣವಿಲ್ಲ. ಶಾಲೆಗಳಲ್ಲಿ ಉತ್ತಮ ಶೌಚಾಲಯವಿಲ್ಲ, ಕುಡಿಯುವ ನೀರಿಲ್ಲ. ಮೂಲಭೂತ ಸೌಕರ್ಯಗಳಿಲ್ಲ. ತಾಲೂಕಿಗೆ ಸುರಕ್ಷಿತ ಜೀವನದ ಗ್ಯಾರಂಟಿ ಕೊಡಬೇಕಾಗಿದೆ. ತಾಲೂಕಿನಲ್ಲಿ ಬಸ್‌ಗಳನ್ನು ಸರಿಯಾಗಿ ಓಡಿಸುತ್ತಿಲ್ಲ. ರೈತರಿಗಾಗಿ ಹಾನಗಲ್ಲ ತಾಲೂಕಿನಲ್ಲಿ ಒಂದು ಗೊವಿನಜೋಳ ಖರೀದಿ ಕೇಂದ್ರ ತೆರೆಯಲು ಇಲ್ಲಿನ ಶಾಸಕರು ಮುಂದಾಗಲಿಲ್ಲ. ಹಾನಗಲ್ಲ ತಾಲೂಕಿನಲ್ಲಿ ದಿ.ಸಿ.ಎಂ.ಉದಾಸಿ ಹಾಗೂ ಮನೋಹರ ತಹಶೀಲ್ದಾರರ ಕಾಲದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಬೇಕಾಗಿದೆಯೇ ಹೊರತು ಆ ನಂತರದಲ್ಲಿ ತಾಲೂಕು ಅಭಿವೃದ್ಧಿ ಶೂನ್ಯವಾಗಿದೆ ಎಂದು ಆರೋಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಯಿ ಮಂದಿರದ ಅವ್ಯವಹಾರ: ತನಿಖೆಗೆ ಕಮಿಟಿ ರಚನೆ
ಹಂಪಿಯ ಗತ ವೈಭವ ಸಾರಿದ ಐತಿಹಾಸಿಕ ರಾಜಬೀದಿ