ವ್ಯಕ್ತಿತ್ವ ವಿಕಸನದಲ್ಲಿ ಪಠ್ಯಗಳಷ್ಟೇ ಪಠ್ಯೇತರ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ: ಪ್ರೊ.ಡಿ.ಎಸ್.ಗುರು

KannadaprabhaNewsNetwork | Published : Sep 19, 2024 1:57 AM

ಸಾರಾಂಶ

ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ವ್ಯಕ್ತಿಯನ್ನು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಒತ್ತಡಗಳಿಂದ ಹೊರತಂದು ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ವೃದ್ಧಿಸುತ್ತವೆ. ಅಲ್ಲದೇ ಆಧ್ಯಾತ್ಮಿಕ ಶಕ್ತಿಯೊಳಗೆ ಸೇರಲು ಸಹಕಾರಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಅಂತರಂಗ ಬಹಿರಂಗಗಳೆರಡರಲ್ಲೂ ಸೌಂದರ್ಯ ಅರಸಬೇಕಾದರೆ ವ್ಯಕ್ತಿಯು ಸಾಂಸ್ಕೃತಿಕ ಮತ್ತು ಕ್ರೀಡೆಗಳೆರಡರಲ್ಲೂ ತನ್ನನ್ನು ತೊಡಗಿಸಿಕೊಳ್ಳಬೇಕು. ಸಧೃಡ ದೇಹದಲ್ಲಿ ಮಾತ್ರ ಸದೃಢ ಮನಸ್ಸು ಇರಲು ಸಾಧ್ಯ ಎಂಬ ವಿವೇಕಾನಂದರ ನುಡಿಯಂತೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಪಠ್ಯಗಳಷ್ಟೇ ಪಠ್ಯೇತರ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಡಿ.ಎಸ್. ಗುರು ಅವರು ಹೇಳಿದರು.

ನಗರದ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ನಾತಕ ವಿಭಾಗದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ವ್ಯಕ್ತಿಯನ್ನು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಒತ್ತಡಗಳಿಂದ ಹೊರತಂದು ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ವೃದ್ಧಿಸುತ್ತವೆ. ಅಲ್ಲದೇ ಆಧ್ಯಾತ್ಮಿಕ ಶಕ್ತಿಯೊಳಗೆ ಸೇರಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಯೊಳಗಿನ ಪ್ರತಿಭಾ ಸಾಮರ್ಥ್ಯವನ್ನು ಗುರುತಿಸಿ, ಗೌರವಿಸಿ ಅದನ್ನು ಉದ್ದೀಪನಗೊಳಿಸಿ ಬೆಳೆಸುವ ಮಹತ್ಕಾರ್ಯವನ್ನು ಜೆಎಸ್ಎಸ್ ಕಾಲೇಜು ಈ ವೇದಿಕೆಗಳ ಮೂಲಕ ಮಾಡುತ್ತಿರುವುದು ಅಭಿನಂದನೀಯ ಎಂದರು.

ವಿಜ್ಞಾನ ಬೆಳೆದಂತೆಲ್ಲ ಸಾಂಸ್ಕೃತಿಕ ಪ್ರಜ್ಞೆ ಕಡಿಮೆಯಾಗುತ್ತಿದೆ ಎಂಬ ಮಾತಿದೆ. ವಿವಿಧ ಸಂಸ್ಕೃತಿಗಳಿರುವ ನಮ್ಮಲ್ಲಿ ಒಳಗೊಳ್ಳುವಿಕೆಯ ಸಂಸ್ಕೃತಿಯ ಅಗತ್ಯವಿದೆ. ಭಿನ್ನ ಸಂಸ್ಕೃತಿಗಳಲ್ಲಿ ಏಕತೆಯನ್ನು ಕಾಣುವ ಮನೋಭಾವವನ್ನು ಹಾಗೂ ಸಹೋದರತ್ವ, ಪ್ರೀತಿ, ವಿಶ್ವಾಸ, ಹೊಂದಾಣಿಕೆ, ಸಂಬಂಧಗಳ ಮೌಲ್ಯವನ್ನು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ತಿಳಿಸಿಕೊಡುತ್ತವೆ ಎಂದರು.

ವಿದ್ಯಾರ್ಥಿಗಳಲ್ಲಿ ಜ್ಞಾನ ಮಾತ್ರವಿದ್ದರೆ ಸಾಲದು, ಸುಜ್ಞಾನವಿರಬೇಕು. ಇದಕ್ಕೆ ಉದಾಹರಣೆ ಎಂಬಂತೆ ತಂತ್ರಜ್ಞಾನವನ್ನು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾಗುವಂತೆ ಬಳಸಿಕೊಳ್ಳಬೇಕು ಎಂದರು.

ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ಸಹಾಯಕ ನಿರ್ದೇಶಕ ಬಿ.ಡಿ. ಕಾಂತರಾಜ್ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ. ಆಸಕ್ತಿಯಿದ್ದಾಗ ಮಾತ್ರ ಗ್ರಹಿಕೆ ಹೆಚ್ಚಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಸಾಮರ್ಥ್ಯ ಒಗ್ಗೂಡಿಸಿಕೊಂಡು ಕಲಿಕೆ ಮತ್ತು ಗಳಿಕೆ ಮಾಡಿಕೊಂಡು ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಪ್ರಭು ಮಾತನಾಡಿ, ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಉತ್ತಮ ವೇದಿಕೆಯಾಗಿದೆ. ನಮ್ಮ ಸಂಸ್ಕೃತಿಯ ಆಚಾರ-ವಿಚಾರ, ಮನರಂಜನೆಯನ್ನು ನಿಮ್ಮ ಮೂಲಕ ಈ ವೇದಿಕೆಗಳು ಜೀವಂತಗೊಳಿಸಲಿ. ಮರೆಯಾಗುತ್ತಿರುವ ಜನಪದ ಕಲೆ, ಸಾಹಿತ್ಯ ಮತ್ತು ಕ್ರೀಡೆಯನ್ನು ಸಂರಕ್ಷಿಸುವ ಕೆಲಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ವ್ಯಕ್ತಿತ್ವ ವಿಕಸನ, ನಾಯಕತ್ವದ ಗುಣ, ವಾಕ್ ಚಾತುರ್ಯ ಮತ್ತು ಶಿಸ್ತು ಬೆಳೆಸಲು ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಅಸ್ತಿತ್ವಕ್ಕೆ ಬಂದಿವೆ. ಇದರೊಂದಿಗೆ ಎನ್ಎಸ್ಎಸ್, ಎಸ್.ಸಿ.ಸಿ, ರೇಂಜರ್ ಆ್ಯಂಡ್ ರೋವರ್ ಮತ್ತು ರೆಡ್ ಕ್ರಾಸ್ ಮೊದಲಾದವುಗಳು ಇವೆ ಎಂದರು.

ಕ್ರೀಡಾ ಚಟುವಟಿಕೆಗಳು ಶಿಸ್ತು, ಸಂಯಮ, ಸಮಯ ಪ್ರಜ್ಞೆ ಮತ್ತು ಸೋಲನ್ನು ಗೌರವಯುತವಾಗಿ ಸ್ವೀಕರಿಸುವ ಗುಣ ಕಲಿಸಿಕೊಡುತ್ತವೆ. ಬದುಕಿನಲ್ಲಿ ಕನಸು, ಬಯಕೆ ಮತ್ತು ಛಲವಿದ್ದರೆ ಏನನ್ನಾದರೂ ಸಾಧಿಸಬಹುದೆಂಬ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಯಶಸ್ಸು ಸುಲಭವಾಗಿ ಯಾರಿಗೂ ದೊರೆಯುವುದಿಲ್ಲ. ಅದಕ್ಕೆ ಇಚ್ಛಾಶಕ್ತಿ, ಪರಿಶ್ರಮ, ಕೆಲಸದಲ್ಲಿ ಬದ್ಧತೆ ಮತ್ತು ಸತತ ಪ್ರಯತ್ನ ಇರಬೇಕು. ಇರುವ ವ್ಯವಸ್ಥೆಯನ್ನೇ ಸದುಪಯೋಗ ಪಡಿಸಿಕೊಂಡ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಕೇರಳದ ಮುನ್ನಾರಿನ ಶ್ರೀನಾಥ್ ಅವರ ಸಾಧನೆಯನ್ನು ಪ್ರಸ್ಥಾಪಿಸಿದರು.

500 ರು. ಕೂಲಿ ಕೆಲಸ ಮಾಡುತಿದ್ದ ಅವರು ಬಿಡುವಿನ ವೇಳೆಯಲ್ಲಿ ಸ್ಮಾರ್ಟ್ ಫೋನ್ ಬಳಸಿಕೊಂಡು ಐಎಎಸ್ ಮತ್ತು ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಮಾಹಿತಿ ಪಡೆದು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಇಂದು ಐಎಎಸ್ ಅಧಿಕಾರಿ ಆಗಿದ್ದಾರೆ ಎಂದರು.

ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಸಿ.ಆರ್. ಮಧುಸೂದನ್, ಕ್ರೀಡಾ ವೇದಿಕೆ ಸಂಚಾಲಕ ಎಂ. ಕಾರ್ತಿಕ್ ಇದ್ದರು. ಕ್ಷೀರಾ ಮತ್ತು ಅದಿತಿ ಹೆಗಡೆ ಪ್ರಾರ್ಥಿಸಿದರು. ಸಂತೃಪ್ತಿ ಸ್ವಾಗತಿಸಿದರು. ಎಸ್. ನಂದಿನಿ ನಿರೂಪಿಸಿದರು. ಸಿ.ಎಂ. ವಿನಯ್ ವಂದಿಸಿದರು.

Share this article