ಸುಚಿರಾಯು ಆಸ್ಪತ್ರೆಯಲ್ಲಿ ಯಕೃತ್ತು ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

KannadaprabhaNewsNetwork |  
Published : Sep 19, 2024, 01:57 AM IST
ಯಕೃತ್ತಿನ ಯಶಸ್ವಿ ಕಸಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ. | Kannada Prabha

ಸಾರಾಂಶ

ಹುಬ್ಬಳ್ಳಿಯಲ್ಲಿ ಮೊದಲ ಯಕೃತ್ತು ಕಸಿ ಶಸ್ತ್ರಚಿಕಿತ್ಸೆಯನ್ನು ಮಾಡಿರುವುದು ಈ ಭಾಗದ ಆರೋಗ್ಯ ಕ್ಷೇತ್ರದ ಬೆಳವಣಿಗೆಯನ್ನು ತೋರಿಸುತ್ತದೆ. ಉತ್ತರ ಕರ್ನಾಟಕ ಭಾಗದಲ್ಲೂ ಅಂಗಾಂಗ ಕಸಿಗೆ ಅವಕಾಶವಿದೆ ಎಂಬುದನ್ನು ಈ ಮೂಲಕ ಆಸ್ಪತ್ರೆ ತಿಳಿಸಿಕೊಟ್ಟಿದೆ.

ಹುಬ್ಬಳ್ಳಿ:

ಇಲ್ಲಿನ ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯಲ್ಲಿ ಮೊದಲ ಬಾರಿಗೆ 50 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ ಯಕೃತ್ತು ಕಸಿ ನಡೆಸಲಾಗಿದೆ. ಬರೋಬ್ಬರಿ 10 ಗಂಟೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ಯಕೃತ್ತು ಕಸಿ ಮಾಡಿದ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಾಧನೆ ಮಾಡಿದ ಉತ್ತರ ಕರ್ನಾಟಕದಲ್ಲಿ ಬೆಳಗಾವಿ ಕೆಎಲ್‌ಇ ಆಸ್ಪತ್ರೆಯ ನಂತರ 2ನೇ ಮತ್ತು ರಾಜ್ಯದ 5ನೇ ನಗರವಾಗಿ ಹುಬ್ಬಳ್ಳಿ ಹೊರಹೊಮ್ಮಿದೆ ಎಂದು ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸಕ ಡಾ. ಬಸಂತ್ ಮಹದೇವಪ್ಪ ಹೇಳಿದರು.

ಅಸ್ಪತ್ರೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 50 ವರ್ಷದ ರವಿ (ಹೆಸರು ಬದಲಿಸಲಾಗಿದೆ) ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ (ಎನ್‌ಎಎಫ್‌ಎಲ್‌ಡಿ) ಕಾರಣದಿಂದ ಉಂಟಾದ ಕೊನೆ ಹಂತದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು. ಜತೆಗೆ ಅಧಿಕ ರಕ್ತದೊತ್ತಡ ಹೊಂದಿದ್ದರು. ಹಲವು ವೈದ್ಯಕೀಯ ಚಿಕಿತ್ಸೆ ಪಡೆದರೂ ಅವರ ಸ್ಥಿತಿ ಹದಗೆಡುತ್ತಲೇ ಇತ್ತು. ಹೀಗಾಗಿ ಅವರ ಜೀವ ಉಳಿಸಲು ಯಕೃತ್ತಿನ ಕಸಿ ಅನಿವಾರ್ಯವಾಗಿತ್ತು.

ರವಿ 5 ತಿಂಗಳ ಹಿಂದೆ ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯಲ್ಲಿ ಕಸಿ ಶಸ್ತ್ರಚಿಕಿತ್ಸೆಗೆ ಒಳಪಡಲು ತಮ್ಮ ಹೆಸರು ನೋಂದಾಯಿಸಿದ್ದರು. ಆದರೆ, ಅವರಿಗೆ ಯಕೃತ್ತು ಅಂಗ ದಾನವಾಗಿ ಸಿಗುವುದೇ ದೊಡ್ಡ ಸವಾಲಾಗಿ, ಅವರು ದೀರ್ಘ ಕಾಲ ಕಾಯುವಂತಾಯಿತು. ಈ ವೇಳೆ ಆ.15ರಂದು 28 ವರ್ಷ ವಯಸ್ಸಿನಲ್ಲಿಯೇ ಸಾವಿಗೀಡಾದ ಯುವಕನ ಸಂಬಂಧಿಗಳು ಅಂಗಾಂಗ ದಾನಕ್ಕೆ ಅನುಮತಿ ನೀಡಿದ್ದರಿಂದ ರವಿಗೆ ಪಿತ್ತಜನಕಾಂಗ ದಾನ ಲಭ್ಯವಾಯಿತು ಎಂದರು.

ಆ. 15ರಂದು ರವಿಯನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಡೀ ತಂಡವು ಬೆಳಗಿನ ಜಾವ 3 ಗಂಟೆಗೆ ಕಸಿ ಶಸ್ತ್ರಚಿಕಿತ್ಸೆಯನ್ನು ಪ್ರಾರಂಭಿಸಿತು. 10 ಗಂಟೆ ನಿರಂತರ ಶಸ್ತ್ರಚಿಕಿತ್ಸೆ ಮರುದಿನ ಮಧ್ಯಾಹ್ನ 1ರ ವರೆಗೆ ಮುಂದುವರಿಯಿತು. ಅಂತಿಮವಾಗಿ ಯಾವುದೇ ತೊಡಕುಗಳಿಲ್ಲದೇ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯನ್ನು ಚೇತರಿಸಿಕೊಳ್ಳಲು ಐಸಿಯುಗೆ ವರ್ಗಾಯಿಸಲಾಯಿತು, ಬಳಿಕ ಅವರನ್ನು ಸೆ. 9ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದರು.

ಹುಬ್ಬಳ್ಳಿಯಲ್ಲಿ ಮೊದಲ ಯಕೃತ್ತು ಕಸಿ ಶಸ್ತ್ರಚಿಕಿತ್ಸೆಯನ್ನು ಮಾಡಿರುವುದು ಈ ಭಾಗದ ಆರೋಗ್ಯ ಕ್ಷೇತ್ರದ ಬೆಳವಣಿಗೆಯನ್ನು ತೋರಿಸುತ್ತದೆ. ನಮ್ಮ ವೈದ್ಯರ ತಂಡಗಳ ನಡುವಿನ ಸಮನ್ವಯ ಕೂಡ ಪ್ರಶಂಸನೀಯ. ಉತ್ತರ ಕರ್ನಾಟಕ ಭಾಗದಲ್ಲೂ ಅಂಗಾಂಗ ಕಸಿಗೆ ಅವಕಾಶವಿದೆ ಎಂಬುದನ್ನು ಈ ಮೂಲಕ ತಿಳಿಸಿಕೊಟ್ಟಂತಾಗಿದೆ ಎಂದರು.

ಈ ವೇಳೆ ಡಾ. ಸಂದೀಪ್ ಕುಂಬಾರ್, ಡಾ. ಸಂಜೀವ್ ಚಟ್ನಿ ಡಾ. ಜಯಪ್ರಭು ಉತ್ತೂರ್ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!