ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳು ಪ್ರತಿಭೆ ಅನಾವರಣಗೊಳಿಸುವುದರಿಂದ ಇದು ಭವಿಷ್ಯದಲ್ಲಿ ವಿದ್ಯಾರ್ಥಿಗಳ ಜೀವನಕ್ಕೂ ದಾರಿಯಾಗುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್.ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.ನಿಡ್ತ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಹಂಡ್ಲಿ ಕ್ಲಸ್ಟರ್ ಮಟ್ಟದ 2024-25ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ವ ಶಿಕ್ಷಣ ಯೋಜನೆ ಅನುಷ್ಠಾನಗೊಂಡ ಕಾಲದಿಂದ ಇಂದಿನ ವರೆಗೂ ಶಾಲಾ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ಪ್ರತಿಭಾ ಕಾರಂಜಿಯನ್ನು ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಶಾಲಾ ಶಿಕ್ಷಕರು ಮತ್ತು ಪೋಷಕರ ಪ್ರೋತ್ಸಾಹದಿಂದ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳು ಅನಾವರಣಗೊಳ್ಳುತ್ತಿದೆ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಬಿ.ಧರ್ಮಪ್ಪ ಮಾತನಾಡಿ, ಆಧುನಿಕತೆಯಿಂದ ಸಮಾಜ ಬದಲಾಗುತ್ತಿದ್ದರೂ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳು ಬದಲಾಗುವುದಿಲ್ಲ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ಮೂಲಕ ನಡೆಸುತ್ತಿರುವ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಪ್ರತಿಭೆ ಅನಾವರಣಗೊಳಿಸುವಂತೆ ಸಲಹೆ ನೀಡಿದರು.
ಹಂಡ್ಲಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ.ದಿನೇಶ್ ಪ್ರಾಸ್ತಾವಿಕ ಮಾತನಾಡಿ, ಶಿಕ್ಷಕರು, ಪೋಷಕರು ಮತ್ತು ಮಕ್ಕಳ ಮೂಲಕ ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಹಮ್ಮಿಕೊಳ್ಳುತ್ತಿದೆ. ಈ ಮೂಲಕ ಮಕ್ಕಳ ಪ್ರತಿಭೆಗಳು ಅನಾವರಣಗೊಳ್ಳುತ್ತಿವೆ. ಹಂಡ್ಲಿ ಕ್ಲಸ್ಟರ್ ಮಟ್ಟದಲ್ಲಿ ವಿವಿಧ ಶಾಲೆಗಳಿಂದ 27 ವೈಯಕ್ತಿಕ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದರು.ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಮನು ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್, ಗ್ರಾಮದ ಹಿರಿಯ ಮುಖಂಡ ಸುಬ್ಬಪ್ಪ ಮಾತನಾಡಿದರು.
ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ನೇತ್ರಾವತಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ರಾಜ್ಯ ಸಂಘದ ನಿರ್ದೇಶಕ ಸುರೇಶ್, ಗ್ರಾ.ಪಂ. ಸದಸ್ಯೆ ಹರೀಶ್, ಲತಾ ವೆಂಕಟೇಶ್, ತೀರ್ಥನಂದ್, ತಸ್ಲಿಮ್, ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ಕವಿತ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ್, ಶಾಲಾ ಪ್ರಭಾರಿ ಮುಖ್ಯ ಶಿಕ್ಷಕಿ ರತ್ನ, ಶಿಕ್ಷಕಿ ಸಾವಿತ್ರಿ ಮತ್ತಿತರರಿದ್ದರು. ಇಲಾಖೆ ವತಿಯಿಂದ ಜನಪ್ರತಿನಿಧಿಗಳು, ಸ್ಥಳೀಯ ಪ್ರಮುಖರನ್ನು ಸನ್ಮಾನಿಸಲಾಯಿತು.