ಅತಿಯಾದ ತಾಪಮಾನ: ಉಷ್ಣತೆಗೆ ಬಸವಳಿದ ಹಿರಿಯೂರು ಜನ

KannadaprabhaNewsNetwork |  
Published : May 05, 2026, 02:15 AM IST
ಚಿತ್ರ 3 | Kannada Prabha

ಸಾರಾಂಶ

ಹಿರಿಯೂರು ನಗರದ ಪ್ರಧಾನ ರಸ್ತೆಯಲ್ಲಿ ಬಿಸಿಲಿನ ಹೆಚ್ಚಳದಿಂದಾಗಿ ಜನ ಮತ್ತು ವಾಹನ ಸಂಚಾರ ಗಣನೀಯವಾಗಿ ಕಡಿಮೆಯಾಗಿರುವುದು.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಬಿಸಿಲು ಭೋರ್ಗರೆಯುತ್ತಿದೆ. ರಸ್ತೆಗಳು ಕಾದ ಬಾಣಲೆಯಾಗುತ್ತಿದ್ದು ನಗರ ಸೇರಿದಂತೆ ಹಳ್ಳಿಗಳ ಕಡೆಯೂ ಜನ ಹೊರಬರಲು ಯೋಚಿಸುತ್ತಿದ್ದಾರೆ. ಮದ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ಜನ ಸಂಚಾರ ವಾಹನ ಸಂಚಾರದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪಶು ಪಕ್ಷಿಗಳು ಮರಗಳ ನೆರಳಿನ ಆಶ್ರಯ ಬಯಸುತ್ತಿವೆ. ತಾಲೂಕಿನ ಗರಿಷ್ಠ ತಾಪಮಾನ ಏಪ್ರಿಲ್ ನಲ್ಲಿ ಒಂದೆರಡು ದಿನ 40 ಡಿಗ್ರಿ ಸೆಲ್ಸಿಯಸ್ ತನಕ ತಲುಪಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಮಾರ್ಚ್‌ನಲ್ಲಿ ಹಿರಿಯೂರು ತಾಲೂಕಿನ ಗರಿಷ್ಠ ತಾಪಮಾನ 34.9 ಡಿಗ್ರಿ ಸೆಲ್ಸಿಯಸ್ ಆಗಿದ್ದು ನಂತರದ ದಿನಗಳಲ್ಲಿ 37.4 ಡಿಗ್ರಿ ಸೆಲ್ಸಿಯಸ್ ವರೆಗೂ ತಲುಪಿತ್ತು. ಆನಂತರ ಏಪ್ರಿಲ್‌ನಲ್ಲಿ ಗಣನೀಯ ತಾಪಮಾನ ಏರಿಕೆ ಕಂಡು ಬಂದಿದ್ದು ಸರಾಸರಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ತನಕ ತಲುಪಿತು. ಅಲ್ಲಿಗೆ ಈ ವ್ಯಾಪ್ತಿಯ ಸಾಮಾನ್ಯ ತಾಪಮಾನಕ್ಕಿಂತ 4 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಯಿತು. ಏಪ್ರಿಲ್‌ನಲ್ಲಿ ಸುಮಾರು 20 ದಿನಗಳಿಗೂ ಹೆಚ್ಚು ಕಾಲ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹಾಗಾಗಿ ವಾತಾವರಣದಲ್ಲಿ ತೀವ್ರ ಶಾಖ ಒತ್ತಡದ ಪರಿಸ್ಥಿತಿಗಳು ಕಂಡು ಬರುತ್ತಿವೆ. ಮಾರ್ಚ್‌ನಿಂದ ಏಪ್ರಿಲ್ ವರೆಗೆ ತಾಪಮಾನದಲ್ಲಿ ಸ್ಥಿರವಾದ ಏರಿಕೆ ಕಂಡು ಬಂದಿದೆ. ಇದರಿಂದಾಗಿ ಮಣ್ಣಿನ ತೇವಾಂಶದ ತ್ವರಿತ ಕ್ಷೀಣತೆ ಉಂಟಾಗಿ ತೇವಾಂಶದ ಮಟ್ಟಗಳು ನಿರ್ಣಾಯಕ ಮಿತಿಗಳಿಗಿಂತ ಕಡಿಮೆಯಾಗುವ ಸಾಧ್ಯತೆಯಿದೆ. ಮುಖ್ಯವಾಗಿ ರೈತರ ಬದುಕಿಗೆ ಹೊಡೆತ ಬೀಳುತ್ತಿದ್ದು ಕಡಲೆಕಾಯಿ, ಮೆಕ್ಕೆಜೋಳ ಮತ್ತು ದ್ವಿದಳ ಧಾನ್ಯಗಳಂತಹ ಪ್ರಮುಖ ಬೆಳೆಗಳ ಸಂತಾನೋತ್ಪತ್ತಿ ಹಂತಗಳಲ್ಲಿ ಉಷ್ಣ ಒತ್ತಡ ಕಂಡುಬರುತ್ತಿದೆ. ಇದರಿಂದಾಗಿ ಧಾನ್ಯ ತುಂಬುವಿಕೆಯ ಹಂತದಲ್ಲಿ ಶೇ.10 ರಿಂದ 20ರಷ್ಟು ಇಳುವರಿ ಕಡಿತಕ್ಕೆ ಕಾರಣವಾಗಲಿದೆ ಎನ್ನಲಾಗುತ್ತಿದೆ. ಟೊಮೊಟೊ ಮತ್ತು ಮೆಣಸಿನಕಾಯಿಯಂತಹ ತೋಟಗಾರಿಕೆ ಬೆಳೆಗಳು ಸಹ ದುರ್ಬಲವಾಗಿದ್ದು ಹೆಚ್ಚಿನ ತಾಪಮಾನ ಮತ್ತು ತೇವಾಂಶದ ಒತ್ತಡದಿಂದ ಶೇ.20 ರಿಂದ 30ರಷ್ಟು ಹೂ ಉದುರುವುದು ಮತ್ತು ಹಾನಿಯಾಗಲಿದೆ. ರೈತರು ಇಂತಹ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯಲ್ಲಿ ಬೆಳೆ ಉತ್ಪಾದಕತೆಯನ್ನು ಉಳಿಸಿಕೊಳ್ಳಲು ಪರಿಣಾಮಕಾರಿಯಾದ ನೀರಾವರಿ ವೇಳಾಪಟ್ಟಿ, ಹಸಿ ಗೊಬ್ಬರ ಹಾಕುವಿಕೆ ಹಾಗೂ ಶಾಖದ ಒತ್ತಡ ತಗ್ಗಿಸುವ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ ಕೃಷಿ ಮತ್ತು ಹವಾಮಾನ ಇಲಾಖೆ ಅಧಿಕಾರಿಗಳು. ನಗರ ಭಾಗದಲ್ಲಿ ನೂರಾರು ಕಾಫಿ ಟೀ ಹೋಟೆಲ್‌ಗಳ ವ್ಯಾಪಾರ ಕಳೆದ ಒಂದು ತಿಂಗಳಿನಿಂದ ಕುಸಿದಿದ್ದು ಬಿಸಿಲಿನ ತಾಪಕ್ಕೆ ಜನರು ಜ್ಯೂಸ್ ಅಂಗಡಿಗಳ ತುಂಬಾ ತುಂಬಿಕೊಳ್ಳುತ್ತಿದ್ದಾರೆ.

ನಗರದ ಖ್ಯಾತ ಚರ್ಮ ವೈದ್ಯರಾದ ಡಾ.ತಿಪ್ಪೇಸ್ವಾಮಿಯವರು ಪ್ರತಿಕ್ರಿಯೆ ನೀಡಿ ದಿನೇ ದಿನೇ ತಾಪಮಾನ ಏರುತ್ತಿರುವುದರಿಂದ ಜನರಲ್ಲಿ ಅಲರ್ಜಿ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿವೆ. ಅತಿಯಾದ ಬಿಸಿಲಿನಿಂದ ಸನ್ ಬರ್ನ್, ಪಿಎಲ್ಎ ಹಾಗೂ ಮುಖದಲ್ಲಿ ಬಟರ್ ಫ್ಲೈ ಮಾದರಿಯಲ್ಲಿ ದದ್ದುಗಳು ಕಂಡು ಬರುತ್ತವೆ. ಈ ದದ್ದು ಸೂರ್ಯನ ಶಾಖಕ್ಕೆ ಸಿಕ್ಕಾಗ ತೀವ್ರಗೊಳ್ಳುತ್ತದೆ. ಮುಖ್ಯವಾಗಿ ಅತಿಯಾದ ಸೂರ್ಯನ ತಾಪಮಾನದಿಂದ ಚರ್ಮ ಸಂಬಂಧಿತ ಕಾಯಿಲೆಗಳ ಪ್ರಮಾಣ ಹೆಚ್ಚುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರದ ಯೋಜನೆಗಳು ಸದ್ಬಳಕೆಯಾಗಲಿ: ಸಚಿವ ಡಾ. ಎಚ್.ಕೆ. ಪಾಟೀಲ
ಉಪಚುನಾವಣೆಯಲ್ಲಿ ಗೆಲುವು, ಕೈ ಕಾರ್ಯಕರ್ತರಿಂದ ವಿಜಯೋತ್ಸವ