ನಾರಾಯಣ ಹೆಗಡೆ
ಜಿಲ್ಲೆಯ ಮಾವು ಬೆಳೆಗಾರರು ಪ್ರತಿವರ್ಷ ಹವಾಮಾನ ವೈಪರಿತ್ಯ, ಕೀಟ ಹಾಗೂ ರೋಗಬಾಧೆ, ಅಧಿಕ ಖರ್ಚು ಕಡಿಮೆ ಆದಾಯದಿಂದ ಒಂದಿಲ್ಲೊಂದು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಪ್ರಸಕ್ತ ವರ್ಷ ಮಾವಿನ ತೋಪುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂವುಗಳು ಕಂಡು ಬಂದಿದ್ದು, ಕೆಲವು ಕಡೆಗಳಲ್ಲಿ ಈಗಾಗಲೇ ಮಿಡಿಗಾಯಿ ಕಟ್ಟಿದೆ. ಜನವರಿ ಅಂತ್ಯದೊಳಗೆ ಚಳಿ ಮುಗಿದು ಬಿಸಿಲು ಬಿದ್ದರೆ ಕಾಯಿ ಕಟ್ಟುವ ಪ್ರಮಾಣ ಜಾಸ್ತಿಯಿರುತ್ತದೆ. ಆದರೆ, ಈ ಸಲ ಚಳಿ ಹೆಚ್ಚು ಬಿದ್ದಿರುವುದು, ಮಂಜು ಬೀಳುತ್ತಿರುವುದು ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ಈ ಬಾರಿ ಮಾವಿನ ಗಿಡಗಳು ಹೂಗಳಿಂದ ತುಂಬಿ ತುಳುಕಾಡುತ್ತಿದೆ. ಮಾವಿನ ತೋಪುಗಳು ಹೂವುಗಳಿಂದ ಕಂಗೊಳಿಸುತ್ತಿವೆ. ಇದು ಸಹಜವಾಗಿಯೇ ಮಾವು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಆದರೆ, ಚಳಿ ಹೆಚ್ಚಾಗಿ ಹೂವುಗಳು ಕರಗುತ್ತಿರುವುದು ಜಿಲ್ಲೆಯಲ್ಲಿ ಕಂಡು ಬಂದಿದೆ. ಹೀಗಾಗಿ ಈ ವರ್ಷ ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರಿಗೆ ಹವಾಮಾನ ವೈಪರಿತ್ಯ ಸಂಕಷ್ಟ ತಂದೊಡ್ಡಿದೆ. ಇನ್ನೂ ಶಿಗ್ಗಾಂವಿ, ಹಾನಗಲ್ಲ ಭಾಗದಲ್ಲಿ ಕೆಲವು ಮಾವಿನ ತೋಪುಗಳಲ್ಲಿ ಮರಗಳು ಕಾಯಿಕಟ್ಟುವ ಹಂತದಲ್ಲಿದ್ದು, ಬಿಸಿಲಿನ ತೀವ್ರತೆ ಹೆಚ್ಚಾಗಿ ಕಾಯಿಗಳು ಉದುರಿ ಬೀಳುತ್ತಿರುವುದು ಮಾವು ಬೆಳೆಗಾರರಿಗೆ ತೆಲೆನೋವಾಗಿ ಪರಿಣಮಿಸಿದೆ. ಮಾವು ಕೃಷಿ ಹವಾಮಾನದೊಂದಿಗೆ ಆಡುವ ಜೂಜಾಟವಾಗಿದ್ದು, ಹೂವುಗಳು, ಕಾಯಿಗಳು ಉದುರುವುದು, ರೋಗಬಾಧೆ ನಿಯಂತ್ರಣಕ್ಕೆ ಜಿಲ್ಲೆಯ ರೈತರು ಹತ್ತಾರು ಸಾವಿರ ರು. ಮೊತ್ತದ ಔಷಧಗಳನ್ನು ಸಿಂಪಡಿಸುವುದು ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.ಜಿಲ್ಲೆಯಲ್ಲಿ 5033 ಹೆಕ್ಟೇರ್ ಪ್ರದೇಶದಲ್ಲಿ ಮಾವು: ಜಿಲ್ಲೆಯ ಮಾವು ಬೆಳೆಗಾರರು ಹವಾಮಾನ ವೈಪರೀತ್ಯ, ರೋಗಬಾಧೆ, ಮಾರುಕಟ್ಟೆ ಅವ್ಯವಸ್ಥೆ ಹಾಗೂ ಅಧಿಕ ಖರ್ಚು ಕಡಿಮೆ ಆದಾಯದಿಂದ ಬೇಸತ್ತು ವರ್ಷದಿಂದ ವರ್ಷಕ್ಕೆ ಮಾವು ಕೃಷಿಯಿಂದಲೇ ವಿಮುಖರಾಗಿ ಪರ್ಯಾಯವಾಗಿ ಅಡಕೆ, ಶುಂಠಿ ಬೆಳೆಗಳತ್ತ ಚಿತ್ತ ಹರಿಸುತ್ತಿದ್ದಾರೆ. 2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 5509 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿತ್ತು. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಮಾವು 5033 ಹೆಕ್ಟೇರ್ ಪ್ರದೇಶಕ್ಕೆ ಬಂದು ನಿಂತಿದ್ದು, ವರ್ಷದಿಂದ ವರ್ಷಕ್ಕೆ ಮಾವು ಕೃಷಿ ಕುಂಠಿತಗೊಂಡಿರುವುದು ಆತಂಕ ಮೂಡಿಸಿದೆ.ಹಾನಗಲ್ಲ, ಶಿಗ್ಗಾಂವಿಯಲ್ಲಿ ಹೆಚ್ಚು ಪ್ರದೇಶ: ಜಿಲ್ಲೆಯ ಮಾವು ಕೃಷಿಯಲ್ಲಿ ಹಾನಗಲ್ಲ ತಾಲೂಕು 3348 ಹೆಕ್ಟೇರ್ ಪ್ರದೇಶದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ನಂತರದಲ್ಲಿ ಶಿಗ್ಗಾಂವಿ ತಾಲೂಕು 1386 ಹೆಕ್ಟೇರ್ ಇದೆ. ಬ್ಯಾಡಗಿ ಹಾಗೂ ಹಾವೇರಿ ತಾಲೂಕು ತಲಾ 100 ಹೆಕ್ಟೇರ್ ಪ್ರದೇಶದೊಂದಿಗೆ ಮೂರನೇ ಸ್ಥಾನದಲ್ಲಿವೆ. ಪ್ರಸಕ್ತ ವರ್ಷ ಜಿಲ್ಲೆಯ ಮಾವಿನ ತೋಪುಗಳಲ್ಲಿ ಹೂವುಗಳು ಹೆಚ್ಚಾಗಿ ಕಂಡು ಬಂದಿದ್ದು, ಚಳಿ, ಮಂಜಿನ ಪ್ರಮಾಣ ಹೆಚ್ಚಾಗಿ ಹೂವುಗಳು ಕರಗಿ ಕಪ್ಪಾಗುತ್ತಿವೆ. ಹೀಗಾಗಿ ಜಿಲ್ಲೆಯಲ್ಲಿ ಈ ಬಾರಿ ಮಾವು ಫಸಲು ಕುಂಠಿತಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಮಾವು ಬೆಳೆಗಾರ ಅಬ್ದುಲ್ ಸುಖೂರ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ 5033 ಹೆಕ್ಟೇರ್ ಪ್ರದೇಶದಲ್ಲಿ ಮಾವು ಪ್ರದೇಶವಿದೆ. ಹಾನಗಲ್ಲ ತಾಲೂಕಲ್ಲಿ 3324,ಶಿಗ್ಗಾಂವಿ 1370, ಬ್ಯಾಡಗಿ 95, ಹಾವೇರಿ 90, ರಾಣಿಬೆನ್ನೂರ 76, ಸವಣೂರ 34, ಹಿರೇಕೆರೂರು 35,ರಟ್ಟೀಹಳ್ಳಿ 20 ಹೆಕ್ಟೇರ್ ಮಾವು ಪ್ರದೇಶವಿದೆ.ಜಿಲ್ಲೆಯಲ್ಲಿ ಈ ಬಾರಿ ಮಾವಿನ ಮರಗಳಲ್ಲಿ ಹೂವುಗಳ ಪ್ರಮಾಣ ಅಧಿಕವಾಗಿದೆ. ಆದರೆ ಜನವರಿಯಲ್ಲಿ ಚಳಿ ಹಾಗೂ ಇಬ್ಬನಿ ಹೆಚ್ಚಾಗಿದ್ದರಿಂದ ಮಾವಿನ ಮರದಲ್ಲಿದ್ದ ಹೂವುಗಳು ಕರಗುತ್ತಿರುವುದು ಕಂಡು ಬಂದಿದೆ. ಕೆಲ ದಿನಗಳಿಂದ ವಾತಾವರಣ ಸರಿಯಾಗಿದ್ದು, ಉತ್ತಮ ಫಸಲು ನಿರೀಕ್ಷಿಸಲಾಗಿದೆ. ರೋಗಬಾಧೆ, ಕೀಟಗಳ ನಿರ್ವಹಣೆ ಕುರಿತು ಭಿತ್ತಿಪತ್ರಗಳ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ರೋಗಬಾಧೆ ಕಾಣಿಸಿಕೊಂಡರೆ ತೋಟಗಾರಿಕಾ ಇಲಾಖೆ ತಜ್ಞರ ಸಲಹೆಯಂತೆ ರೈತರು ಔಷಧ ಸಿಂಪಡಣೆ ಮಾಡಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್.ಎಚ್. ಬರಗಿಮಠ ಹೇಳಿದರು.