ಪಾಂಡವಪುರ ಸಂಭ್ರಮಕ್ಕೆ ವಿಜೃಂಭಣೆಯ ಚಾಲನೆ

KannadaprabhaNewsNetwork | Published : Dec 23, 2023 1:46 AM

ಸಾರಾಂಶ

ಪ್ರತಿಭೆಗಳನ್ನು ಉತ್ತೇಜಿಸುವ, ಸಾಧಕರನ್ನು ಗೌರವಿಸುವ ಮಾದರಿಯೇ ಈ ಪಾಂಡವಪುರ ಸಂಭ್ರಮ: ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮೆಚ್ಚುಗೆ ನುಡಿ, ಸ್ಥಳೀಯ ಪ್ರತಿಭೆಗಳು, ಸಾಧಕರು, ಪ್ರಗತಿಪರ ರೈತರು ಸೇರಿದಂತೆ ಹಲವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ.

ಕನ್ನಡಪ್ರಭ ವಾರ್ತೆ ಪಾಂಡವಪುರಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶುಕ್ರವಾರ ಪಾಂಡವಪುರ ಸಂಭ್ರಮ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.

ಸ್ಥಳೀಯ ಪ್ರತಿಭೆಗಳು, ಸಾಧಕರು, ಪ್ರಗತಿಪರ ರೈತರು ಸೇರಿದಂತೆ ಹಲವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮಕ್ಕೆ ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಪಾಂಡವಪುರ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು, ಪ್ರತಿಭೆಗಳನ್ನು ಉತ್ತೇಜಿಸುವ, ಸಹಕಾರಿಗಳು, ಪ್ರಗತಿಪರ ರೈತರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಮಾದರಿ ಕಾರ್ಯಕ್ರಮ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಂಡವಪುರ ನೆಲಕ್ಕೆ ಅದರದ್ದೇ ಆದ ಇತಿಹಾಸವಿದೆ. ಸಾಂಸ್ಕೃತಿಕವಾಗಿ,‌ ಶೈಕ್ಷಣಿಕವಾಗಿ, ಸಾಹಿತ್ಯಾತ್ಮಕವಾಗಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಕೃಷಿ ಕ್ಷೇತ್ರದಲ್ಲೂ ಆಧುನಿಕ ಬೆಳೆ ಪದ್ಧತಿಯನ್ನು ಅನುಸರಿಸುತ್ತಾ ಅದ್ಭುತ ಸಾಧನೆ ಮಾಡಿರುವ ಪ್ರಗತಿಪರ ರೈತರು ಈ ನೆಲದಲ್ಲಿದ್ದಾರೆ. ಸ್ಥಳೀಯವಾಗಿ ಅನೇಕ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವಂತ ಇಂತಹ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕು. ಅದಕ್ಕಾಗಿ ಪಾಂಡವಪುರದಲ್ಲಿ ನಡೆಯುವ ಇಂತಹ ಜನ ಮುಖಿ ಕಾರ್ಯಕ್ರಮಕ್ಕೆ ಸಹಕಾರಿಯಾಗಿ ನಿಂತಿದ್ದಾಗಿ ತಿಳಿಸಿದರು.

ಸಿ.ಎಸ್. ಪುಟ್ಟರಾಜು ಅವರ ಪತ್ನಿ ನಾಗಮ್ಮ ಪುಟ್ಟರಾಜು, ಪುತ್ರ ಸಿ.ಎಸ್. ಶಿವರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಯ ಉಪಾಧ್ಯಕ್ಷ ಶಿವಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪಾಂಡವಪುರ ಸಂಭ್ರಮ ಕಾರ್ಯಕ್ರಮದಲ್ಲಿ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಶೈಲಿಯ ವಿಶಿಷ್ಟ ಬಗೆಯ ಖಾದ್ಯಗಳು, ಗ್ರಾಮೀಣ ಸೊಗಡಿನ ವಿಶಿಷ್ಟ ತಿಂಡಿ ತಿನಿಸುಗಳು ಕಾರ್ಯಕ್ರಮಕ್ಕೆ ಬಂದಿದ್ದ ಸಾರ್ವಜನಿಕರನ್ನು ಆಕರ್ಷಿಸಿದವು. ಮರೆತಿದ್ದ ಸಾವಿರಾರು ಜನರು ತಮಗಿಷ್ಟವಾದ ಆಹಾರವನ್ನು ಸೇವಿಸುವ ಮೂಲಕ ಸಂಭ್ರಮಿಸಿದರು.

ಫ್ಯಾಶನ್ ಶೋ, ಜಾನಪದ ನೃತ್ಯ ಭರತನಾಟ್ಯ, ಮಕ್ಕಳಿಗೆ ವಿವಿಧ ವೇಷಭೂಷಣ ಸ್ಪರ್ಧೆ, ಸಂಗೀತ ಸಂಜೆ ಮಿಮಿಕ್ರಿ ಕಾರ್ಯಕ್ರಮಗಳು ಜನಮನ ಸೂರೆಗೊಂಡವು. ಪಾಂಡವಪುರ ಪ್ರತಿಭೆಗಳಿಂದ ಮನರಂಜನ ಕಾರ್ಯಕ್ರಮಗಳು ನಡೆದು ಎಲ್ಲರನ್ನೂ ರಂಜಿಸಿದವು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ, ಹಲವರಿಗೆ ಅಭಿನಂದನೆ:

ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ಹುಲಿಕೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಡಿ.ಎ.ಶಯನ, ರಾಗಿಮುದ್ದನಹಳ್ಳಿ ಗುಲಾಬಿ ವಿದ್ಯಾನಿಕೇತನ ಶಾಲೆಯ ಶೀತಲ್ , ಜಿಎಚ್ ಎಸ್ ನ ಶೀಲಾವತಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ಚಿನಕುರಳಿ ಎಸ್ ಟಿಜಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದಿಂದ ಟಿ.ಎಸ್ .ಲಕ್ಷ್ಮಿ, ಪಾಂಡವಪುರ ಪಿಇಎಸ್ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಎಂ.ಪ್ರಕೃತಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ಸುಮಂತ್ ಅವರನ್ನು ಅಭಿನಂದಿಸಲಾಯಿತು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹರಿಪ್ರಸಾದ್ ವಾಲಿಬಾಲ್, ವರುಣ್ ಖೋ ಖೋ , ಲಿಖಿತ ಟೆನಿಕ್ಯಾಟ್, ಶ್ರೇಯ, ಹರ್ಷಿತ ಬಾಸ್ಕೆಟ್ ಬಾಲ್ , ಧ್ರುವನ್ ಗೌಡ ಸ್ಕೇಟಿಂಗ್, ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ತಾಲೂಕಿನ ಬೇವಿನಕುಪ್ಪೆ ಗ್ರಾಮದ ಗಾಯಕ ನಾಗಲಿಂಗೇಗೌಡ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಟ್ಟೇರಿಯ ಬಿ.ನಾರಾಯಣಗೌಡ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

Share this article