ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ: ಎಲ್ಲೆಡೆ ದಸರಾ ಸಂಭ್ರಮ ಇಮ್ಮಡಿಯಾಗಿದ್ದು ಇಲ್ಲಿನ ಸಂಜೀವಕುಮಾರ ರಾವ್ ನಿವಾಸದಲ್ಲಿ ಪ್ರತಿಷ್ಠಾಪಿಸಿರುವ ದಸರಾ ಗೊಂಬೆಗಳು ಎಲ್ಲರ ಕೇಂದ್ರ ಬಿಂದುವಾಗಿವೆ.ಇಲ್ಲಿನ ಗೋಕುಲ ರಸ್ತೆಯ ಅರುಣ್ ಕಾಲನಿಯ ಸಂಜೀವಕುಮಾರ ರಾವ್ ಹಾಗೂ ಪಂಕಜಾ ದಂಪತಿ ಮನೆಯಲ್ಲಿ 4 ವರ್ಷಗಳಿಂದ ನೂರಾರು ಗೊಂಬೆ ಪ್ರತಿಷ್ಠಾಪಿಸಿ ನಿತ್ಯವೂ ವಿಶೇಷ ಪೂಜೆ ಮಾಡುತ್ತಿದ್ದಾರೆ. ಕೇವಲ ದಕ್ಷಿಣ ಕರ್ನಾಟಕಕ್ಕೆ ಸೀಮಿತವಾಗಿದ್ದ ದಸರಾ ಗೊಂಬೆಗಳ ಪ್ರತಿಷ್ಠಾಪನೆ ಈಗ ಉತ್ತರ ಕರ್ನಾಟಕ ಭಾಗಕ್ಕೂ ಲಗ್ಗೆ ಇಟ್ಟಿದ್ದು ಹುಬ್ಬಳ್ಳಿಯ ಹಲವು ಮನೆಗಳಲ್ಲಿ ನವರಾತ್ರಿ ಅಂಗವಾಗಿ 10 ದಿನ ಬಗೆಬಗೆಯ ಗೊಂಬೆ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ಅತ್ತೆಯಿಂದ ಪ್ರೇರಣೆ: ಪಂಕಜಾ ಸೊರಟೂರ ಅವರ ಅತ್ತೆ ಮೈಸೂರಿನವರು. ಅವರ ಪ್ರತಿ ವರ್ಷ ದಸರಾ ಸಮಯದಲ್ಲಿ ಗೊಂಬೆ ಪ್ರತಿಷ್ಠಾಪಿಸುತ್ತಿದ್ದರು. ಈ ಗೊಂಬೆ ಲಕ್ಷ್ಮೀಯ ಸಂಕೇತವಾಗಿದ್ದು, ಪ್ರತಿಷ್ಠಾಪಿಸುವುದರಿಂದ ಕುಟುಂಬಕ್ಕೆ ಒಳಿತಾಗಲಿದೆ ಎಂದು ಹೇಳಿದ್ದರಂತೆ. ಹಾಗಾಗಿ ಪಂಕಜಾ ಅವರಿಂದ ಪ್ರೇರಣೆಗೊಂಡು ಹುಬ್ಬಳ್ಳಿಯ ತಮ್ಮ ನಿವಾಸದಲ್ಲೂ 4 ವರ್ಷಗಳಿಂದ ಗೊಂಬೆ ಪ್ರತಿಷ್ಠಾಪಿಸುತ್ತಿದ್ದಾರೆ.ವಿಭಿನ್ನ ಗೊಂಬೆ: ದಸರಾ ಜಂಬೂ ಸವಾರಿ, ಶಿವ-ಪಾರ್ವತಿ, ಸೀತಾ ಕಲ್ಯಾಣ, ಅಷ್ಟಲಕ್ಷ್ಮೀಯರು, ದಶಾವತಾರ, ಶ್ರೀರಾಮ, ಲಕ್ಷ್ಮಣ, ಸೀತೆ, ಹನುಮಂತ, ಶ್ರೀಕೃಷ್ಣ-ರಾಧೆ, ಋಷಿಮುನಿ, ತುಳಸಿ ಮದುವೆ, ನರಸಿಂಹ, ತಿರುಪತಿ-ಮಹಾಲಕ್ಷ್ಮೀ, ಶ್ರೀಕೃಷ್ಣ- ರುಕ್ಕಿಣಿ, ವಿವಾಹ ಸಮಾರಂಭ, ಭಜನೆಯಲ್ಲಿನಿರತ ರಾಧೆ, ವಿವಿಧ ಭಂಗಿಯ ಗಣೇಶ, ವಾದ್ಯವೃಂದ, ಕೇರಂ ಆಡುತ್ತಿರುವ ಮಕ್ಕಳು, ಫಲಪುಷ್ಪ, ಹಣ್ಣು, ಮನೆ ಸೇರಿದಂತೆ ಅಲಂಕಾರಿಕ ಗೊಂಬೆ ಪ್ರತಿಷ್ಠಾಪಿಸಲಾಗಿದೆ.
ಪ್ರತಿ ವರ್ಷ ಸೇರ್ಪಡೆ: ಗೊಂಬೆಗಳು ಲಕ್ಷ್ಮೀ ಸಂಕೇತವಾಗಿದ್ದರಿಂದ ವರ್ಷದಿಂದ ವರ್ಷಕ್ಕೆ ಅವುಗಳ ಸಂಖ್ಯೆ ಹೆಚ್ಚಿಸಬೇಕು. ಹೀಗಾಗಿ ಪಂಕಜಾ 4 ವರ್ಷಗಳ ಹಿಂದೆ ಮೊದಲ ಬಾರಿ 70, 2ನೇ ವರ್ಷ 100ಕ್ಕೂ ಅಧಿಕ, 3ನೇ ವರ್ಷ 150ಕ್ಕೂ ಅಧಿಕ, 4ನೇ ವರ್ಷ 200, ಈ ವರ್ಷ 200ಕ್ಕೂ ಅಧಿಕ ಗೊಂಬೆ ಪ್ರತಿಷ್ಠಾಪಿಸಿದ್ದು ನೆರೆಹೊರೆಯವರು, ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರನ್ನು ಒಗ್ಗೂಡಿಸಿಕೊಂಡು ನಿತ್ಯ ಬೆಳಗ್ಗೆ ಮತ್ತು ಸಂಜೆ ದೇವಿಮೂರ್ತಿಗೆ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.ಗೊಂಬೆ ಕೂಡ್ರಿಸುವ ವಿಧಾನ: ಮನೆಗಳಲ್ಲಿ ದಸರಾ ಗೊಂಬೆ ಕೂಡ್ರಿಸುವಾಗ ಕೆಲವು ಪ್ರಮುಖ ಅಂಶ ಗಮನಿಸಬೇಕಿದೆ. 3, 5, 7, 9 ಹಂತಗಳಲ್ಲಿ ಗೊಂಬೆ ಕೂಡ್ರೀಸಲಾಗುತ್ತದೆ. ಹೆಚ್ಚು ಗೊಂಬೆ ಇದ್ದವರು 9 ಹಂತಗಳಲ್ಲಿ ಕೂಡ್ರೀರಿಸಿದರೆ, ಮಧ್ಯಮ ಸಂಖ್ಯೆಯ ಗೊಂಬೆಗಳನ್ನು 3, 5, 7 ಹಂತದಲ್ಲಿ ಕೂಡ್ರಿಸುತ್ತಾರೆ. ಮೊದಲ ಅಂತಸ್ತಿನಲ್ಲಿ ಪಟ್ಟದ ಗೊಂಬೆ, ಕಲಶ, ಗಣಪತಿ, ಮನೆ ದೇವರು, ದೀಪ, ದಶಾವತಾರ ಇಡುತ್ತಾರೆ. ಬಳಿಕ 2, 3ನೇ ಹಂತದಲ್ಲಿ ಇತರೆ ಮಾದರಿಯ ಗೊಂಬೆ ಜೋಡಿಸಲಾಗುತ್ತದೆ.
ನಮ್ಮ ಅತ್ತೆಯ ಪ್ರೇರಣೆಯಿಂದ ನಾಲ್ಕು ವರ್ಷದಿಂದ ಮನೆಯಲ್ಲಿ ದಸರಾ ಗೊಂಬೆ ಪ್ರತಿಷ್ಠಾಪಿಸಲಾಗುತ್ತಿದೆ. ಪ್ರತಿವರ್ಷವೂ ಗೊಂಬೆಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಇದರಿಂದ ನಮಗೆ ಒಳಿತಾಗುತ್ತಿದೆ ಎಂದು ಪಂಕಜಾ ಸೊರಟೂರ ಹೇಳಿದರು.