ವಿವೇಕಾನಂದ ಕಾಲೇಜಿನಲ್ಲಿ 20 ಸಾವಿರ ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ವಂದೇ ಮಾತರಂ ಸಮೂಹ ಗಾಯನ

KannadaprabhaNewsNetwork |  
Published : Jan 14, 2026, 04:15 AM IST
ಫೋಟೋ: 12ಪಿಟಿಆರ್-ವಿವೇಕಾನಂದ ಪುತ್ತೂರಿನ ವಿವೇಕಾನಂದ ಕಾಲೇಜ್‌ನಲ್ಲಿ ವಿವೇಕಾನಂದ ಜಯಂತಿ ನಡೆಯಿತು.  | Kannada Prabha

ಸಾರಾಂಶ

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ನೆಹರುನಗರದ ವಿವೇಕಾನಂದ ಕಾಲೇಜಿನ ಆವರಣದಲ್ಲಿ ಸೋಮವಾರ ವಿವೇಕಾನಂದ ಜಯಂತಿ ಕಾರ್ಯಕ್ರಮ ನಡೆಯಿತು.

ಪುತ್ತೂರು: ಸ್ವಾಮಿ ವಿವೇಕಾನಂದರು ಭಾರತದ ಆತ್ಮವಾದ ಧರ್ಮ, ಸಂಸ್ಕೃತಿಯನ್ನು ಜಗತ್ತಿನೆಲ್ಲೆಡೆ ಸಾರಿದ ಮಹಾನುಭಾವ. ವಿವೇಕರ ಕನಸಿನಂತೆ ಇಂದಿನ ತಲೆಮಾರು ಬದಲಾಗುತ್ತಿದೆ. ದೀರ್ಘಕಾಲದ ನಿದ್ದೆಯ ಬಳಿಕ ತಾಯಿ ಭಾರತಿ ಎಚ್ಚೆತ್ತುಕೊಳ್ಳುತ್ತಿದ್ದಾಳೆ. ಭಾರತ ಕೀರ್ತಿ ಎಲ್ಲ ರಂಗದಲ್ಲೂ ಪಸರಿಸುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖ್ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.‌ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ನೆಹರುನಗರದ ವಿವೇಕಾನಂದ ಕಾಲೇಜಿನ ಆವರಣದಲ್ಲಿ ಸೋಮವಾರ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಭಾರತ ಯಾವತ್ತಿಗೂ ನಾಶಗೊಳ್ಳುವುದಿಲ್ಲ ಎಂಬ ಮೃತ್ಯುಂಜಯ ತತ್ತ್ವವನ್ನು ಜಗತ್ತಿಗೆ ಪರಿಚಯಿಸಿದೆ. ಇವತ್ತಿಗೂ ಭಾರತದ ಅಮರಗಾಥೆ ಸೋಮನಾಥ ಮಂದಿರ ನಮ್ಮೆಲ್ಲರ ಕಣ್ಣೆದುರಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ನೂರು ವರ್ಷ ಪೂರೈಸಿದೆ. ವಂದೇ ಮಾತರಂ ಗೀತೆ ನೂರೈವತ್ತು ವರ್ಷಗಳಿಂದ ಮೊಳಗುತ್ತಿದೆ. ಇದು ಭಾರತದ ಜೀವಂತಿಕೆಗೆ ಸಾಕ್ಷಿಯಾಗಿದೆ.ಸ್ವಾತಂತ್ರ್ಯಪೂರ್ವದಲ್ಲಿ ಖುದಿರಾಮ್ ಬೋಸ್, ಪ್ರೀತಿಲತಾ ವಡ್ಡೇದಾರ್, ಬಿಪಿನ್ ಚಂದ್ರಪಾಲ್ ಮೊದಲಾದ ಕಾಂತ್ರಿಕಾರಿ ವೀರರು ರಾಷ್ಟ್ರದ ಮುಕ್ತಿಗಾಗಿ ಜೀವ ಬಲಿದಾನ ಮಾಡಿದ್ದಾರೆ. ಇವರಿಗೆಲ್ಲರಿಗೂ ಸ್ವಾಮಿ ವಿವೇಕಾನಂದರು ಪ್ರೇರಣೆಯಾಗಿದ್ದರು. ವಿವೇಕಾನಂದರ ಸಾಹಿತ್ಯ ಭಾರತೀಯರಿಗೆ ಸ್ಫೂರ್ತಿಯ ಮೂಲವಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಜಗತ್ತು ಗೆಲ್ಲಲ್ಲು ಅನೇಕ ಮಂದಿ ಪ್ರಯತ್ನಿಸಿದ್ದಾರೆ. ಆದರೆ ಒಂದು ಬಿಂದು ರಕ್ತ ನೆಲಕ್ಕೆ ಚೆಲ್ಲದೆ, ರಕ್ತಕ್ಕೆ ರಕ್ತ ಜೋಡಿಸಿದವರು ಸ್ವಾಮಿ ವಿವೇಕಾನಂದರು. ದೇಶಭಕ್ತಿಯೆಂಬ ವ್ರತದಿಂದ ಭಾರತದ ಆಧ್ಯಾತ್ಮಿಕ ಚಿಂತನೆ ವಿಶ್ವದೆಲ್ಲೆಡೆ ಪಸರಿಸಿದರು. ಮಾತ್ರವಲ್ಲದೆ, ಪ್ರತಿಯೊಬ್ಬ ವ್ಯಕ್ತಿ ತನ್ನೊಳಗಿನ ತನ್ನನ್ನು ಜಾಗೃತಗೊಳಿಸಲು ವಿವೇಕಾನಂದರೇ ಆದರ್ಶವಾಗಿದ್ದಾರೆ ಎಂದರು. ಬ್ರಿಟೀಷರ ಬಂಧನವನ್ನು ತಪ್ಪಿಸಲು ಭಾರತದಲ್ಲಿ ಸಾವಿರಾರು ಹೋರಾಟಗಾರರು ಹುಟ್ಟಿದರು.‌ ದೇಶಕ್ಕಾಗಿ ಹೋರಾಡಿ, ತಮ್ಮ ಉಸಿರನ್ನು ಅರ್ಪಣೆ ಮಾಡಲು ವಂದೇ ಮಾತರಂ ಹಾಡು ಅವರಿಗೆಲ್ಲ ಪ್ರೇರಣೆಯಾಯಿತು.‌ ಆದರೆ ಆ ಹಾಡಿಗೆ ಭಾವ ತುಂಬಲು, ವಿವೇಕಾನಂದರ ನುಡಿಗಳೇ ಮೂಲವಾಗಿದ್ದವು. ಅಂದಿನಿಂದ ಇಂದಿನವರೆಗೆ ಸಮಾಜದಲ್ಲಿ ವಿವೇಕಾನಂದರ ತತ್ತ್ವಗಳು ಉಸಿರಾಡುತ್ತಿದೆ ಎಂದು ಹೇಳಿದರು.‌ಮೊಳಗಿತು ವಂದೇ ಮಾತರಂ

ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಪ್ರಯುಕ್ತ ಸುಮಾರು 10 ಸಾವಿರ ವಿದ್ಯಾರ್ಥಿಗಳು ಹಾಗೂ ಗ್ರಾಮಾಂತರ ಶಾಲೆಗಳ ಸುಮಾರು 10 ಸಾವಿರ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 20 ಸಾವಿರ ವಿದ್ಯಾರ್ಥಿಗಳು ಏಕ ಕಾಲದಲ್ಲಿ ವಂದೇ ಮಾತರಂ ಮತ್ತು ದೇಶ ಭಕ್ತಿಗೀತೆಗಳ ಸಮೂಹ ಗಾಯನದಲ್ಲಿ ಭಾಗಿಗಳಾದರು.‌

ಸಾಂಸ್ಕೃತಿಕ ಕಾರ್ಯಕ್ರಮ

ಸಭಾ ಕಾರ್ಯಕ್ರಮದ ನಂತರ, ಸಂಘ ಶತಾಬ್ಧಿ ಪರಿಕಲ್ಪನೆಯಲ್ಲಿ, ಸಂಘ ಬೆಳೆದು ಬಂದ ಹಾದಿಯ ಕುರಿತಾಗಿ ವಿವೇಕಾನಂದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಸ್ವಾಗತಿಸಿದರು. ಉಪಾಧ್ಯಕ್ಷ ಸತೀಶ ರಾವ್ ವಂದಿಸಿದರು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ಉಷಾ ಕಿರಣ್ ಎಸ್. ಎನ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಧಾರಸಹಿತ ಇತಿಹಾಸಕಾರರನ್ನು ಪರಿಚಯಿಸಿ
ಬಿಜೆಪಿಯವರಿಗೆ ದ್ವೇಷ ಭಾಷಣ ಬೇಕಾ?: ಪದ್ಮರಾಜ್‌ ಪ್ರಶ್ನೆ