ನಾಲ್ಕು ವರ್ಷದ ಬಾಲಕಿಯ ಕಣ್ಣಿನಲ್ಲಿ ಬೆಳೆದಿದ್ದ ಜೀವಂತ ಪರಾವಲಂಬಿ ಹುಳುವೊಂದನ್ನು ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದೆ.
ಮಣಿಪಾಲ: ನಾಲ್ಕು ವರ್ಷದ ಬಾಲಕಿಯ ಕಣ್ಣಿನಲ್ಲಿ ಬೆಳೆದಿದ್ದ ಜೀವಂತ ಪರಾವಲಂಬಿ ಹುಳುವೊಂದನ್ನು ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದೆ.ಮಗುವಿನ ಬಲ ಗಣ್ಣು ನಿರಂತರ ಕೆಂಪಾಗುತಿದ್ದು, ಇದನ್ನು ಗಮನಿಸಿದ ಹೆತ್ತವರು ಮಗುವನ್ನು ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗಕ್ಕೆ ಕರೆ ತಂದಿದ್ದರು. ಪರೀಕ್ಷೆಯಲ್ಲಿ ವೈದ್ಯರು ಕಣ್ಣಿನ ಪೊರೆಯ ಕೆಳಗೆ ಸಣ್ಣ ಮಿಡಿಯುತ್ತಿರುವ ವಸ್ತುವನ್ನು ಗಮನಿಸಿದರು ಮತ್ತು ಸ್ಲಿಟ್-ಲ್ಯಾಂಪ್ ಬಯೋ ಮೈಕ್ರೋಸ್ಕೋಪಿ ಪರೀಕ್ಷೆಯಲ್ಲಿ ಅದು ಜೀವಂತ ಪರಾವಲಂಬಿ ಹುಳುವಾಗಿರುವುದು ದೃಢಪಟ್ಟಿತು.
ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಎಸ್. ಕಾಮತ್ ನೇತೃತ್ವದಲ್ಲಿ, ಡಾ. ಪ್ರಿಯಲ್ ಅಗರ್ವಾಲ್, ಡಾ. ಅಪರ್ಣಾ ಮತ್ತು ಶಸ್ತ್ರಚಿಕಿತ್ಸಾ ತಂಡವು ಸಾಮಾನ್ಯ ಅರಿವಳಿಕೆಯಡಿ ಎಕ್ಸಿಶನ್ ಬಯಾಪ್ಸಿ ನಡೆಸಿತು ಮತ್ತು ತೆಳುವಾದ, ದಾರದಂತಹ ಹುಳ ಹೊರ ತೆಗೆದರು.ಇದನ್ನು ಆಸ್ಪತ್ರೆಯ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ವಿನಯ್ ಖನ್ನಾ ಅವರು ಡೈರೊಫಿಲೇರಿಯಾ ರೆಪೆನ್ಸ್ ಎಂದು ಗುರುತಿಸಿದರು. ಡೈರೊಫಿಲೇರಿಯಾಸಿಸ್ ಎಂಬುದು ಸೋಂಕಿತ ಸೊಳ್ಳೆಗಳ ಕಡಿತದ ಮೂಲಕ ಹರಡುವ ಸೋಂಕಾಗಿದ್ದು, ಸಾಮಾನ್ಯವಾಗಿ ನಾಯಿ ಮತ್ತು ಇತರ ಪ್ರಾಣಿಗಳಲ್ಲಿ ಇದು ಕಂಡುಬರುತ್ತದೆ. ಅಪರೂಪಕ್ಕೆ ಮನುಷ್ಯರಿಗೂ ಹರಡುತ್ತದೆ ಮತ್ತು ಅದಕ್ಕೆ ಕಾರಣವಾಗುವ ಡೈರೊಫಿಲೇರಿಯಾ ಹುಳಗಳು ಕಣ್ಣಿನಲ್ಲಿ ನೆಲೆಗೊಳ್ಳುತ್ತವೆ ಎಂದು ಆಸ್ಪತ್ರೆಯ ಪ್ರಕಟಣೆ ಹೇಳಿದೆ.ಈ ಹುಳವನ್ನು ಯಶಸ್ವಿಯಾಗಿ ಹೊರ ತೆಗೆದು, ಮಗುವಿನ ಸುರಕ್ಷಿತ ಆರೋಗ್ಯಕ್ಕೆ ಕಾರಣವಾದ ಆಸ್ಪತ್ರೆಯ ಸಂಘಟಿತ, ಬಹು ಆಯಾಮ ಚಿಕಿತ್ಸಾ ಆರೈಕೆಯ ತಂಡವನ್ನು ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಅಭಿನಂದಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.