ಸಂತೋಷ ಕೂಟ ಆಯೋಜನೆ । ಸಂಘದಿಂದ ಸದಸ್ಯತ್ವ ಅಭಿಯಾನಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟ ನ.16ರಂದು ನಡೆಯಲಿದೆ. ಹಳೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವುದರೊಂದಿಗೆ ಸದಸ್ಯತ್ವವನ್ನು ಕೂಡ ಪಡೆದುಕೊಳ್ಳುವಂತೆ ಸಂಘ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮನವಿ ಮಾಡಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆ ದೇವಾಲಯವಿದ್ದಂತೆ, ಪ್ರತಿಯೊಬ್ಬರಿಗೆ ತಾವು ಓದಿದ ಶಿಕ್ಷಣ ಸಂಸ್ಥೆಯ ಮೇಲೆ ಅಭಿಮಾನವಿರಬೇಕು. ವಿದ್ಯಾರ್ಥಿಗಳು ದೇಶದ ಮುಂದಿನ ಭವಿಷ್ಯವಾಗಿದ್ದು, ಉತ್ತಮ ಶಿಕ್ಷಣ, ಅವಕಾಶ ಮತ್ತು ಮಾರ್ಗದರ್ಶನ ದೊರೆತಾಗ ಯುವ ಸಮೂಹದಿಂದ ದೇಶದ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಕಾರ್ಯಪ್ಪ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸದಸ್ಯತ್ವ ಪಡೆಯುವ ಮೂಲಕ ಕಾಲೇಜಿನ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸುವಂತೆ ಕೋರಿದರು.ಸದಸ್ಯತ್ವ ಅಭಿಯಾನ:ಹಳೇ ವಿದ್ಯಾರ್ಥಿಗಳ ಸಂಘದ ನೂತನ ಆಡಳಿತ ಮಂಡಳಿ ಸದಸ್ಯತ್ವವನ್ನು ಹೆಚ್ಚಿಸುವ ಸಲುವಾಗಿ ಸದಸ್ಯತ್ವ ಅಭಿಯಾನ ನಡೆಸುತ್ತಿದೆ. ಕಳೆದ ಒಂದು ವರ್ಷದಲ್ಲಿ 100ಕ್ಕೂ ಅಧಿಕ ಮಂದಿ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ. ಹಳೇ ವಿದ್ಯಾರ್ಥಿಗಳು ಹಳೇ ವಿದ್ಯಾರ್ಥಿ ಸಂಘ ಬ್ಯಾಂಕ್ ಖಾತೆಯ ಕ್ಯೂಆರ್ ಕೋಡ್ ಅಥವಾ ಬ್ಯಾಂಕ್ ಖಾತೆಗೆ ನೇರ ಹಣವನ್ನು ಜಮಾ ಮಾಡಿ ಅದರ ರಶೀದಿ ಅಥವಾ ಸ್ಕ್ರೀನ್ ಶಾಟ್ ಅನ್ನು ಸಂಘ ಕಾರ್ಯದರ್ಶಿ ಚಂದನ್ ನಂದರಬೆಟ್ಟು 8762632314 ಅಥವಾ ಉಪಾಧ್ಯಕ್ಷ ಬೊಟ್ಟಂಗಡ ಗಣಪತಿ 8123083869 ಇವರ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಸದಸ್ಯತ್ವ ಪಡೆದುಕೊಳ್ಳಬಹುದಾಗಿದೆ. ನ.16ರಂದು ನಡೆಯುವ ಕಾರ್ಯಕ್ರಮಕ್ಕೆ ಆಗಮಿಸಿ ಸ್ಥಳದಲ್ಲೇ ಖುದ್ದು ಸದಸ್ಯತ್ವ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.ಸಂಘದ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಮಾತನಾಡಿ, ನ.16 ರಂದು ಬೆಳಗ್ಗೆ 10 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ ಎಸ್. ಆಲೂರ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ ಪಾಲ್ಗೊಳ್ಳಲಿದ್ದಾರೆ ಎಂದರು.
ಸಾಧಕರಿಗೆ ಸನ್ಮಾನ:ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಪ್ರೊ. ಮೇಜರ್ ರಾಘವ ಬಿ., ಪ್ರೊ.ತಿಪ್ಪೇಸ್ವಾಮಿ ಈ., ಪ್ರೊ.ಗಾಯತ್ರಿ ದೇವಿ ಎ., ಪ್ರೊ.ಶ್ರೀಧರ್ ಹೆಗ್ಗಡೆ, ಪ್ರೊ.ನಾಗರಾಜು ಕೆ.ಪಿ., ಪ್ರೊ.ಕೃಷ್ಣ ಎಂ.ಪಿ, ಪ್ರೊ.ವಿಜಯಲತಾ ಸಿ, ಪ್ರೊ.ರಾಜೇಂದ್ರ ಆರ್, ಪ್ರೊ.ನಯನ ಕಶ್ಯಪ್, ವಿಜ್ಞಾನಿ ಡಾ. ಜೆ.ಜಿ.ಮಂಜುನಾಥ ಕಾಲೇಜಿಗೆ ಅತೀ ಹೆಚ್ಚು ಅಂಕ ಪಡೆದ ಮೋನಿಶಾ ರೈ (ಬಿಎಸ್‌ಸಿ), ಕೆ.ಎಂ.ಬ್ರೈಟನ್ ಮ್ಯಾಥ್ಯೂ (ಎಂ.ಎ ಇಂಗ್ಲೀಷ್), ಸಹನಾ ಸಿ.ಕೆ (ಎಂ.ಎ ಕೊಡವ) ಕ್ರೀಡಾ ಸಾಧಕರಾದ ಮೊಹಮ್ಮದ್ ಶಾಹಿಲ್, ಗಡೇಲಾ ಗಾಯತ್ರಿ, ಎಂ.ಡಿ.ಕಾವ್ಯಶ್ರೀ, ಸೀಮಾ ಆನಂದ್ ಪವರ್, ಎನ್‌ಸಿಸಿ ಸಾಧಕರಾದ ಎಂ.ಆರ್.ಹೇಮಂತ್ ಸೇರಿದಂತೆ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಗುವುದು.ಫೀ.ಮಾ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಹಾಗೂ ಸಂಘದ ಗೌರವಾಧ್ಯಕ್ಷ ಪ್ರೊ. ಮೇಜರ್ ಬಿ.ರಾಘವ ಮಾತನಾಡಿ, 75 ಸಂವತ್ಸರವನ್ನು ಪೂರೈಸಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಅಭಿವೃದ್ಧಿಗೆ ಕೊಡಗಿನ ಸಾಕಷ್ಟು ವಿದ್ಯಾರ್ಥಿಗಳು ಶ್ರಮಿಸಿದ್ದಾರೆ. ಹಳೇ ವಿದ್ಯಾರ್ಥಿ ಸಂಘ ಪ್ರತಿಯೊಂದು ವಿಚಾರದಲ್ಲಿ ಆಸಕ್ತಿ ವಹಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.ಸಂಘದ ಉಪಾಧ್ಯಕ್ಷ ಬೊಟ್ಟಂಗಡ ಗಣಪತಿ ಮಾತನಾಡಿ, ಹಳೇ ವಿದ್ಯಾರ್ಥಿ ಸಂಘ ಅನೇಕ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನದ ಕುರಿತು ಕಾರ್ಯಾಗಾರ ನಡೆಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕೈಜೋಡಿಸಿದರೆ ಅಭಿವೃದ್ಧಿ ಕಾರ್ಯಗಳು ಸುಲಲಿತವಾಗಿ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಜಗದೀಶ್ ಸಬ್ಬಂಡ್ರ ಹಾಗೂ ಎಸ್.ಆರ್.ವತ್ಸಲ ಉಪಸ್ಥಿತರಿದ್ದರು.