ಶಿಕ್ಷಕರಿಗೆ ಫೇಸ್‌, ಲೊಕೇಶನ್‌ ಹಾಜರಾತಿ ಕಡ್ಡಾಯ!

KannadaprabhaNewsNetwork |  
Published : May 30, 2026, 01:45 AM IST
ಶಾಲೆ | Kannada Prabha

ಸಾರಾಂಶ

ರಾಜ್ಯ ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದಿಂದ ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಲೊಕೇಶನ್, ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ ಅಳವಡಿಸಿದೆ.

ಮಂಜುನಾಥ ಕೆ.ಎಂ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಇನ್ನು ಮುಂದೆ ಸರ್ಕಾರಿ ಶಾಲೆ ಶಿಕ್ಷಕರು, ಸಿಬ್ಬಂದಿ ನಾನಾ ಕಾರಣವೊಡ್ಡಿ ಶಾಲೆಗೆ ತಡವಾಗಿ ಬರುವಂತಿಲ್ಲ. ಶಾಲೆಗೆ ಚಕ್ಕರ್ ಹೊಡೆದು ಅಲ್ಲಲ್ಲಿ ಓಡಾಡುವಂತಿಲ್ಲ.

ರಾಜ್ಯ ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದಿಂದ ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಲೊಕೇಶನ್, ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ ಅಳವಡಿಸಿದೆ. ನಿರ್ದಿಷ್ಟ ಸಮಯ ಮೀರಿ ಶಾಲೆಗೆ ಹಾಜರಾದರೆ ಆ ದಿನ ಆಕಸ್ಮಿಕ ರಜೆಯೆಂದೇ ಪರಿಗಣಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕರ್ನಾಟಕ ಅಡ್ವಾನ್ಸ್‌ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಕೆಎಎಎಂಎಸ್‌) ಆ್ಯಪ್‌ ರೂಪಿಸಲಾಗಿದೆ.

ಶುಕ್ರವಾರದಿಂದಲೇ ರಾಜ್ಯಾದ್ಯಂತ ಈ ನಿಯಮ ಜಾರಿಗೊಂಡಿದೆ. ಇನ್ಮುಂದೆ ಸರ್ಕಾರಿ ಶಾಲೆ ಶಿಕ್ಷಕರು ನಿರ್ದಿಷ್ಟ ಅವಧಿಯೊಳಗೆ ಶಾಲೆಗೆ ಹಾಜರಾಗಿ ದಿನಕ್ಕೆರೆಡು ಬಾರಿ ಲೊಕೇಶನ್, ಫೇಸ್ ಆಧರಿತ ಹಾಜರಾತಿ ಹಾಕಬೇಕಾಗಿದೆ. ಸರ್ಕಾರದ ಈ ನಿಲುವನ್ನು ಪೋಷಕರು, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಶಿಕ್ಷಕರ ವಲಯ ಸ್ವಾಗತಿಸಿದೆ. ಇನ್ನೊಂದು ತಿಂಗಳಲ್ಲಿ ವಿದ್ಯಾರ್ಥಿಗಳಿಗೂ ಎಐ ಆಧಾರಿತ ಹಾಜರಾತಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.

ಹೊಂದಾಣಿಕೆಗೆ ಕುತ್ತು:

ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರ ಪೈಕಿ ಕೆಲವರು ಶಾಲೆಗೆ ಹಾಜರಾಗದೆ ಹಾಜರಾತಿ ಪಡೆದುಕೊಂಡು ಸಂಬಳ ಮಾಡಿಕೊಳ್ಳುತ್ತಿದ್ದರು. ಕೆಲವರು ಮುಖ್ಯಗುರುಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಹಾಜರಾತಿ ಪಡೆದುಕೊಂಡರೆ, ಇನ್ನು ಕೆಲವರು ಸಂಘಟನೆ ಹೆಸರಿನಲ್ಲಿ ಓಡಾಡಿಕೊಂಡು ಶಾಲೆಗೆ ಗೈರಾಗುತ್ತಿದ್ದರು. ಶಾಲೆಗೆ ಗೈರಾಗುವುದನ್ನೇ ಕಾಯಕ ಮಾಡಿಕೊಂಡ ಅನೇಕ ಶಿಕ್ಷಕರು ಶಾಲೆಯ ಮುಖ ನೋಡುವುದೇ ಅಪರೂಪ ಎನ್ನುವಂತಾಗಿತ್ತು.

ಬೇಗ ಹೋದರು ತೊಂದರೆ:

ಶಿಕ್ಷಕರ ಕಡ್ಡಾಯ ಹಾಜರಾತಿ ಸಂಬಂಧ ಕೈಗೊಂಡ ತಂತ್ರಜ್ಞಾನ ಆಧರಿತ ಹಾಜರಾತಿ ಬಗ್ಗೆ ನಿರ್ಲಕ್ಷಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ನಿಗದಿತ ಶಾಲಾ ಅವಧಿ ಮುಗಿಯುವ ಮುನ್ನವೇ ಚೆಕ್‌ಔಟ್ ಆದಲ್ಲಿ ಆರಂಭಿಕ ನಿರ್ಗಮನ (Early Departure) ಎಂದು ಪರಿಗಣಿಸಿ, ಅದನ್ನು ಕರ್ತವ್ಯದ ಅವಗಣನೆ ಅಥವಾ ಕರ್ತವ್ಯ ಲೋಪ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಅರ್ಧ ದಿನದ ರಜೆ ಕಡಿತವಾಗಲಿದೆ.

ಶಾಲೆಯ ಅಧಿಕೃತ ಮುಕ್ತಾಯದ ಸಮಯಕ್ಕಿಂತ ತೀರಾ ಮುಂಚಿತವಾಗಿ (ಉದಾಹರಣೆಗೆ ಮಧ್ಯಾಹ್ನದ ಅವಧಿಯಲ್ಲಿ) ಯಾವುದೇ ಪೂರ್ವಾನುಮತಿ ಇಲ್ಲದೇ ಚೆಕ್‌ಔಟ್ ಆದರೆ ಆ ದಿನದ ದ್ವಿತೀಯಾರ್ಧವನ್ನು ಅರ್ಧ ದಿನದ ರಜೆ, ಅರ್ಧದಿನದ ಆಕಸ್ಮಿಕ ರಜೆ (ಸಿಎಲ್) ಎಂದು ಪರಿಗಣಿಸಲಾಗುವುದು. ರಜೆಯ ಖಾತೆಯಲ್ಲಿ ಆಕಸ್ಮಿಕ ರಜೆ ಬಾಕಿ ಇಲ್ಲದಿದ್ದರೆ, ಅದನ್ನು ಗಳಿಕೆ ರಜೆ (ಇಎಲ್) ಅಥವಾ ವೇತನ ರಹಿತ ರಜೆ ಎಂದು ಬದಲಾಯಿಸಲಾಗುತ್ತದೆ.

ಬಿಇಒ ನೋಟಿಸ್:

ಒಂದು ತಿಂಗಳಲ್ಲಿ ಮೂರು ಬಾರಿ ತಡವಾಗಿ ಬರುವುದು ಮತ್ತು ಬೇಗ ಹೋಗುವುದು ಮಾಡಿದಲ್ಲಿ 1 ದಿನದ ಆಕಸ್ಮಿಕ ರಜೆ ಕಡಿತಗೊಳಿಸಲಾಗುವುದು. ​ಯಾವುದೇ ಮುನ್ಸೂಚನೆ ಅಥವಾ ಅನುಮತಿ ಇಲ್ಲದೇ ಬೇಗ ಚೆಕ್‌ಔಟ್ ಆಗುವುದು ಸತತ ಕಂಡುಬಂದಲ್ಲಿ ಅದನ್ನು ‘ಅನಧಿಕೃತ ಗೈರುಹಾಜರಿ’ ಎಂದು ಪರಿಗಣಿಸಿ, ಬಿಇಒ ಅಥವಾ ಡಿಡಿಪಿಐ ಮಟ್ಟದಲ್ಲಿ ಕಾರಣ ಕೇಳುವ ನೋಟಿಸ್ ನೀಡಲಾಗುತ್ತದೆ. ​ಇದು ಸೇವಾ ವರದಿ ಮತ್ತು ವಾರ್ಷಿಕ ವೇತನ ಬಡ್ತಿ ಮೇಲೆಯೂ ಪ್ರಭಾವ ಬೀರಲಿದೆ.

ರಿಯಾಯಿತಿ ದರ ಅರ್ಧ ಗಂಟೆಗೆ ಹೆಚ್ಚಿಸಲಿ:

ಶಾಲೆ ಬೆಳಗ್ಗೆ 9:45ಕ್ಕೆ ಆರಂಭ ಆಗುವುದಾದರೆ, 9:55 ಅಥವಾ 10 ಗಂಟೆ ಒಳಗೆ Check-in ಮಾಡಲು ಅವಕಾಶವಿದೆ. ಆದರೆ, ಸಾರಿಗೆ ವ್ಯವಸ್ಥೆಯಿಲ್ಲದ ಹಳ್ಳಿಗಳಿಗೆ ಶಿಕ್ಷಕರು ತಲುಪುವುದು ಕಷ್ಟವಾಗಲಿದೆ. 15 ನಿಮಿಷಗಳ ರಿಯಾಯಿತಿ ಸಮಯ ಅರ್ಧಗಂಟೆಗೆ ಹೆಚ್ಚಿಸಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.

----

ಕ್ರಮ ಎದುರಿಸಿ

ಶಿಕ್ಷಕರಿಗೆ ಲೊಕೇಶನ್, ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ ಅಳವಡಿಸಲಾಗಿದೆ. ಶಿಕ್ಷಕರು ಇಲಾಖೆಯ ಸೂಚನೆಯಂತೆ ನಿಗದಿತ ಸಮಯಕ್ಕೆ ಹಾಜರಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲದಿದ್ದರೆ ಇಲಾಖೆ ಕ್ರಮ ಎದುರಿಸಬೇಕು.

-ಬಿ.ಉಮಾದೇವಿ, ಡಿಡಿಪಿಐ ಬಳ್ಳಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಿಷ್ಠ ವೇತನ ಕರಡು ಅಧಿಸೂಚನೆಗೆ ವಿರೋಧ
ಮನುಷ್ಯನ ಸಂಸ್ಕಾರ ತಿದ್ದಿ ತೀಡಲು ಪುಸ್ತಕ ಸಹಕಾರಿ: ಮ.ನಿ.ಪ್ರ. ಮಹಾಂತ ಸ್ವಾಮೀಜಿ