ಶಿಕ್ಷಣ ಬಾಳಿನ ಬೆಳಕಾಗಿದ್ದು, ಮೌಲ್ಯಯುತವಾದ ಜ್ಞಾನ ಸಂಪಾದಿಸಿ ಸಾಮಾಜಿಕವಾಗಿ ಬೆರೆತು ಇತರರಿಗೂ ಬೆಳಕಾಗಬೇಕು ಎಂದು ಡಿಡಿಪಿಐ ಮಾಧವರೆಡ್ಡಿ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ಶಿಕ್ಷಣ ಬಾಳಿನ ಬೆಳಕಾಗಿದ್ದು, ಮೌಲ್ಯಯುತವಾದ ಜ್ಞಾನ ಸಂಪಾದಿಸಿ ಸಾಮಾಜಿಕವಾಗಿ ಬೆರೆತು ಇತರರಿಗೂ ಬೆಳಕಾಗಬೇಕು ಎಂದು ಡಿಡಿಪಿಐ ಮಾಧವರೆಡ್ಡಿ ಕರೆ ನೀಡಿದರು.
ಪಟ್ಟಣದ ಎಪಿಎಂಸಿ ಹಿಂಭಾಗದಲ್ಲಿರುವ ವೇಮನ ರೆಡ್ಡಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮಾಜದ ಪ್ರತಿಭಾನ್ವಿತ ಎಸ್ಎಸ್ಎಲ್ ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಪಡೆದವರೆಲ್ಲಾ ಉದ್ಯೋಗ ಅರಸಿ ಪಟ್ಟಣದಲ್ಲಿ ನೆಲಸಿದರೆ, ಭೂಮಿ ನಂಬಿ ಬದುಕುತ್ತಿರುವ ಕೋಟ್ಯಂತರ ಮಂದಿಗೆ ಅನ್ನ ನೀಡುವವರು ಯಾರು.? ಅಂತೆಯೇ ರೈತರು ದೇಶದ ಬೆನ್ನೆಲುಬಾಗಿ ನಿಲ್ಲುತ್ತಾರೆ. ರೆಡ್ಡಿ ಜನಾಂಗದವರು ದೇಶದ ಕೆಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೃಷಿ ಮಾಡುತ್ತಿರುವುದು ಸಂತಸ, ಆದರೆ ಪಡೆದ ಅಕ್ಷರ ಅನ್ನವಾಗಿ ಇತರರಿಗೆ ನೆರವಾಗಲಿ ಎಂದರು.
ಉದ್ಯೋಗ ಸಿಗದಿದ್ದರೆ ಅದೇ ಜ್ಞಾನವನ್ನು ಕೃಷಿಗೆ ಬಳಸಿ ಸಾಧನೆ ಮಾಡುವಂತಾಗಬೇಕು. ಎಷ್ಟು ಹಣ ಸಂಪಾದಿಸಿದರೂ ಕಂಪ್ಯೂಟರ್ ನಿಂದ ಅನ್ನ ಬೆಳೆಯಲು ಸಾಧ್ಯವಿಲ್ಲ. ಈ ಮಣ್ಣಿನಿಂದಲೇ ಅದನ್ನು ಬೆಳೆಯಬೇಕಿದ್ದು ಪ್ರತಿಯೊಬ್ಬರು ಹೆತ್ತವರ ಹಾಗೂ ಈ ಭೂಮಿಯ ಮತ್ತು ಅನ್ನ ಬೆಳೆದು ನಮಗೆ ನೀಡುವ ರೈತರ 3 ಋುಣವನ್ನು ತೀರಿಸಲೇಬೇಕು. ನೀವು ಕೂಡ ಉತ್ತಮ ಶಿಕ್ಷಣ ಪಡೆದು ನಮ್ಮ ಸಮಾಜದ ಋುಣವನ್ನು ತೀರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ರೆಡ್ಡಿ ಜನಾಂಗದ ಅಧ್ಯಕ್ಷ ಡಾ. ಕೆ.ಎಸ್.ಪಾಂಡುರಂಗಾರೆಡ್ಡಿ ಮಾತನಾಡಿ ನಮ್ಮ ಸಮಾಜದಲ್ಲಿನ ಪ್ರತಿಭಾವಂತರು. ಮಕ್ಕಳನ್ನು ಗುರುತಿಸಿ ಶಿಕ್ಷಣಕ್ಕೆ ಪ್ರೋಸ್ತಾಹಿಸುವುದು ಸಂಘದ ಗುರಿ. ಈ ಮಣ್ಣಿನ ಸೊಗಡಿನಲ್ಲೇ ಹಾಡುತ್ತಾ ಅನ್ನ ಹುಡುಕುವ ಜಾಯಾಮಾನ ನಮ್ಮದು. ಶಿಕ್ಷಣ ಎಂಬುದು ಮಕ್ಕಳಿಗೆ ಭವಿಷ್ಯದ ಬಾಗಿಲು ತೆರೆಯುವ ಕಿಟಕಿಗಳು. ನಮ್ಮ ಸಮಾಜ ರೆಡ್ಡಿ ಹೆಸರಲ್ಲೂ 2 ಅಕ್ಷರ ಹಾಗೆಯೇ ವಿದ್ಯೆ ಎಂಬುದಕ್ಕೂ 2 ಅಕ್ಷರವಿದ್ದು ಶಿಕ್ಷಣವು ನಮ್ಮ ಸಮಾಜಕ್ಕೆ ಹೊಂದಿಕೊಳ್ಳುವ ಕಲೆಯಾಗಿದ್ದು ನಮ್ಮ ಸಮಾಜವು ಸಾಮಾಜಿಕ ಹಾಗೂ ರಾಜಕೀಯದಲ್ಲೂ ದೇಶಕ್ಕೆ ಹಲವಾರು ಗಣ್ಯರ ಕೊಡುಗೆಯನ್ನು ನೀಡಿದೆ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ ಮಾತನಾಡಿ, ಅನ್ನ ಬೆಳೆಯುವ ಸಮಾಜ ನಮ್ಮದಾಗಿದ್ದು ಶಿಕ್ಷಣದಲ್ಲೂ ಹಲವಾರು ಸಾಧಕರನ್ನು ಸಮಾಜಕ್ಕೆ ನೀಡಿದೆ. ನೀವು ಕೂಡ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳುವ ಜೊತೆಗೆ ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಹೆತ್ತವರು ಕಷ್ಟದಿಂದ ನಿಮಗೆ ಶಿಕ್ಷಣ ಕೊಡಿಸಿದ್ದು ಅವರ ಸಂಧ್ಯಾಕಾಲದಲ್ಲಿ ಮಕ್ಕಳು ಗೌರವದಿಂದ ನೋಡಿಕೊಳ್ಳಬೇಕು. ಅದೇ ನೀವು ಮಾಡುವ ದೇಶಸೇವೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಬಿ ಆರ್ ಸಿ ಪವನ್ ಕುಮಾರ್ ರೆಡ್ಡಿ, ಸಂಘದ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣರೆಡ್ಡಿ, ಖಜಾಂಚಿ ಮೋಹನ್ ಕುಮಾರ್ ರೆಡ್ಡಿ, ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ, ಜಂಟಿ ಕಾರ್ಯದರ್ಶಿ ವೆಂಕಟ ಕೃಷ್ಣಾರೆಡ್ಡಿ, ನಾರಾಯಣರೆಡ್ಡಿ, ಸುರೇಶ್ ರೆಡ್ಡಿ, ಮುಖಂಡರಾದ ಚಿನ್ನಪ್ಪರೆಡ್ಡಿ, ಶನಿವಾರಂರೆಡ್ಡಿ, ಜಯರಾಂ ರೆಡ್ಡಿ, ತಿಮ್ಮಾರೆಡ್ಡಿ, ನಿರ್ದೇಶಕರಾದ ಮೇನಕಾ, ಇಂದಿರಾ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.