ಆಸ್ತಿ ವಿವಾದಕ್ಕೆ 6 ಜನರ ಭೀಕರ ಹತ್ಯೆ

KannadaprabhaNewsNetwork |  
Published : May 30, 2026, 01:45 AM IST
ಕೊಲೆ | Kannada Prabha

ಸಾರಾಂಶ

ಒಂದೇ ಕುಟುಂಬದ ಐವರನ್ನು ಒಳಗೊಂಡು ಒಟ್ಟು ಆರು ಜನರನ್ನು ಮಚ್ಚಿನಿಂದ ಕೊಚ್ಚಿ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಜಮೀನೊಂದರಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಒಂದೇ ಕುಟುಂಬದ ಐವರನ್ನು ಒಳಗೊಂಡು ಒಟ್ಟು ಆರು ಜನರನ್ನು ಮಚ್ಚಿನಿಂದ ಕೊಚ್ಚಿ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಜಮೀನೊಂದರಲ್ಲಿ ಶುಕ್ರವಾರ ಸಂಜೆ ನಡೆದಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಭೀಕರ ಹತ್ಯೆ ನಡೆದಿದೆ ಎನ್ನಲಾಗಿದೆ.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ ನಿರಾಳೆ (58), ಸಹೋದರರಾದ ದುಂಡಪ್ಪ ನಿರಾಳೆ (65), ಶಿವಪುತ್ರಪ್ಪ ನಿರಾಳೆ (60), ಸಂಬಂಧಿಕರಾದ ರಾಹುಲ ನಿರಾಳೆ (28), ಸಮರ್ಥ ನಿರಾಳೆ (27) ಹಾಗೂ ಸಹಚರ ಶಬ್ಬೀರ ನಾದಾಫ್ (45) ಅವರು ಕೊಲೆಯಾದವರು.

ಚಡಚಣದ ನಿವಾಸಿಗಳಾದ ಎಲ್ಲರೂ ಹೊಸದಾಗಿ ಖರೀದಿಸಿದ್ದ ಜಮೀನನ್ನು ಸ್ವಚ್ಛಗೊಳಿಸಿ ಉಳುಮೆ ಮಾಡಿಸಲೆಂದು ಶುಕ್ರವಾರ ಸಂಜೆ ಹೋದಾಗ ಎದುರಾಳಿಗಳೊಂದಿಗೆ ವಾಗ್ವಾದವಾಗಿದೆ. ಈ ವೇಳೆ ಸುಮಾರು 10 ರಿಂದ 12 ಜನರಿದ್ದ ಎದುರಾಳಿ ಗುಂಪು ಕಣ್ಣಿಗೆ ಖಾರದಪುಡಿ ಎರಚಿ, ಕಬ್ಬು ಕಟಾವು ಮಾಡುವ ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ವಿಷಯ ತಿಳಿದ ತಕ್ಷಣವೇ ಚಡಚಣ ಠಾಣೆ ಪೊಲೀಸರು ಹಾಗೂ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಡಚಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದ್ದು, ಒಂದೇ ಕುಟುಂಬದ ಐವರು ಕೊಲೆಯಾಗಿದ್ದು, ಇಡೀ ವಿಜಯಪುರ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಕೊಲೆಯಾದವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಘಟನೆ ಹಿನ್ನೆಲೆ:ಈ ಹಿಂದೆ 2015ರಲ್ಲಿ ಚಡಚಣ ತಾಲೂಕಿನ ಗೋವಿಂದಪುರದ ನಿವಾಸಿ ಶಿವಾನಂದ ತಳವಾರ ಎಂಬಾತ ತೇಲಿ ಮನೆತನದ ಹುಡುಗಿಯನ್ನು ಅಪಹರಿಸಿಕೊಂಡು ಹೋಗಿದ್ದ. ಇದರಿಂದ ಕುಪಿತಗೊಂಡ ತೇಲಿ ಮನೆತನದ ಶಶಿಕಾಂತ ತೇಲಿ, ಪ್ರಶಾಂತ ತೇಲಿ, ಕಾಮನಿಂಗ ತೇಲಿ, ಮಹಾದೇವ ತೇಲಿ ಸೇರಿಕೊಂಡು ಶಿವಾನಂದ ತಳವಾರ ಎಂಬಾತನನ್ನು ಕೊಲೆ ಮಾಡಿದ್ದು, ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಈ ವೇಳೆ ತೇಲಿ ಮನೆತನದವರು ಗೋವಿಂದಪೂರದಲ್ಲಿನ ಜಮೀನು ಬಿಟ್ಟು ಬೇರೆಡೆ ನೆಲೆಸಿದ್ದು, ಅಂದಿನಿಂದ ಅವರಿಗೆ ಸೇರಿದ ಜಮೀನು ಉಳಿಮೆ ಇಲ್ಲದೇ ಹಾಗೇ ಉಳಿದಿತ್ತು.ಜಮೀನು ಖರೀದಿಸಿ ಕೊಲೆಯಾದರಾ?:ಕಳೆದ 15 ವರ್ಷಗಳ ಹಿಂದೆ ಹೆಣ್ಣೊಂದರ ವಿಚಾರದಲ್ಲಿ ತೇಲಿ ಹಾಗೂ ತಳವಾರ ಕುಟುಂಬಗಳ ಮಧ್ಯೆ ಮೂಡಿದ್ದ ವೈಷಮ್ಯ ಈಗ ಸ್ಫೋಟಗೊಂಡಿದೆ. 15 ವರ್ಷಗಳ ಹಿಂದೆ ನಡೆದ ಘಟನೆಯಿಂದ ಬೀಳು ಬಿದ್ದಿದ್ದ ಜಮೀನು ಖರೀದಿಸಿದ ನಿರಾಳೆ ಕುಟುಂದವರು ಉಸಿರು ಚೆಲ್ಲಿದ್ದಾರೆ. ಸುಮಾರು 15 ವರ್ಷಗಳಿಂದ ಉಳುಮೆ ಮಾಡದೆ ತಕರಾರಿನಲ್ಲೇ ಇದ್ದ ಈ 15 ಎಕರೆ ಜಮೀನನ್ನು ನಿರಾಳೆ ಕುಟುಂಬಸ್ಥರು ಖರೀದಿ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ತಕರಾರು ತೆಗೆದಿದ್ದ ಕುಟುಂಬಸ್ಥರೇ ಹಗೆತನ ಸಾಧಿಸಿ ಈ ಆರು ಜನರನ್ನು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.ಕೊಲೆಯಾದ ಘಟನಾ ಸ್ಥಳಕ್ಕೆ ಸೋಕೋ ತಂಡ, ಬೆರಳು ಮುದ್ರೆ ತಂಡ ಭೇಟಿ ನೀಡಿ, ಪರಿಶೀಲನೆ ಕೈಕೊಂಡಿದ್ಧಾರೆ. ಮುಂಜಾಗೃತಾ ಕ್ರಮವಾಗಿ ಪೊಲೀಸ್ ಹಿರಿಯ ಅಧಿಕಾರಿಗಳು, ಚಡಚಣ ಠಾಣೆ ಪೊಲೀಸರು ಹಾಗೂ ಮೂರು ಡಿಎಆರ್‌ ತಂಡಗಳು ಹಾಗೂ 4 ಕೆಎಸ್‌ಆರ್‌ಪಿ ತಂಡಗಳನ್ನು ನಿಯೋಜಿಸಲಾಗಿದೆ.ಕೋಟ್‌:

ನಿಖರ ಕಾರಣ ಗೊತ್ತಿಲ್ಲ:

ಚಡಚಣ ತಾಲೂಕಿನ ಗೋವಿಂದಪುರದಲ್ಲಿ ಆರು ಜನರ ಹತ್ಯೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಯಾರು ಕೊಲೆ ಮಾಡಿದ್ದಾರೆ, ಏಕೆ ಕೊಲೆಯಾಗಿದೆ ಎಂಬುವುದರ ಪತ್ತೆಗೆ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳ ಬಂಧನವಾಗಲಿದೆ.

-ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಿಷ್ಠ ವೇತನ ಕರಡು ಅಧಿಸೂಚನೆಗೆ ವಿರೋಧ
ಮನುಷ್ಯನ ಸಂಸ್ಕಾರ ತಿದ್ದಿ ತೀಡಲು ಪುಸ್ತಕ ಸಹಕಾರಿ: ಮ.ನಿ.ಪ್ರ. ಮಹಾಂತ ಸ್ವಾಮೀಜಿ