ಪಥಸಂಚಲನ ತಡೆಯಲೆತ್ನಿಸಿದ ವ್ಯಕ್ತಿಗಳಿಗೆ ಮುಖಭಂಗ : ಬಿವೈವಿ

KannadaprabhaNewsNetwork |  
Published : Oct 20, 2025, 01:02 AM ISTUpdated : Oct 20, 2025, 09:41 AM IST
by vijayendra

ಸಾರಾಂಶ

ಪ್ರಜಾತಂತ್ರದ ಹಕ್ಕು ಕಸಿಯಲು ಹೊರಟ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಚಾಟಿ ಬೀಸಿರುವ ಉಚ್ಚ ನ್ಯಾಯಾಲಯ, ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ನೀಡುವ ಮುಖಾಂತರ ಸಂವಿಧಾನದ ಘನತೆ ಎತ್ತಿ ಹಿಡಿದಿದೆ.

  ಬೆಂಗಳೂರು :  ಪ್ರಜಾತಂತ್ರದ ಹಕ್ಕು ಕಸಿಯಲು ಹೊರಟ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಚಾಟಿ ಬೀಸಿರುವ ಉಚ್ಚ ನ್ಯಾಯಾಲಯ, ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ನೀಡುವ ಮುಖಾಂತರ ಸಂವಿಧಾನದ ಘನತೆ ಎತ್ತಿ ಹಿಡಿದಿದೆ. ಈ ಮೂಲಕ, ಪಂಥ ಸಂಚಲನ ನಿರ್ಬಂಧಿಸಲು ಹೊರಟವರಿಗೆ ಮುಖಭಂಗವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ನೀಡಿದ ಉಚ್ಚ ನ್ಯಾಯಾಲಯದ ತೀರ್ಪು ಜನತಂತ್ರದ ವಿಜಯವಾಗಿದೆ. ಇಂದಿನ ನ್ಯಾಯಾಲಯದ ತೀರ್ಪು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ಆಡಳಿತ ನಡೆಸಲು ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶ ಸಾರಿದೆ. ದಿನ ಬೆಳಗಾದರೆ ಸಂವಿಧಾನದ ಬಗ್ಗೆ ಬೊಗಳೆ ಮಾತನಾಡುವವರಿಗೆ ತಕ್ಕ ಪಾಠ ಹೇಳಿದೆ ಎಂದಿದ್ದಾರೆ.

ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳಿಗೆ ಕಾನೂನು ಸುವ್ಯವಸ್ಥೆಯ ಷರತ್ತು ವಿಧಿಸಿ ಅನುಮತಿ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಸಿರುಗಟ್ಟಿಸಲು ಹೋದರೆ ದೇಶದ ಸಂವಿಧಾನ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂಬ ಸಂದೇಶ ತೀರ್ಪಿನ ಮೂಲಕ ರವಾನೆಯಾಗಿದೆ. ರಾಷ್ಟ್ರಭಕ್ತ ಸಂಘಟನೆಗಳನ್ನು ಮೆಟ್ಟಿ ನಿಲ್ಲುವ ಕಾಂಗ್ರೆಸ್‌ನ ಕುಟಿಲ ನೀತಿಯು ನ್ಯಾಯಾಲಯದ ತೀರ್ಪಿನಿಂದ ನಿಷ್ಕ್ರಿಯಗೊಂಡಂತಾಗಿದೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್‌ಗೆ ಮುಖಭಂಗ ಎಂದ ಬಿವೈವಿಗೆ ಪ್ರಿಯಾಂಕ್‌ ತಿರುಗೇಟು: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ಕುರಿತಂತೆ ಹೈಕೋರ್ಟ್‌ ನಿರ್ದೇಶನದಿಂದ ಕಾಂಗ್ರೆಸ್‌ಗೆ ಮುಖಭಂಗವಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಇವತ್ತೇ ಪಥ ಸಂಚಲನ ನಡೆಸಬಹುದು ಎಂದು ಕೋರ್ಟ್‌ ಆದೇಶ ನೀಡಿಲ್ಲ. ವಿಜಯೇಂದ್ರ ಅವರೇ, ಸ್ವಂತ ಬುದ್ಧಿ ಉಪಯೋಗ ಮಾಡಿ ಹೇಳಿಕೆ ನೀಡದಿದ್ದರೆ ನಗೆಪಾಟಲಿಗೀಡಾಗುತ್ತೀರಿ ಎಂದು ಪ್ರತಿಕ್ರಿಯಿಸಿದ್ದಾರೆ.ತಾವು ಕೇಳಿರುವ 11 ಪ್ರಶ್ನೆಗಳಿಗೆ ಉತ್ತರ ಕೊಟ್ಟು ಪಥ ಸಂಚಲನ ಮಾಡಲಿ. ಸುಮ್ಮನೆ ರಿಪಬ್ಲಿಕ್‌ ಆಫ್‌ ಕಲಬುರಗಿ, ರಿಪಬ್ಲಿಕ್‌ ಆಫ್‌ ಚಿತ್ತಾಪುರ, ಸರ್ವಾಧಿಕಾರಿ ಧೋರಣೆ ಎಂದು ಕರೆಯುತ್ತೀರಾ? ಕೋರ್ಟ್‌ ಆದೇಶದಲ್ಲಿ ಇವತ್ತು ಪಥ ಸಂಚಲನ ಮಾಡಬೇಕು ಎಂದು ಎಲ್ಲಿ ಹೇಳಿದೆ? ಮತ್ತೊಮ್ಮೆ ಅರ್ಜಿ ಹಾಕಿದರೆ ಪರಿಗಣಿಸಿ ಎಂದು ಹೇಳಿದೆ. ಮೆರವಣಿಗೆ ಮಾಡಲು ಭೀಮ್‌ ಆರ್ಮಿ, ದಲಿತ ಪ್ಯಾಂಥರ್ಸ್, ಆರ್‌ಎಸ್‌ಎಸ್‌, ಕಾಂಗ್ರೆಸ್‌ಗೂ ಹಕ್ಕಿದೆ. ಪಥ ಸಂಚಲನಕ್ಕೆ ಅರ್ಜಿ ಸಲ್ಲಿಸಿದರೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡುತ್ತೇವೆ ಎಂದು ಖರ್ಗೆ ಹೇಳಿದರು.

ಪಥ ಸಂಚಲನದಲ್ಲಿ ಎಷ್ಟು ಜನ ಸೇರುತ್ತಾರೆ ಎಂಬ ಮಾಹಿತಿಯನ್ನು ತಹಸೀಲ್ದಾರ್‌ಗೆ ನೀಡಿಲ್ಲ. ಸ್ಥಳದ ಎನ್‌ಒಸಿ ಕೊಟ್ಟಿಲ್ಲ, ದಾಖಲೆ ನೀಡಿಲ್ಲ, ಅನುಮತಿ ಕೇಳಿಲ್ಲ, ಸಂಘದ ನೋಂದಣಿ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂದ ಅವರು, ನನಗೆ ಬುದ್ಧಿ ಕಲಿಸಬೇಕೆಂದು ಉದ್ದೇಶಪೂರ್ವಕವಾಗಿ ನನ್ನ ಕ್ಷೇತ್ರದಲ್ಲಿ ಪಥ ಸಂಚಲನ ಮಾಡಲು ನಿರ್ಧರಿಸಲಾಗಿದೆ ಎಂದರು.

PREV
Read more Articles on

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ