ಹಾನಗಲ್ಲ: ದೇಶದ ಆರ್ಥಿಕತೆ ಕುಸಿಯುತ್ತಿದೆ. ಸಮಸ್ಯೆಗಳು ಹೆಚ್ಚುತ್ತಿವೆ. ಕೈಗಾರಿಕೆಗಳು ಸ್ಥಗಿತಗೊಳ್ಳುತ್ತಿದ್ದು, ಉದ್ಯೋಗ ನಷ್ಟ ಉಂಟಾಗುತ್ತಿದೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಸವಾಲು ಎದುರಿಸಿ, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ತಾಲೂಕಿನ ಅಕ್ಕಿಆಲೂರಿನ ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.
ಕಾಲ ಕಳೆದಂತೆ ಮಾನವ ಅಲ್ಪ ಮಾನವನಾಗುತ್ತಿದ್ದಾನೆ. ಬರೀ ಭೇದಭಾವಗಳಲ್ಲಿ ಮುಳುಗಿ ಹೋಗಿದ್ದು, ಜವಾಬ್ದಾರಿ, ಕರ್ತವ್ಯಗಳನ್ನು ಮರೆಯುತ್ತಿದ್ದಾರೆ. ಸಮಾಜದಲ್ಲಿ ನಾನಾ ಸಮಸ್ಯೆಗಳು ಕಾಡುತ್ತಿವೆ. ವಿದ್ಯಾರ್ಥಿಗಳು ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ಕಾಳಜಿ ವಹಿಸಬೇಕಿದೆ ಎಂದರು.ರಾಣಿಬೆನ್ನೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಪ್ರಭು ಕೋಡದ ಮಾತನಾಡಿ, ಸಾಧನೆಗೆ ಮಾರ್ಗಗಳು ಸಾಕಷ್ಟಿವೆ. ಆದರೆ ಅರಿಯುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕಿದೆ. ಮನರಂಜನೆಯ ಮನಸ್ಥಿತಿಯಿಂದ ಮೊದಲಿಗೆ ವಿದ್ಯಾರ್ಥಿಗಳು ಹೊರಬರಬೇಕಿದೆ. ಸಮಯ ವ್ಯರ್ಥವಾಗಿ ಕಳೆಯದೇ ಅಧ್ಯಯನಕ್ಕೆ ಒತ್ತು ನೀಡಬೇಕಿದೆ ಎಂದರು.ಪ್ರಾಚಾರ್ಯ ಡಾ. ವಿ.ಎಂ. ಕುಮ್ಮೂರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಲಹಾ ಸಮಿತಿ ಸದಸ್ಯರಾದ ಎ.ಬಿ. ಶೇಖಬಾಯಿ, ಗುತ್ತೆಪ್ಪ ಸೈದಣ್ಣನವರ, ಉಡುಚಪ್ಪ, ಟಿಎಪಿಸಿಎಂಎಸ್ ನಿರ್ದೇಶಕ ಬಸಣ್ಣ ಹಾಲಬಾವಿ, ಉಪನ್ಯಾಸಕರಾದ ಡಾ. ಯಮುನಾ ಕೋಣೇಸರ, ಡಾ. ಕೃಷ್ಣಮೂರ್ತಿ ಆರ್., ಮಲ್ಲನಗೌಡ ಕುಲಕರ್ಣಿ, ಪ್ರೊ. ಎಂ.ಎಂ. ಬಳಬಟ್ಟಿ, ಗಂಗಾಧರ ಪಿ.ಆರ್., ಶಿವರಾಜ ಹೂಗಾರ, ಸಂತೋಷ ಜಿ., ಅವಿನೇಶ ಇದ್ದರು.