- ಕೆಎಎಸ್ - ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವಸಿದ್ಧತಾ ಕಾರ್ಯಾಗಾರ
ನಾಗರಿಕ ಸೇವಾ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ವಿದ್ಯಾರ್ಥಿಗಳಿಗೆ ಆಸ್ತಿ ಅಂತಸ್ತಿನ ಅರ್ಹತೆ ಬೇಕಿಲ್ಲ. ಅಪಾರ ಜ್ಞಾನ, ಸಾಧಿಸುವ ಛಲ, ಕಠಿಣ ಪರಿಶ್ರಮ ಹಾಗೂ ನಿಗಧಿತ ಗುರಿ ತಲುಪುವ ಹಠವಿರಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನಾ ಹೇಳಿದರು.
ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ಕೆಎಎಸ್ ಮತ್ತು ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವಸಿದ್ಧತಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಜೀವನದಲ್ಲಿ ಮನುಷ್ಯನಿಗೆ ಪ್ರತಿ ಬಾರಿ ಗೆಲುವು ತೃಪ್ತಿ ನೀಡುವುದಿಲ್ಲ. ಸೋಲಿನ ಬಳಿಕ ಗೆಲುವಿನ ನಗೆ ಬೀರುವುದು ನಿಜ ವಾದ ಸಾಧನೆ. ವಿದ್ಯಾರ್ಥಿ ದೆಸೆಯಲ್ಲಿ ಸಣ್ಣ ಪುಟ್ಟ ಕನಸನ್ನು ಕಾಣದೇ, ಸಮಾಜ ಮುನ್ನಡೆಸುವ ಕೆಎಎಸ್ ಮತ್ತು ಐಎಎಸ್ ಹುದ್ದೆಗಳನ್ನು ಅಲಂಕರಿಸುವ ಬಹುದೊಡ್ಡ ಕನಸನ್ನು ಕಂಡು ಸತತವಾಗಿ ಈಡೇರಿಸುವ ಪ್ರಯತ್ನಕ್ಕೆ ಮುಂದಾಗಬೇಕು ಎಂದರು.
ಸಾರ್ವಜನಿಕ ಸೇವಾ ಹುದ್ದೆಗಳಾದ ಕೆಎಎಸ್, ಐಎಎಸ್, ಐಪಿಎಸ್‌ನ ಒಂದು ಸಹಿ ಮಹತ್ವ ನಿರ್ಣಯ ಕೈಗೊಳ್ಳುತ್ತದೆ. ಒಂದು ಫೈಲ್‌ನಿಂದ ಲಕ್ಷಾಂತರ ಜನರ ಬದುಕಿಗೆ ಸಹಾಯವಾಗಲಿದೆ. ಅಲ್ಲದೇ ಸಾಮಾಜಿಕ ಪಿಡುಗು, ಬಾಲ್ಯವಿವಾಹ ಪ್ರಕರಣ ಹೋಗಲಾಡಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪೂರಕವಾಗಲಿದೆ ಎಂದರು.
ವಿಶೇಷವಾಗಿ ಕಸಾಪ ಸಾಹಿತ್ಯ, ಪದ್ಯ, ಕನ್ನಡ ಕಟ್ಟುವ ಕಾಯಕದ ನಡುವೆಯೂ ವಿದ್ಯಾರ್ಥಿಗಳ ಶೈಕ್ಷ ಣಿಕ ಬೆಳವಣಿಗೆಗೆ ಪರಿಣಿತರ ತಂಡದೊಂದಿಗೆ ಕಾರ್ಯಾಗಾರ ಆಯೋಜಿಸಿ ಸ್ಪಂದಿಸುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ಕೂಡಾ ಕಾರ್ಯಾಗಾರದ ಸಂಪೂರ್ಣ ಮಾಹಿತಿ ಪಡೆದುಕೊಂಡು ನಾಗರೀಕ ಸೇವಾ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದರು.
ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಧನೆ ಇಲ್ಲದೇ ಸತ್ತರೇ ಮತ್ತು ಆದರ್ಶವಿಲ್ಲದೇ ಬದುಕು ಮನುಷ್ಯನ ಜೀವನ ವ್ಯರ್ಥವಾದಂತೆ. ಕೇವಲ ಎಂಜಿನಿಯರ್, ಮೆಡಿಕಲ್ ಕ್ಷೇತ್ರಕ್ಕೆ ಸೀಮಿತ ರಾಗದೇ ನಾಗರಿಕ ಸೇವಾ ಕಾರ್ಯದಲ್ಲಿ ತೊಡಗಲು ಯುವ ಜನತೆ ಮುಂದಾಗಿ ಬಡ ವರ್ಗದ ಜನರಿಗೆ ಸ್ಪಂದಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಭೂಸ್ವಾಧಿನಾಧಿಕಾರಿ ಡಾ. ಕಾಂತರಾಜ್, ಹಾಸನ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಎಂ.ಬಿ.ಚನ್ನಕೇಶವ, ಕಸಾಪ ತರೀಕೆರೆ ಅಧ್ಯಕ್ಷ ರವಿ ದಳವಾಯಿ, ಚಿಕ್ಕಮಗಳೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ಸಹಾಯಕ ಮುಖ್ಯ ಚುನಾವಣಾಧಿಕಾರಿ ಎ.ಎಚ್.ಮಹೇಂದ್ರ, ಸಾಹಿತಿ ಡಾ. ಮರುಳಸಿದ್ದಯ್ಯ ಪಟೇಲ್, ಕನ್ನಡಶ್ರೀ ಭಗವಾನ್ ಉಪಸ್ಥಿತರಿದ್ದರು.10 ಕೆಸಿಕೆಎಂ 1