ಬಗರ್‌ಹುಕುಂ ರೈತರಿಗೆ ಸೌಲಭ್ಯ ನೀಡಿ: ಆರ್‌.ವಿ. ದೇಶಪಾಂಡೆ

KannadaprabhaNewsNetwork |  
Published : Jul 12, 2024, 01:33 AM IST
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಗುರುವಾರ ತಾಲೂಕ ಆಡಳಿತ ಸೌಧದಲ್ಲಿ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಗಳ ಬಗರ್ ಹುಕುಂ ಸಮಿತಿ ಸಭೆಯು ನಡೆಯಿತು. | Kannada Prabha

ಸಾರಾಂಶ

ಜಮೀನಿನ ಹಕ್ಕು ಇಲ್ಲದೇ ಆ ರೈತರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಅಂಥ ರೈತರಿಗೆ ನೆರವು ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಹಳಿಯಾಳ: ಬಹುವರ್ಷದಿಂದ ಭೂಮಿಯ ಹಕ್ಕು ಇಲ್ಲದೇ ಬದುಕನ್ನು ಸಾಗಿಸುತ್ತಿರುವ ಬಡ ರೈತರಿಗೆ ಕಾನೂನು ಚೌಕಟ್ಟಿನಲ್ಲಿ ಸಹಕಾರ ನೀಡಬೇಕಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಗುರುವಾರ ತಾಲೂಕು ಆಡಳಿತ ಸೌಧದಲ್ಲಿ ನಡೆದ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕುಗಳ ಬಗರ್‌ಹುಕುಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಮೀನಿನ ಹಕ್ಕು ಇಲ್ಲದೇ ಆ ರೈತರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಅಂಥ ರೈತರಿಗೆ ನೆರವು ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಅದಕ್ಕಾಗಿ ಅಧಿಕಾರಿಗಳು ಸಹಾಯ ಮಾಡುವ ಮನಸ್ಸಿನಿಂದ ಸೇವೆ ಸಲ್ಲಿಸಿ ಎಂದರು. ಅಧಿಕಾರಿಗಳಿಗೆ ಸಹಾಯ ಮಾಡುವ ಮನಸ್ಸು ಹಾಗೂ ಹೃದಯವಿದ್ದರೆ ಎಂತಹ ಜಟಿಲವಾದ ಕೆಲಸಗಳು ಕೂಡ ಸರಳವಾಗಿ ಬಗೆಹರಿಯುತ್ತವೆ ಎಂದರು.

ನನ್ನ ಕ್ಷೇತ್ರದಲ್ಲಿ ಬಡವರಿಗೆ, ಶೋಷಿತರಿಗೆ ಅನ್ಯಾಯವಾಗಬಾರದು. ಅವರ ಹಕ್ಕುಗಳು, ಸೌಲಭ್ಯಗಳು ಅವರಿಗೆ ದೊರೆಯಬೇಕೆಂಬ ಸದೀಚ್ಛೆ ನನ್ನದಾಗಿದೆ. ಇದನ್ನು ಅರಿತು ಅದಕ್ಕೆ ತಕ್ಕಂತೆ ಅಧಿಕಾರಿಗಳು ಕಾರ್ಯನಿರ್ವಹಿಸಿ ಎಂದರು.

ತಹಸೀಲ್ದಾರ್ ಆರ್.ಎಚ್. ಭಾಗವಾನ ಅವರು, ಸಮಿತಿಗೆ ಸಲ್ಲಿಕೆಯಾದ ಅರ್ಜಿಗಳ ಮಾಹಿತಿಯನ್ನು ನೀಡಿ, ಈವರೆಗೆ 519 ಅರ್ಜಿಗಳು ಬಂದಿದ್ದು, ಅದರಲ್ಲಿ 48 ಫಲಾನುಭವಿಗಳಿಗೆ ಹಕ್ಕುಪತ್ರವನ್ನು ನೀಡಲಾಗಿದೆ. 115 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 350 ಅರ್ಜಿಗಳು ಬಾಕಿಯಿವೆ. ಬಾಕಿ ಉಳಿದ ಅರ್ಜಿಗಳು ಪರಿಶೀಲಿಸಲು ಸ್ಥಳಕ್ಕೆ ಭೇಟಿ ಮಾಡಿ ಸೂಚಿತ ಆ್ಯಪ್‌ ಮೂಲಕ ಪರಿಶೀಲನೆ ಮಾಡಲಿದ್ದೇವೆ ಎಂದರು.

ಬಗರ್‌ಹುಕುಂ ಸಮಿತಿಯ ಸಭೆಯ ನಂತರ ತಾಲೂಕಾಡಳಿತ ಮತ್ತು ಪೌರಾಡಳಿತ ಸಭೆ ನಡೆಸಿ ರಸ್ತೆ ಅತಿಕ್ರಮಣ ಸಮಸ್ಯೆಯ ಬಗ್ಗೆ ದೇಶಪಾಂಡೆಯವರು ಪರಿಶೀಲಿಸಿದರು.

ಮತ ನನಗೆ ಕಡಿಮೆ ಬಿದ್ದರೆ ಬೀಳಲಿ: ನನಗೆ ಮತ ಕಡಿಮೆ ಬಿದ್ದರೂ ಬೀಳಲಿ. ಅದರ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳಬೇಡಿ. ನಿಮಗೆ ನೀಡಿರುವ ಸರ್ಕಾರಿ ಅಧಿಕಾರ ಬಳಸಿ ನಿಮ್ಮ ಕೆಲಸ ಮಾಡಿ. ನನ್ನ ಹಾಗೇ ಯಾವ ಜನಪ್ರತಿನಿಧಿಯು ಅಧಿಕಾರಿಗಳಿಗೆ ಹೀಗೆ ಹೇಳಲ್ಲ ಎಂಬುದನ್ನು ಅಧಿಕಾರಿಗಳು ಮರೆಯಬಾರದು ಎಂದರು.

ಪಟ್ಟಣದಲ್ಲಿ ವ್ಯಾಪಾರ- ವಹಿವಾಟು ನಡೆಸುವ ಹೆಸರಿನಲ್ಲಿ ರಸ್ತೆ ಅತಿಕ್ರಮಣ ಮತ್ತೆ ಮುಂದುವರಿದಿದ್ದು, ತಕ್ಷಣ ಮುಖ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ದೇಶಪಾಂಡೆ ಸೂಚಿಸಿದರು.

ಹಳಿಯಾಳ ಅಭಿವೃದ್ಧಿಗೆ ಕೋಟ್ಯಂತರ ರು. ಅನುದಾನವನ್ನು ವಿನಿಯೋಗಿಸಲಾಗಿದೆ. ಹೀಗಿರುವಾಗ ರಸ್ತೆ ಅತಿಕ್ರಮಣ ಮಾಡಿ ಪಟ್ಟಣದ ಸೌಂದರ್ಯಕ್ಕೆ ಧಕ್ಕೆ ತರುವುದು ಸರಿಯಲ್ಲ ಎಂದರು. ನನಗೆ ಬಡವರ ಬಗ್ಗೆ ಕಾಳಜಿಯಿದೆ. ಬೀದಿಬದಿಯ ವ್ಯಾಪಾರಸ್ಥರಿಗೆ ಅವರ ಆರ್ಥಿಕ ವಹಿವಾಟಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡಿ ಎಂದರು.

ಜೋಯಿಡಾ ತಹಸೀಲ್ದಾರ್‌ ಮಂಜುನಾಥ ಮುನೋಳ್ಳಿ, ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಬಗರ್ ಹುಕುಂ ಸಮಿತಿ ಸದಸ್ಯ ಸುಭಾಸ ಕೊರ್ವಕರ, ಎಚ್.ಬಿ. ಪರಶುರಾಮ, ಜ್ಯೂಲಿಯಾನ್ ಫರ್ನಾಂಡೀಸ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ