ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಗ್ರಾಮ ಪಂಚಾಯತಿ ಸದಸ್ಯರಿದ್ದರೂ ಬರೀ ಹೆಸರಿಗಿದ್ದಾರೆ. ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿಲ್ಲ, ಗ್ರಾಮದಲ್ಲಿ ಹುಡುಕಿದರೂ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುವಂತಾಗಿದೆ. ಇದರಿಂದ ನಿತ್ಯ ಗ್ರಾಮಸ್ಥರು ಮೂಗುಮುಚ್ಚಿಕೊಂಡೇ ಸಂಚರಿಸಬೇಕು, ಕಸ ಸಂಗ್ರಹಕ್ಕೆ ಪಂಚಾಯತಿ ವತಿಯಿಂದ ವಾಹನ ಬಾರದ ಕಾರಣ ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ. ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಇರುವ ೧೫೦ ಮನೆಗಳೂ ಹೆಂಚಿನ ಮನೆಗಳೇ ಹಾಗೂ ಮುರಕಳಿಂದ ಕೂಡಿವೆ. ಸರ್ಕಾರ ಬಡವರಿಗೆ ಮನೆ ನಿರ್ಮಾಣಕ್ಕೆ ಪ್ರತಿ ವರ್ಷ ಕೋಟ್ಯಂತರ ವೆಚ್ಚ ಮಾಡುತ್ತಿದೆ, ಆದರೆ ಸರ್ಕಾರ ಮನೆಗಳು ಈ ಗ್ರಾಮದಿಂದ ದೂರ ಉಳಿದಿದೆ. ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದ ಕಾರಣ ಕೆಂಪು ಬಸ್ ಮುಖ ನೋಡಿ ಹಲವು ವರ್ಷಗಳೇ ಕಳೆದಿದೆ. ಏನು ಬೇಕಾದರೂ ೩ಕಿ.ಮೀ ನಡೆದುಕೊಂಡು ಕನಮನಹಳ್ಳಿಗೆ ಹೋಗಿ ಅಲ್ಲಿಂದ ಬಸ್‌ಗೆ ಹೋಗಬೇಕು. ಇನ್ನು ಮಕ್ಕಳಿಗೆ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಿದೆ,ನಂತರ ಪ್ರೌಡ ಶಾಲೆಗಾಗಿ ಮೂರು ಕಿ.ಮೀ ನಡೆದುಕೊಂಡು ಕನಮನಹಳ್ಳಿಗೆ ಬರಬೇಕು.ಪಡಿತರಕ್ಕೆ ಸರ್ವರ್ ಸಮಸ್ಯೆ
ಗ್ರಾಮದಲ್ಲಿ ಜನರ ಆರೋಗ್ಯ ಕೆಟ್ಟರೆ ೮ ಕಿ.ಮೀ ದೂರದ ತೊಪ್ಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಡೆದುಕೊಂಡೇ ಕಾಡಿನಲ್ಲಿ ಹೋಗಬೇಕು. ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಗ್ರಾಮದಲ್ಲೆ ಉಪ ನ್ಯಾಯಬೆಲೆ ಅಂಗಡಿಯನ್ನು ತೆರೆಯಲಾಗಿದೆ. ಆದರೆ ಸರ್ವರ್ ಸಿಗದೆ ಅಂಗಡಿ ಮಾಲೀಕ ಪ್ರತಿ ತಿಂಗಳು ಪಡಿತರ ವಿತರಿಸಲು ಹೆಣಗಾಡಬೇಕಾಗಿದೆ. ದಿನವಿಡೀ ಸಾಲಾಗಿ ನಿಂತರೂ ಪಡಿತರ ಸಿಗುವುದು ಕಷ್ಟವಾಗಿದೆ.ಆದರೂ ಗ್ರಾಪಂ, ತಾಲೂಕು ಆಡಳಿತ ಇಲ್ಲಿನ ಜನರ ಭವಣೆಯನ್ನು ಕೇಳುವವರೇ ಇಲ್ಲ. ಶುದ್ದವಾದ ನೀರು ಕುಡಿಯಲೂ ವ್ಯವಸ್ಥೆ ಇಲ್ಲ, ಜತೆಗೆ ಕಾಡಾನೆಗಳ ಹಾವಳಿ ಬೇರೆ. ಇನ್ನಾದರೂ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಮನಸ್ಸು ಮಾಡುವಂತೆ ಗ್ರಾಮಸ್ಥರು ಕೋರಿದ್ದಾರೆ.