ಅಲೆಮಾರಿ ಕಲಾವಿದರ ಗುರುತಿಸಿ ಸೌಲಭ್ಯ ಕಲ್ಪಿಸಿ

KannadaprabhaNewsNetwork | Published : Feb 25, 2025 12:46 AM

ಸಾರಾಂಶ

ಸಾಮಾಜಿಕ ಸ್ಥಾನಮಾನ ಮತ್ತು ಗೌರವಗಳನ್ನು ಹೊಂದಿರದ, ನಿರ್ದಿಷ್ಟ ವಾಸದ ನೆಲೆಗಳಿಲ್ಲದೇ ಭಿಕ್ಷಾಟನೆ, ಮೋಡಿ ಆಟ, ದೊಂಬರಾಟ, ಇನ್ನಿತರ ಕಲೆಗಳನ್ನು ಪ್ರದರ್ಶಿಸಿಕೊಂಡು ಜೀವನ ನಡೆಸುತ್ತಿರುವವರನ್ನು ಜಿಲ್ಲೆಯಲ್ಲಿ ಗುರ್ತಿಸಿ ನಿವೇಶನ ನೀಡುವುದು, ನಿವೇಶನ ಇದ್ದವರಿಗೆ ವಸತಿ ಸೌಲಭ್ಯ ಕಲ್ಪಿಸುವ ಮೂಲಕ ಒಂದು ನೆಲೆ ಕಲ್ಪಿಸಲು ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಾಮಾಜಿಕವಾಗಿ ತುಂಬಾ ಹಿಂದುಳಿದಿರುವ ಹಾಗೂ ಪ್ರಸ್ತುತ ಪ್ರದರ್ಶನಾತ್ಮಕ ಕಲೆಗಳನ್ನು ಅವಲಂಬಿಸಿ, ಜೀವನ ಸಾಗಿಸುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಲೆಮಾರಿ ಸಮುದಾಯಗಳಿಗೆ ಒಂದು ನಿರ್ದಿಷ್ಟವಾದ ನೆಲೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.

ಜಿಲ್ಲಾ ಪಂಚಾಯತ್‌ನ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ ನಡೆದ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗದ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಕುಂದು ಕೊರತೆಗಳ ಹಾಗೂ ಅಹವಾಲು ಸ್ವೀಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಲೆಮಾರಿ ಕಲಾವಿದರಿಗೆ ಸೌಲಭ್ಯ

ಸಾಮಾಜಿಕ ಸ್ಥಾನಮಾನ ಮತ್ತು ಗೌರವಗಳನ್ನು ಹೊಂದಿರದ, ನಿರ್ದಿಷ್ಟ ವಾಸದ ನೆಲೆಗಳಿಲ್ಲದೇ ಭಿಕ್ಷಾಟನೆ, ಮೋಡಿ ಆಟ, ದೊಂಬರಾಟ, ಇನ್ನಿತರ ಕಲೆಗಳನ್ನು ಪ್ರದರ್ಶಿಸಿಕೊಂಡು ಜೀವನ ನಡೆಸುತ್ತಿರುವವರನ್ನು ಜಿಲ್ಲೆಯಲ್ಲಿ ಗುರ್ತಿಸಿ ನಿವೇಶನ ನೀಡುವುದು, ನಿವೇಶನ ಇದ್ದವರಿಗೆ ವಸತಿ ಸೌಲಭ್ಯ ಕಲ್ಪಿಸುವ ಮೂಲಕ ಒಂದು ನೆಲೆ ಕಲ್ಪಿಸಲು ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ಅಲೆಮಾರಿ ಸಮುದಾಯದ ವಿದ್ಯಾರ್ಥಿಗಳಿಗೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೆ ನೇರವಾಗಿ ಜಿಲ್ಲೆಯಲ್ಲಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲು ಕ್ರಮವಹಿಸಲಾಗುವುದು ಎಂದರು.

ಅಲೆಮಾರಿಗಳಿಗೆ ಆದ್ಯತೆ ನೀಡಿ

ಎಲ್ಲ ತಹಸೀಲ್ದಾರ್ ಗಳು ಹಾಗೂ ತಾಪಂ ಇಒಗಳು ಅಲೆಮಾರಿ ಸಮುದಾಯದ ಅಹವಾಲುಗಳನ್ನು ಇತ್ಯರ್ಥ ಪಡಿಸಲು ಆದ್ಯತೆ ನೀಡಬೇಕು. ತಮ್ಮ ವ್ಯಾಪ್ತಿಯಲ್ಲಿ ಈ ಸಮುದಾಯವರು ವಾಸಿಸುವ ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿ, ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಅಲೆಮಾರಿ ಸಮುದಾಯಗಳಾದ ದೊಂಬರು, ಬುಡ್ಗಜಂಗಮ, ಹಂದಿಜೋಗಿ, ಚನ್ನದಾಸರ್, ಸುಡುಗಾಡು, ಸಿದ್ದರು, ಮಾಲಸನ್ಯಾಸಿ, ಶಿಳ್ಯೆಕ್ಯಾತ, ದಕ್ಕಲಿಗರು, ಮಾಂಗ್ ಗಾರುಡಿ, ಸಿಂದೋಳ್ಳು, ಕೊರಚ-ಕೊರಮ, ಹಕ್ಕಿ-ಪಿಕ್ಕಿ, ಮೇದಾರ ಸಮುದಾಯಗಳು ಸೇರಿದಂತೆ ಇನ್ನಿತರ ಸಮುದಾಯದ ಜನರು ತಮ್ಮ ಸಮಸ್ಯೆಗಳ ಇತ್ಯರ್ಥಕ್ಕೆ ಅಹವಾಲುಗಳನ್ನು ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿಗಳಿಗೆ ನೀಡಿದರು. ಸಭೆಯಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಬಾಲಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ಸಹಾಯಕ ನಿರ್ದೇಶಕ ಶೇಷಾದ್ರಿ, ಚಿಕ್ಕಬಳ್ಳಾಪುರ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ಎಸ್.ವಿ. ಗಂಗಾಧರಪ್ಪ, ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸ ಮತ್ತಿತರರು ಇದ್ದರು.

Share this article