ರಾಜ್ಯದ 4.5 ಕೋಟಿ ಜನರಿಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯ

KannadaprabhaNewsNetwork | Published : Apr 2, 2024 1:02 AM

ಸಾರಾಂಶ

ಹೊಸಕೋಟೆ: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದಂತಹ 5 ಗ್ಯಾರಂಟಿಗಳನ್ನ ಮೊದಲನೇ ಕ್ಯಾಬಿನೆಟ್‌ನಲ್ಲಿ ನಾಲ್ಕು ಹಾಗೂ 100 ದಿನದಲ್ಲಿ ಐದನೇ ಗ್ಯಾರಂಟಿಯನ್ನು ಅನುಷ್ಠಾನ ಮಾಡಿದ್ದು, ರಾಜ್ಯದಲ್ಲಿ 4.5 ಕೋಟಿ ಜನರಿಗೆ ಇದರ ಪ್ರಯೋಜನ ದೊರೆತಿದೆ ಎಂದು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.

ಹೊಸಕೋಟೆ: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದಂತಹ 5 ಗ್ಯಾರಂಟಿಗಳನ್ನ ಮೊದಲನೇ ಕ್ಯಾಬಿನೆಟ್‌ನಲ್ಲಿ ನಾಲ್ಕು ಹಾಗೂ 100 ದಿನದಲ್ಲಿ ಐದನೇ ಗ್ಯಾರಂಟಿಯನ್ನು ಅನುಷ್ಠಾನ ಮಾಡಿದ್ದು, ರಾಜ್ಯದಲ್ಲಿ 4.5 ಕೋಟಿ ಜನರಿಗೆ ಇದರ ಪ್ರಯೋಜನ ದೊರೆತಿದೆ ಎಂದು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.

ನಗರದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಡವರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದ ಮೊದಲ ಸರ್ಕಾರ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರವಾಗಿದೆ. ಎಲ್ಲಾ ಗ್ಯಾರಂಟಿಗಳು ಮಹಿಳೆಯರಿಗೆ ದೊರೆತಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಯೋಜನೆಗಳನ್ನು ಜನರಿಗೆ ಅರ್ಥ ಮಾಡಿಸಬೇಕು. ಕಾಂಗ್ರೆಸ್‌ ಸರ್ಕಾರ ಮಾಡಿಕೊಟ್ಟಿರುವ ಅನುಕೂಲಗಳೆ ಬಗ್ಗೆ ಹೇಳಬೇಕು ಎಂದು ಹೇಳಿದರು. ಕೇವಲ ಕೋಮುಗಲಭೆ ಮಾಡಿ ಧರ್ಮಗಳ ಮಧ್ಯೆ ಜಗಳ ತಂದಿಟ್ಟು ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರ ದೇಶಕ್ಕೆ ಮಾರಕವಾಗಿದೆ. ಇದರಿಂದ ದೇಶದಲ್ಲಿ ಜಾತ್ಯತೀತ ಪಕ್ಷ ಆಡಳಿತಕ್ಕೆ ಬರದೇ ಇದ್ದರೆ ಮುಂದಿನ ದಿನಗಳಲ್ಲಿ ಜನರೇ ಬದುಕೇ ಕಷ್ಟವಾಗಲಿದೆ. ಪ್ರೀತಿ, ವಾತ್ಸಲ್ಯದಿಂದ ಬದುಕಬೇಕೆಂದರೆ ದೇಶದ ಸ್ವಾತಂತ್ರ‍್ಯ ಹೋರಾಟಗಾರರಿಗೆ ಗೌರವ ತರುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ದೇಶದಲ್ಲಿ ಆಡಳಿತ ಮಾಡಬೇಕು. ಈ ನಿಟ್ಟಿನಲ್ಲಿ ೨೮ಕ್ಕೆ ೨೮ ಸ್ಥಾನಗಳು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಕೆಲಸ ಮಾಡಬೇಕು. ಅಭ್ಯರ್ಥಿಗಳ ಗೆಲುವಿಗೆ ಪ್ರತಿ ಕಾರ್ಯಕರ್ತರು ಶ್ರಮ ಹಾಕಬೇಕು ಎಂದು ಹೇಳಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನನ್ನ ಮೇಲೆ ಸಾಕಷ್ಟು ನಂಬಿಕೆ ಇಟ್ಟು ಟಿಕೆಟ್ ಕೊಟ್ಟಿದ್ದಾರೆ. ಯುವ ಕಾಂಗ್ರೆಸ್ ಘಟಕದಲ್ಲಿ ಪ್ರತಿನಿಧಿಯಾಗಿ ಕೋವಿಡ್ ಸಮಯದಲ್ಲಿ ಸಾಕಷ್ಟು ಸೇವೆ ಮಾಡಿದ್ದರಿಂದ ಟಿಕೆಟ್ ಲಬಿಸಿದೆ. ಆದ್ದರಿಂದ ಜನರ ಆಶೀರ್ವಾದ ನನಗೆ ಧಕ್ಕಿದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡುತ್ತೇನೆ ಎಂದು ಹೇಳಿದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಜನವಿರೋಧಿ ನೀತಿಗಳಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಾಂಗ್ರೆಸ್ ಸರ್ಕಾರ ೫ ಗ್ಯಾರಂಟಿಗಳನ್ನು ನೀಡಿ ಬಡವರ ಜನಜೀವನಕ್ಕೆ ಅನುಕೂಲ ಮಾಡಿಕೊಟ್ಟಿದೆ. ಈ ಯೋಜನೆಗಳು ಪ್ರತಿ ಬಡವರ ಮನೆಗೆ ನೇರವಾಗಿ ತಲುಪಿಸುವ ಕಾರ್ಯವನ್ನು ಮಾಡಿದೆವು. ಆದರೆ ಮುಂದಿನ ದಿನಗಳಲ್ಲಿ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮತ್ತೆ ಅಗತ್ಯ ದಿನ ಬಳಕೆ ವಸ್ತುಗಳು ಗಗನಕ್ಕೇರುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್, ಚೀಮಂಡಹಳ್ಳಿ ಮುನಿಶಾಮಯ್ಯ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಡಾ. ಹೆಚ್.ಎಂ.ಸುಬ್ಬರಾಜ್ ಹಾಜರಿದ್ದರು.

ಕೋಟ್‌...........ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಐಐಟಿ, ಏಮ್ಸ್ ಬಂದಿತು. ಆದರೆ ಬಿಜೆಪಿಯವರು ದೇವಸ್ಥಾನ ಕಟ್ಟಿ ಜನರಿಂದ ಮತ ಕೇಳುತ್ತಿದ್ದಾರೆ. ಸಂವಿಧಾನ ಹಾಗೂ ರಾಜ್ಯ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಆದ್ದರಿಂದ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿದರೆ ಕೇಂದ್ರ, ರಾಜ್ಯ, ಹಾಗೂ ಕಾರ್ಪೊರೇಟ್ ಎನ್‌ಜಿಒಗಳಿಂದ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗುವುದು

-ರಕ್ಷಾ ರಾಮಯ್ಯ, ಕಾಂಗ್ರೆಸ್‌ ಅಭ್ಯರ್ಥಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಫೋಟೋ : 1 ಹೆಚ್‌ಎಸ್‌ಕೆ 2

ಹೊಸಕೋಟೆಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಸಚಿವ ಕೆ.ಹೆಚ್. ಮುನಿಯಪ್ಪ, ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.

Share this article