ಪಂಚಮಸಾಲಿಗಳಲ್ಲಿ ತಾರಕಕ್ಕೇರಿದ ಬಣ ರಾಜಕೀಯ!

KannadaprabhaNewsNetwork |  
Published : Apr 18, 2025, 12:32 AM IST
ಬಸವ ಜಯಮೃತ್ಯುಂಜಯ ಶ್ರೀ | Kannada Prabha

ಸಾರಾಂಶ

ಒಂದು ಗುಂಪು ಶ್ರೀಗಳನ್ನು ಪೀಠದಿಂದ ಕೆಳಕ್ಕಿಳಿಸಲು ಪಣ ತೊಟ್ಟಿದ್ದರೆ, ಮತ್ತೊಂದು ಬಣ ಶ್ರೀಗಳ ಪರವಾಗಿ ಹೋರಾಟಕ್ಕಿಳಿದಿದೆ. ಇದರಿಂದಾಗಿ ಸಮಾಜದಲ್ಲಿನ ಭಿನ್ನಮತ ತಾರಕ್ಕೇರಿದ್ದು, ಇದು ಮತ್ತೊಂದು ಪಂಚಮಸಾಲಿ ಪೀಠ ಸ್ಥಾಪನೆಗೂ ನಾಂದಿಯಾಗಿದೆ.

ಶಿವಾನಂದ ಗೊಂಬಿ ಹುಬ್ಬಳ್ಳಿ

ಬಿಜೆಪಿಯಿಂದ ಉಚ್ಚಾಟಿತರಾದ ಬಸನಗೌಡ ಪಾಟೀಲ ಯತ್ನಾಳ ಅವರ ಪರವಾಗಿ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಶ್ರೀಗಳು ಬ್ಯಾಟಿಂಗ್‌ ಮಾಡಿದ ಪರಿಣಾಮವಾಗಿ ಪಂಚಮಸಾಲಿ ಸಮುದಾಯದಲ್ಲಿ ಬಣರಾಜಕೀಯ ಬಲು ಜೋರಾಗಿದೆ.

ಒಂದು ಗುಂಪು ಶ್ರೀಗಳನ್ನು ಪೀಠದಿಂದ ಕೆಳಕ್ಕಿಳಿಸಲು ಪಣ ತೊಟ್ಟಿದ್ದರೆ, ಮತ್ತೊಂದು ಬಣ ಶ್ರೀಗಳ ಪರವಾಗಿ ಹೋರಾಟಕ್ಕಿಳಿದಿದೆ. ಇದರಿಂದಾಗಿ ಸಮಾಜದಲ್ಲಿನ ಭಿನ್ನಮತ ತಾರಕ್ಕೇರಿದ್ದು, ಇದು ಮತ್ತೊಂದು ಪಂಚಮಸಾಲಿ ಪೀಠ ಸ್ಥಾಪನೆಗೂ ನಾಂದಿಯಾಗಿದೆ.

ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡುತ್ತಿದ್ದಂತೆ ಇತ್ತ ಜಯಮೃತ್ಯುಂಜಯ ಶ್ರೀಗಳು ರೊಚ್ಚಿಗೆದ್ದು, ಎಲ್ಲೆಡೆ ಬಿಜೆಪಿ ವಿರುದ್ಧ ಪ್ರತಿಭಟನೆಗೆ ಕರೆ ಕೊಟ್ಟರು. ಕೆಲ ಜಿಲ್ಲೆ, ತಾಲೂಕಗಳಲ್ಲಿ ತಾವೇ ಹೋಗಿ ಯತ್ನಾಳ ಉಚ್ಚಾಟಿಸಿದ್ದಕ್ಕೆ ಪ್ರತಿಭಟನೆ ನಡೆಸಿ ಎಂದೆಲ್ಲ ಸಭೆ ನಡೆಸಿ ಹೇಳಿದ್ದುಂಟು. ಇದಕ್ಕೆ ಮನ್ನಣೆ ನೀಡಿದ ಸಮಾಜದ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದುಂಟು.

ಆದರೆ, ಇದು ಕೂಡಲಸಂಗಮ ಪೀಠವನ್ನು ನಿರ್ವಹಿಸುವ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ಗೆ ಸರಿಯೆನಿಸಲಿಲ್ಲ. ಶ್ರೀಗಳಾದವರು ಒಬ್ಬ ವ್ಯಕ್ತಿ ಅಥವಾ ಪಕ್ಷದ ಪರವಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಸಮಾಜದ ಪರವಾಗಿ ಕೆಲಸ ಮಾಡಬೇಕೇ ವಿನಃ ವ್ಯಕ್ತಿ ಅಥವಾ ಪಕ್ಷದ ಪರವಾಗಿ ಕೆಲಸ ಮಾಡಬಾರದು. ಈ ಹಿಂದೆ ಕೂಡ ಇದೇ ರೀತಿ ಮಾಡಿದ್ದರು. ಆಗಲೂ ನೋಟಿಸ್‌ ನೀಡಲಾಗಿತ್ತು ಆದರೂ ಸುಧಾರಿಸಿಕೊಳ್ಳುತ್ತಿಲ್ಲ ಎಂದು ಸಿಟ್ಟಿಗೆದ್ದ ಟ್ರಸ್ಟ್‌ ಪದಾಧಿಕಾರಿಗಳು, ಸಮಾಜದ ಮುಖಂಡರು, ಸಭೆ ನಡೆಸಿ ಶ್ರೀಗಳ ವಿರುದ್ಧ ಕಿಡಿಕಾರಿದರು. ಇದರೊಂದಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ಸರ್ಕಾರ ಜಾರಿಗೊಳಿಸಲು ಯತ್ನಿಸಿದ್ದ 2ಡಿ, 2ಸಿ ಮೀಸಲಾತಿ ಶ್ರೀಗಳು ದೊಡ್ಡ ಡೀಲ್‌ ಮಾಡಿಕೊಂಡು ಹೋರಾಟವನ್ನು ಹಿಂಪಡೆದಿದ್ದರು. ಶ್ರೀಗಳು ಸಮಾಜದ ಏಳ್ಗೆಗೆ ಶ್ರಮಿಸುತ್ತಿಲ್ಲ. ಸ್ವಂತ ಹೆಸರಲ್ಲಿ ಆಸ್ತಿ ಮಾಡಿಕೊಂಡಿದ್ದಾರೆ. ಇದೆಲ್ಲವನ್ನು ಬಹಿರಂಗಗೊಳಿಸುತ್ತೇನೆ ಎಂದೆಲ್ಲ ಹೇಳಿದ್ದುಂಟು. ಜತೆಗೆ ಶ್ರೀಗಳನ್ನು ಪೀಠದಿಂದಲೇ ಕಿತ್ತು ಹಾಕಬೇಕೆಂಬ ಪ್ರಯತ್ನವೂ ನಡೆದಿರುವುದು ಬಹಿರಂಗ ಸತ್ಯ.

ಅತ್ತ ಗದಗದಲ್ಲಿ ಮಾಜಿ ಸಚಿವ ಸಿ.ಸಿ. ಪಾಟೀಲ ಸೇರಿದಂತೆ ಹಲವು ಮುಖಂಡರು ಶ್ರೀಗಳ ಬೆನ್ನಿಗೆ ನಿಂತು ಮಾತನಾಡಿದ್ದಾರೆ. ಜತೆಗೆ ಟ್ರಸ್ಟ್‌ನಲ್ಲಿ ಇರುವರಲ್ಲಿ ಸಾಕಷ್ಟು ಜನ ಪೇಡ್‌ ಗಿರಾಕಿಗಳು ಎಂದೆಲ್ಲ ಟೀಕಿಸಿದ್ದಾರೆ. ಜತೆಗೆ ತಾಲೂಕು, ಜಿಲ್ಲಾ ಕೇಂದ್ರಗಳೆಲ್ಲ ಶ್ರೀಗಳ ಬೆಂಬಲಿಗರು ಕಾಶಪ್ಪನವರ ವಿರುದ್ಧ ಹರಿಹಾಯುತ್ತಿದ್ದು, ಶ್ರೀಗಳಿಗೆ ಬಹಿರಂಗ ಕ್ಷಮೆ ಕೇಳಬೇಕು ಎಂದೆಲ್ಲ ಆಗ್ರಹಿಸುತ್ತಿದ್ದಾರೆ.

ಯತ್ನಾಳ ಪರ ಬ್ಯಾಟಿಂಗ್‌ ಮಾಡಿದ್ದಕ್ಕೆ ಶ್ರೀಗಳ ವಿರುದ್ಧ ಹರಿಹಾಯಲಾಗುತ್ತಿದೆ. ಆದರೆ, ಹಿಂದೆ ವೀಣಾ ಕಾಶಪ್ಪನವರ, ವಿನಯ ಕುಲಕರ್ಣಿ ಪರವಾಗಿ ಬ್ಯಾಟಿಂಗ್‌ ಮಾಡಿದ್ದರು. ಆಗ ಏಕೆ ಕಾಶಪ್ಪನವರ ಸುಮ್ಮನೆ ಕುಳಿತ್ತಿದ್ದರು? ಜತೆಗೆ ಶ್ರೀಗಳ ಮೀಸಲಾತಿ ವಿಷಯದಲ್ಲಿ ಡೀಲ್‌ ಮಾಡಿದ್ದರೆ ಆಗಲೇ ಏಕೆ ಅದನ್ನು ಬಹಿರಂಗ ಪಡಿಸಲಿಲ್ಲ ಎಂಬ ಪ್ರಶ್ನೆಯನ್ನು ಶ್ರೀಗಳು ಬೆಂಬಲಿಗರು ಎತ್ತುತ್ತಿದ್ದಾರೆ.

ಎರಡು ಗುಂಪಿನವರು ಬಾಗಲಕೋಟೆ, ಗದಗ, ಹುಬ್ಬಳ್ಳಿ ಎಂದೆಲ್ಲ ಎರಡ್ಮೂರು ದಿನಕ್ಕೊಮ್ಮೆ ಸಭೆ ನಡೆಸುವುದು ನಡೆದೇ ಇದೆ. ಸಭೆ ನಡೆಸಿ ಒಬ್ಬರ ಮೇಲೊಬ್ಬರ ಆರೋಪ- ಪ್ರತ್ಯಾರೋಪ ಮಾಡುವಲ್ಲಿ ನಿರತವಾಗಿವೆ. ಅಕ್ಷರಶಃ ಬಣ ರಾಜಕೀಯ ಭರಾಟೆ ವಿಪರೀತವಾಗಿದೆ.

ಕಾಶಪ್ಪನವರ ಅಧ್ಯಕ್ಷ: ಇವೆಲ್ಲದರ ನಡುವೆಯೇ ಶ್ರೀಗಳ ವಿರುದ್ಧ ಸಿಡಿದೆದ್ದಿರುವ ವಿಜಯಾನಂದ ಕಾಶಪ್ಪನವರ ಅವರನ್ನೇ ಪಂಚಮಸಾಲಿ ಟ್ರಸ್ಟ್‌ಗೆ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಪೀಠದಿಂದ ಕೆಳಕ್ಕಿಳಿಸುವ ಪ್ರಯತ್ನದಲ್ಲಿ ಮೊದಲ ಸಾಲಿನಲ್ಲಿರುವುದೇ ಕಾಶಪ್ಪನವರ ಎಂಬ ಗುಸುಗುಸು ಜೋರಾಗಿದೆ. ಇದೀಗ ಅವರೇ ಟ್ರಸ್ಟ್‌ನ ಅಧ್ಯಕ್ಷರಾಗಿರುವುದರಿಂದ ಶ್ರೀಗಳ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದು ಒಂದೆಡೆಯಾದರೆ, ಒಂದು ವೇಳೆ ಪೀಠದಿಂದ ಕೆಳಕ್ಕಿಳಿಸುವ ನಿರ್ಧಾರಕ್ಕೆ ಟ್ರಸ್ಟ್‌ ಬಂದರೆ, ಶ್ರೀಗಳ ಬೆಂಬಲಿಗರು ಮತ್ತೊಂದು ಪೀಠ ರಚಿಸುವ ಬಗ್ಗೆ ಚಿಂತನೆ ನಡೆದಿದೆ. ಈ ಮೂಲಕ ಟ್ರಸ್ಟ್‌ಗೆ ಸಡ್ಡು ಹೊಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹಾಗೊಂದು ವೇಳೆ ಆದರೆ ಮೂರು ಪೀಠಗಳನ್ನು ಹೊಂದಿರುವ ಪಂಚಮಸಾಲಿ ಸಮಾಜಕ್ಕೆ ನಾಲ್ಕನೆಯ ಪೀಠ ಬಂದಂತಾದರೆ ಅಚ್ಚರಿಯೇನಿಲ್ಲ. ಒಟ್ಟಿನಲ್ಲಿ ಪಂಚಮಸಾಲಿ ಸಮಾಜದಲ್ಲಿನ ಭಿನ್ನಮತ ತಾರಕ್ಕೇರಿರುವುದಂತೂ ಸತ್ಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ