ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ಬಿಗಿಪಟ್ಟಿಗೆ ಮಣಿದ ಕಾರ್ಖಾನೆ

KannadaprabhaNewsNetwork |  
Published : Sep 14, 2025, 01:04 AM IST
13ಎಚ್.ಎಲ್.ವೈ-1: ಹಳಿಯಾಳ ತಹಸೀಲ್ದಾರ ಕಚೇರಿಯಲ್ಲಿ ಕಬ್ಬು ಬೆಳೆಗಾರರ ತಮ್ಮ ಬೇಡಿಕೆಗೆ ಆಗ್ರಹಿಸಿ ಎಂಟು ತಾಸುಗಳಿಗಿಂತ ಹೆಚ್ಚು ಹೊತ್ತು ಸಭೆ ನಡೆಸಿದರು. | Kannada Prabha

ಸಾರಾಂಶ

ಪ್ಯಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಮಣಿದು ಕಬ್ಬು ಬೆಳೆಗಾರರ ಬೇಡಿಕೆಯನ್ನು ಇತ್ಯರ್ಥ ಪಡಿಸಲು ಮುಂದಿನ ವಾರ ಸಭೆ ನಡೆಸಲು ಒಪ್ಪಿಗೆ ಸೂಚಿಸಿದೆ.

ಹಳಿಯಾಳ: ಕಬ್ಬು ಬೆಳೆಗಾರರ ಬಿಗಿ ಪಟ್ಟಿಗೆ ಕೊನೆಗೂ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಮಣಿದು ಕಬ್ಬು ಬೆಳೆಗಾರರ ಬೇಡಿಕೆಯನ್ನು ಇತ್ಯರ್ಥ ಪಡಿಸಲು ಮುಂದಿನ ವಾರ ಸಭೆ ನಡೆಸಲು ಒಪ್ಪಿಗೆ ಸೂಚಿಸಿದೆ. ನಿರ್ಧಾರ ತಿಳಿಸಲು ಎಂಟು ತಾಸು ಹೈಡ್ರಾಮಾ ನಡೆಸಿದ ಕಾರ್ಖಾನೆ ಆಡಳಿತ ಮಂಡಳಿಯು ಸೆ.20 ಅಥವಾ ಸೆ.22ರಂದು ನೀಡಿ, ಈ ಎರಡೂ ದಿನಗಳಲ್ಲಿ ಯಾವ ದಿನ ಸಭೆ ನಡೆಸಲಾಗುವುದೆಂಬ ಅಧಿಕೃತ ಮಾಹಿತಿಯನ್ನು ಸೆ.15ರಂದು ಘೋಷಿಸಲಾಗುವುದೆಂದು ಭರವಸೆ ನೀಡಿತು.

ಶುಕ್ರವಾರ ಮಧ್ಯಾಹ್ನದಿಂದ ರಾತ್ರಿ ಎಂಟು ಗಂಟೆವರೆಗೆ ತಹಸೀಲ್ದಾರ ಕಚೇರಿಯಲ್ಲಿ ಮೊಕ್ಕಾಂ ಹೂಡಿದ ಕಬ್ಬು ಬೆಳೆಗಾರರ ಹೋರಾಟದ ಅಂತಿಮ ಫಲಿತಾಂಶ ಇದು.

ರೈತರು ರೊಚ್ಚಿಗೆದ್ದಿದ್ದೇಕೆ?: ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಸಮೀಪಿಸುತ್ತಿರುವ ಹಿನ್ನೆಲೆ ಶಾಸಕ ಆರ್.ವಿ. ದೇಶಪಾಂಡೆ ಮುತುವರ್ಜಿ ವಹಿಸಿ ಆ.30ರಂದು ಹಳಿಯಾಳ ತಹಸೀಲ್ದಾರರ ಕಚೇರಿಯಲ್ಲಿ ಕಬ್ಬು ಬೆಳೆಗಾರ, ರೈತರ ಪ್ರತಿನಿಧಿಗಳನ್ನು, ಕಾರ್ಖಾನೆ ಆಡಳಿತ ಮಂಡಳಿ ಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳ ಸಭೆ ಕರೆಯಿಸಿದ್ದರು. ಕಬ್ಬು ಬೆಳೆಗಾರರ ಬೇಡಿಕೆ ಇತ್ಯರ್ಥ ಪಡಿಸಲು ವಾರದೊಳಗೆ ಸಭೆ ನಡೆಸುವಂತೆ ಕಾರ್ಖಾನೆಯ ಪ್ರತಿನಿಧಿಗಳಿಗೆ ಸೂಚಿಸಿದ್ದರು. ಆದರೆ ಶಾಸಕರು ಸೂಚಿಸಿದ ವಾರದ ಗಡವು ಮೀರಿದರೂ ಕಾರ್ಖಾನೆಯವರಾಗಲಿ, ತಾಲೂಕಾಡಳಿತವಾಗಲಿ ಸಭೆ ಕರೆಯದಿರುವುದನ್ನು ಕಂಡು ಕಬ್ಬು ಬೆಳೆಗಾರರು ರೊಚ್ಚಿಗೆದ್ದಿದ್ದರು. ಶುಕ್ರವಾರ ಮರಾಠ ಭವನದಲ್ಲಿ ಸಭೆ ನಡೆಸಿ ಕಾರ್ಖಾನೆ ಮತ್ತು ತಾಲೂಕಾಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದರು. ತಹಸೀಲ್ದಾರ ಕಚೇರಿಗೆ ತೆರಳಿ ತಾಲೂಕಾಡಳಿತವನ್ನು ತರಾಟೆಗೆ ತೆಗೆದುಕೊಂಡರು.

ತಹಸೀಲ್ದಾರ ನಿರುತ್ತರ: ಕಬ್ಬು ಬೆಳೆಗಾರರ ಪ್ರಮುಖರಾದ ಕುಮಾರ ಬೊಬಾಟೆ, ನಾಗೇಂದ್ರ ಜಿವೋಜಿ, ಶಂಕರ ಕಾಜಗಾರ, ಅಶೋಕ ಮೇಟಿ, ಗಿರೀಶ್ ಠೊಸುರ, ಧಾರವಾಡ ಜಿಲ್ಲೆಯ ಪ್ರಮುಖರಾದ ಮಹೇಶ ಬೆಳಗಾಂವಕರ, ಪರಶುರಾಮ ಎತ್ತಿನಗುಡ್ಡ, ಉಳವಪ್ಪಾ ತಹಸೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು. ಶಾಸಕರು ನೀಡಿದ ಗಡವಿನಂತೆ ಸಭೆ ಏಕೆ ನಡೆಸಲಿಲ್ಲ? ಕಾರ್ಖಾನೆಯವರಿಗೆ ಏಕೆ ಈ ಕುರಿತು ವಿಚಾರಿಸಲಿಲ್ಲ. ಹೀಗೆ ಒಂದಾದ ಮೇಲೊಂದರಂತೆ ಕೇಳಿದ ಸುರಿಸಿದ ಪ್ರಶ್ನೆಗಳ ವಾಗ್ಭಾಣಗಳಿಗೆ ತಹಸೀಲ್ದಾರ ನಿರುತ್ತರರಾದರು.

ಈ ಮಧ್ಯೆ ತಹಸೀಲ್ದಾರ ನಡೆದಿರುವ ವಿದ್ಯಮಾನಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಕಾರ್ಖಾನೆಯವರಿಗೂ ಕರೆ ಮಾಡಿ ಮಾತುಕತೆ ನಡೆಸಿದರು. ಆದರೂ ನಿರ್ಧಾರ ಕೈಗೊಳ್ಳುವ ಮುಖ್ಯಸ್ಥರು ಇಲ್ಲ. ಅವರು ತುರ್ತು ಸಭೆಯಲ್ಲಿ ಪಾಲ್ಗೊಳ್ಳಲು ವಿಮಾನದಲ್ಲಿ ತೆರಳಿದ್ದಾರೆಂದು ಸಬೂಬು ನೀಡುತ್ತಾ ನಾಲ್ಕೈದು ಗಂಟೆ ದೂಡಿದರು. ಹೀಗೆ ಈ ಹೈಡ್ರಾಮಾ ಎಂಟು ಗಂಟೆವರೆಗೂ ನಡೆಯಿತು. ಇತ್ತ ಹೊತ್ತು ಮೀರಿದರೂ ಬೇಡಿಕೆಗೆ ಸ್ಪಂದನೆ ದೊರಕದಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ ಕಬ್ಬು ಬೆಳೆಗಾರರು, ಸಭೆಯ ದಿನ ನಿಗದಿಪಡಿಸುವವರೆಗೆ ಕಚೇರಿಯಲ್ಲಿ ರಾತ್ರಿ ಕಳೆಯುತ್ತೇವೆ ಎಂದು ಘೋಷಿಸಿದರು.

ಮಣಿದ ಈಐಡಿ: ಕಬ್ಬು ಬೆಳೆಗಾರರ ಬಿಗಿಪಟ್ಟಿಗೆ ಮಣಿದ ಕಾರ್ಖಾನೆ ತನ್ನ ಪ್ರತಿನಿಧಿಗಳಾಗಿ ಕಬ್ಬು ವಿಭಾಗದ ರಮೇಶ ರೆಡ್ಡಿ ಅವರಿಗೆ ಕನ್ನಡದಲ್ಲಿ ಭಾಷಾಂತರಿಸಲು ನೆರವು ನೀಡಲು ಕಿರಿಯ ಅಧಿಕಾರಿ ಅಗಡಿ ಅವರನ್ನು ಕಳಿಸಿತು. ಸಭೆಗೆ ಬಂದ ಕಾರ್ಖಾನೆ ಪ್ರತಿನಿಧಿಗಳು ಪ್ರತಿಭಟನಾಕಾರ ಆಕ್ರೋಶ ತಣಿಸಲು ವಿಫಲ ಪ್ರಯತ್ನ ನಡೆಸಿದರು. ಆದರೆ ಪ್ರತಿಭಟಕಾಕಾರರು ತಮ್ಮ ಬೇಡಿಕೆಗಳಿಗೆ ಬಿಗಿಪಟ್ಟು ಹಿಡಿದುದ್ದನ್ನು ಕಂಡು ಕೊನೆಯಲ್ಲಿ ಸಭೆ ನಡೆಸಲು ಕಂಪನಿಯವರು ಮಣಿದರು.

ಶಾಸಕರು/ ಜಿಲ್ಲಾಧಿಕಾರಿ ಬರಲಿ: ಏಳೆಂಟು ಗಂಟೆ ಸತಾಯಿಸಿ ಕೊನೆಯಲ್ಲಿ ಸಭೆಯ ದಿನಾಂಕ ಘೋಷಿಸಿದ ಕಾರ್ಖಾನೆಯ ಧೋರಣೆಗೆ ಅಸಮಾಧಾನ ಹೊರಹಾಕಿದ ಕಬ್ಬು ಬೆಳೆಗಾರರು, ಸಭೆಗೆ ಶಾಸಕರು ಮತ್ತು ಜಿಲ್ಲಾಧಿಕಾರಿ ಬರಲೇಬೇಕು. ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಬೇಕೆಂಬ ಪ್ರಸ್ತಾವನೆಯನ್ನು ತಹಸೀಲ್ದಾರರಿಗೆ ಮಂಡಿಸಿ ಬೆಳಿಗ್ಗೆಯಿಂದ ಹೀಗೆ ರಾತ್ರಿವರೆಗೂ ಏಳೆಂಟು ಗಂಟೆವರೆಗೆ ನಡೆಸಿದ ಹೋರಾಟ ಹಿಂಪಡೆದರು.

ಹಳಿಯಾಳ, ಧಾರವಾಡ, ಕಲಘಟಗಿ, ಅಳ್ನಾವರ ತಾಲೂಕಿನ ರೈತರು ಸಭೆಯಲ್ಲಿದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ