ಸಿದ್ದಾಪುರ: ಭೌಗೋಳಿಕವಾಗಿ ಸಿದ್ದಾಪುರ ತಾಲೂಕು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಭಾಗದ ಜನಪ್ರತಿನಿಧಿಗಳು ಆದಷ್ಟು ಬೇಗ ಎಚ್ಚೆತ್ತು ಶಿರಸಿ ಜಿಲ್ಲೆ ಆಗುವಲ್ಲಿ ಪ್ರಯತ್ನಿಸಬೇಕು. ಈ ಕುರಿತ ಪ್ರಕ್ರಿಯೆಗೆ ಒಂದು ತಿಂಗಳ ಅವಕಾಶ ನೀಡುತ್ತಿದ್ದೇವೆ. ಇಲ್ಲವಾದಲ್ಲಿ ಪ್ರತ್ಯೇಕ ಸಾಗರ ಜಿಲ್ಲೆ ಹೋರಾಟಕ್ಕೆ ಬೆಂಬಲಿಸಿ ಸಿದ್ದಾಪುರ ತಾಲೂಕನ್ನು ಅದಕ್ಕೆ ಸೇರ್ಪಡೆಗೊಳಿಸಲು ಹೋರಾಟ ನಡೆಸಲು ಇಂದಿನ ಜನಾಭಿಪ್ರಾಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಾಮಾಜಿಕ ಮುಖಂಡ ವಸಂತ ನಾಯ್ಕ ಮನ್ಮನೆ ತಿಳಿಸಿದರು.
ಸಿದ್ದಾಪುರ ತಾಲೂಕಿನ ಜನತೆ ಅರಣ್ಯ ಅತಿಕ್ರಮಣದಾರರ ಸಮಸ್ಯೆ, ಕಂದಾಯ ಇಲಾಖೆ ಸಮಸ್ಯೆ ಮುಂತಾಗಿ ಹಲವು ಕಾರಣಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದ ಪ್ರತ್ಯೇಕ ಶಿರಸಿ ಜಿಲ್ಲೆ ಕುರಿತಂತೆ ಹೋರಾಟ ನಡೆಯುತ್ತಾ ಬಂದಿದ್ದರೂ ಈವರೆಗೆ ಕಾರ್ಯಗತವಾಗಿಲ್ಲ. ಸಿದ್ದಾಪುರ ತಾಲೂಕನ್ನು ಒಳಗೊಂಡು ಸಾಗರ ಜಿಲ್ಲೆ ಮಾಡುವ ಕುರಿತು ಪ್ರಯತ್ನ ನಡೆಯುತ್ತಿವೆ. ಈ ಬಗ್ಗೆ ಜನಾಭಿಪ್ರಾಯ ಪಡೆಯಲು ಕರೆಯಲಾದ ಸಭೆಯಲ್ಲಿ ಹಿರಿಯರು, ಹಲವು ಮುಖಂಡರು ಪಾಲ್ಗೊಂಡು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಬಹುತೇಕರು ಆದಷ್ಟು ಶೀಘ್ರವಾಗಿ ಶಿರಸಿ ಜಿಲ್ಲೆಯಾಗಬೇಕು. ಇಲ್ಲವಾದರೆ ಸಾಗರ ಜಿಲ್ಲೆ ಸೇರ್ಪಡೆಗೆ ಅನುವಾಗಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕ್ಷೇತ್ರದ ಶಾಸಕರು ತಕ್ಷಣ ಜನಾಭಿಪ್ರಾಯ ಸಂಗ್ರಹಿಸಿ ಶಿರಸಿ ಜಿಲ್ಲೆಗೆ ಪ್ರಯತ್ನಿಸಬೇಕು. ಒಂದು ತಿಂಗಳಲ್ಲಿ ಪ್ರಕ್ರಿಯೆ ಆಗದಿದ್ದರೆ ಸಾಗರ ಜಿಲ್ಲೆ ಸೇರ್ಪಡೆಗೆ ಅವಕಾಶ ಮಾಡಿಕೊಡಬೇಕು. ನಂತರ ಸಿದ್ದಾಪುರದಿಂದ ಸಹಸ್ರಾರು ಮಂದಿ ಸಾಗರಕ್ಕೆ ಹೋಗಿ ಅಲ್ಲಿನ ಎಸಿಯವರ ಮುಖಾಂತರ ಸಾಗರ ಜಿಲ್ಲೆಗೆ ಸಿದ್ದಾಪುರ ತಾಲೂಕನ್ನು ಸೇರ್ಪಡೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಿದ್ದೇವೆ ಎಂದರು.
ಕೃಷಿಕ ಸಮಾಜದ ಅಧ್ಯಕ್ಷ ವೀರಭದ್ರ ನಾಯ್ಕ ಅವರನ್ನು ಹೋರಾಟ ಸಮಿತಿಯ ತಾತ್ಕಾಲಿಕ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಸಿ.ಆರ್.ನಾಯ್ಕ, ಲಕ್ಷ್ಮೀನಾರಾಯಣ ಹೆಗಡೆ, ಉಮೇಶ ನಾಯ್ಕ, ವಿಠ್ಠಲ ಅವರಗುಪ್ಪ, ಗಣೇಶ ನಾಯ್ಕ, ಗಾಂಧೀಜಿ ನಾಯ್ಕ ಉಪಸ್ಥಿತರಿದ್ದರು.