ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಶಿಕ್ಷಣ ಭವಿಷ್ಯದ ಮಕ್ಕಳಿಗೆ ಅವಶ್ಯಕ. ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಸಹಕಾರ ನೀಡಲು ಕಾರ್ಖಾನೆ ಸದಾ ಬದ್ಧವಿದೆ ಎಂದು ಕೋರಮಂಡಲ್ ಸಕ್ಕರೆ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ರವಿರೆಡ್ಡಿ ತಿಳಿಸಿದರು.ಹೋಬಳಿಯ ಕೃಷ್ಣಾಪುರ ಸರ್ಕಾರಿ ಪ್ರೌಢಶಾಲೆಗೆ ಬ್ಯಾಂಡ್‌ಸೆಟ್ ಕೊಡುಗೆ ನೀಡಿ ಮಾತನಾಡಿ, ಕಾರ್ಖಾನೆ ಹಾಗೂ ಇಲ್ಲಿನ ಜನರ ಒಡನಾಟ ಉತ್ತಮವಾಗಿರಲಿ ಎಂಬುದು ಕಾರ್ಖಾನೆ ಆಶಯವಾಗಿದೆ. ರೈತಾಪಿ ಜನತೆಯ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಸಹಕಾರ ನೀಡಲು ಕಾರ್ಖಾನೆ ಸದಾ ಸಿದ್ಧವಿದೆ ಎಂದರು.
ರೈತರು ಮಕ್ಕಳನ್ನು ಆಸ್ತಿಯನ್ನಾಗಿ ರೂಪಿಸಬೇಕಿದೆ. ವಿದ್ಯೆ ಕದಿಯಲಾರದ ಸಂಪತ್ತು. ಎಲ್ಲ ವಿಪತ್ತಿಗೆ ಪರಿಹಾರವಾಗಿ ಜ್ಞಾನವಿದ್ದು, ಇದು ಶಿಕ್ಷಣದಿಂದ ಮಾತ್ರ ಸಾಧ್ಯವಾಗಲಿದೆ. ಜನಸ್ನೇಹಿ, ರೈತ ಸ್ನೇಹಿಯಾಗಿ ಕಾರ್ಖಾನೆ ಸೇವೆ ಮಾಡಲಿದೆ ಎಂದು ಹೇಳಿದರು.ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಬಡಮಕ್ಕಳು, ರೈತರ ಮಕ್ಕಳ ಶಿಕ್ಷಣ ಸುಲಭವಾಗಿ ದೊರಕಲಿದೆ. ಸರ್ಕಾರಿ ಶಾಲೆ ಬಲವರ್ಧನೆಗಾಗಿ ಹಲವು ಮೂಲ ಸೌಲಭ್ಯಗಳನ್ನು ಕಾರ್ಖಾನೆ ನೀಡುತ್ತಿದೆ. ಕುಡಿಯುವ ನೀರು, ಪ್ರತಿಭಾ ಪುರಸ್ಕಾರ, ಪೀಠೋಪಕರಣದಂತಹ ಹಲವು ಸೌಲಭ್ಯಗಳನ್ನು ನೀಡುತ್ತಿದೆ ಎಂದರು.
ರಾಷ್ಟ್ರೀಯ ಹಬ್ಬ ಸೇರಿದಂತೆ ನಿತ್ಯ ಪ್ರಾರ್ಥನೆ ವೇಳೆ ಬ್ಯಾಂಡ್‌ಸೆಟ್ ನುಡಿಸಲು ಅನುಕೂಲವಾಗಲು ಶಾಲೆಗೆ ಪರಿಕರ ನೀಡಲಾಗಿದೆ. ಮಕ್ಕಳನ್ನು ಹುರಿದುಂಬಿಸುವ ಕೆಲಸ ಮಾಡಲು ಶಿಕ್ಷಕರು ಮುಂದಾಗಬೇಕು ಎಂದು ನುಡಿದರು.ಕೃಷ್ಣಾಪುರದ ಪ್ರೌಢಶಾಲೆ ಸಿಂಧೋಳು ಸಮುದಾಯದ ಅಲೆಮಾರಿ ಜನಾಂಗದ ಮಕ್ಕಳು ಹೆಚ್ಚಿರುವ ಶಾಲೆ ಇದಾಗಿದೆ. ಶಿಕ್ಷಣ ವಂಚಿತರು ಸಾಕಷ್ಟು ಇದ್ದಾರೆ. ಇವರಿಗೆ ಕಡ್ಡಾಯ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿರುವ ಶಿಕ್ಷಕ ಸಮೂಹ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.
ಕಾರ್ಖಾನೆ ಕಬ್ಬು ವಿಭಾಗದ ಹಿರಿಯ ವ್ಯವಸ್ಥಾಪಕ ನವೀನ್, ಮುಖ್ಯಶಿಕ್ಷಕ ರಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಹರೀಶ್, ಶಿಕ್ಷಕರಾದ ಗೋವರ್ಧನ್, ಚನ್ನಕೇಶವ, ಮುಖಂಡ ಗಿರೀಶ್ ಮತ್ತಿತರರು ಇದ್ದರು.