ಕನ್ನಡಪ್ರಭ ವಾರ್ತೆ ಅಥಣಿ
ಕಲುಷಿತ ನೀರು, ಹಾನಿಕಾರಕ ರಾಸಾಯನಿಕ ಬಣ್ಣ ಬಳಸಿದ್ದಲ್ಲದೆ, ರಾಸಾಯನಿಕ ಚಾಕಲೇಟ್ ಫ್ಲೇವರ್‌ಗಳನ್ನು ಬಳಕೆ ಮಾಡಿ ಐಸ್ ಕ್ಯಾಂಡಿಯನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಿರಣಗಿ ಗ್ರಾಮದಲ್ಲಿ ತಯಾರಿಸುತ್ತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ಅರಿತ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ಮಂಗಳವಾರ ಐಸ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಿ, ಐಸ್ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ.ಕಳೆದ ಐದಾರು ವರ್ಷಗಳಿಂದ ಈ ಐಸ್ ಫ್ಯಾಕ್ಟರಿಯನ್ನು ಕಿರಣಗಿ ಗ್ರಾಮದ ಶ್ರೀಕಾಂತ ಭಜಂತ್ರಿ ಎಂಬುವವರು ನಡೆಸಿಕೊಂಡು ಬರುತ್ತಿದ್ದರು. ಆದರೆ, ಅವರು ಐಸ್‌ಕ್ರೀಂ ತಯಾರು ಮಾಡುತ್ತಿರುವ ವಿಧಾನವು ಸಾಮಾಜಿಕ ಜಾಲತಾಣಗಳಲ್ಲಿ ಈ ಹರಿದಾಡಿದೆ. ಇದರಿಂದ ಎಚ್ಚೆತ್ತುಕೊಂಡ ಆಹಾರ ಇಲಾಖೆ ಅಧಿಕಾರಿಗಳು ಮಂಗಳವಾರ ತಾಲೂಕಿನ ಕಿರಣಗಿ ಗ್ರಾಮದ ಐಸ್ ಕ್ಯಾಂಡಿ ತಯಾರಿಸುವ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಹಲವು ಆಘಾತಕಾರಿ ಅಂಶಗಳು ಪತ್ತೆಯಾಗಿವೆ.ಫ್ಯಾಕ್ಟರಿಯಲ್ಲಿ ಐಸ್ ತಯಾರಿಸಲು ಅನುಮತಿಯೇ ಸಿಕ್ಕಿಲ್ಲ:
ಐಸ್ ಫ್ಯಾಕ್ಟರಿಯನ್ನು ನಡೆಸಲು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಅನಧಿಕೃತವಾಗಿ ನಡೆಸಲಾಗುತ್ತಿತ್ತು. ಫ್ಯಾಕ್ಟರಿಯಲ್ಲಿ ಐಸ್ ಕ್ಯಾಂಡಿ ತಯಾರಿಸಲು ಗಲೀಜು ಆಗಿರುವ ವಸ್ತುಗಳು, ಕೊಳಕಾಗಿ ವಾಸನೆ ಬರುತ್ತಿರುವ ನೀರು, ಸುಟ್ಟ ಆಯಿಲ್ ತರಹ ಇರುವ ಎಣ್ಣೆ, ಕೆಮಿಕಲ್ ಮಿಶ್ರಿತ ಬಣ್ಣ ಹಾಗೂ ಚಾಕೋಲೇಟ್ ಫ್ಲೇವರ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಆಹಾರ ಇಲಾಖೆ ಅಧಿಕಾರಿಗಳು ಐಸ್ ಕ್ಯಾಂಡಿ ತಯಾರಿಕೆಗೆ ಬಳಸುವ ನೀರು ಮತ್ತು ರಾಸಾಯನಿಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಗುಣಮಟ್ಟದ ಪರಿಶೀಲನೆಗೆ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸದ್ಯ ಫ್ಯಾಕ್ಟರಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಜನರ ಆರೋಗ್ಯಕ್ಕೆ ಮಾರಕವಾಗಿದ್ದ ಈ ಫ್ಯಾಕ್ಟರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಅಥಣಿ ತಾಲೂಕಿನ ಕಿರಣಗಿ ಗ್ರಾಮದಲ್ಲಿ ಅನಧಿಕೃತವಾಗಿ ನಡೆದಿದೆ ಎನ್ನಲಾದ ಐಸ್ ಕ್ಯಾಂಡಿ ಫ್ಯಾಕ್ಟರಿಗೆ ನಮ್ಮ ಸಿಬ್ಬಂದಿಯನ್ನು ಕಳುಹಿಸಿದ್ದೇವೆ. ಅಲ್ಲಿ ಹೋಗಿ ಪರಿಶೀಲಿಸಿದಾಗ ಕಲುಷಿತ ನೀರು ಮತ್ತು ಸ್ವಚ್ಛತೆ ಇಲ್ಲದ ಪ್ರದೇಶದಲ್ಲಿ ರಾಸಾಯನಿಕ ವಸ್ತುಗಳು ಕೂಡ ಕಂಡುಬಂದಿದ್ದು, ಅವುಗಳನ್ನು ನಮ್ಮ ವಶಕ್ಕೆ ಪಡೆದುಕೊಂಡು ಫ್ಯಾಕ್ಟರಿಯನ್ನು ಸೀಸ್ ಮಾಡಿದ್ದೇವೆ. ಐಸ್ ಕ್ಯಾಂಡಿ ತಯಾರಿಕೆಗೆ ಬಳಸುವ ರಾಸಾಯನಿಕ ವಸ್ತುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. ವರದಿ ಬಂದ ನಂತರ ಕಾನೂನು ರೀತಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸುತ್ತೇವೆ.- ಡಾ.ಚೇತನ ಕಂಕಣವಾಡಿ,
ಜಿಲ್ಲಾ ಅಂಕಿತ ಅಧಿಕಾರಿಗಳು, ಆಹಾರ ಸಂರಕ್ಷಣಾ ಇಲಾಖೆ ಬೆಳಗಾವಿ.ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ಅನಧಿಕೃತ ಮತ್ತು ರಾಸಾಯನಿಕ ಮಿಶ್ರಿತ ಐಸ್ ಕ್ಯಾಂಡಿ ಫ್ಯಾಕ್ಟರಿಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ನಿಗಾವಹಿಸಬೇಕು. ಕಿರಣಗಿ ಗ್ರಾಮದಲ್ಲಿ ನಡೆದಿರುವ ಅನಧಿಕೃತ ಫ್ಯಾಕ್ಟರಿಯನ್ನು ಬಂದ್ ಮಾಡಬೇಕು. - ಜಗನ್ನಾಥ ಬಾಮನೆ, ಕನ್ನಡಪರ ಹೋರಾಟಗಾರ ಅಥಣಿ.