ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯ ಆಟೋನಗರದ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಸೋಮವಾರ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದ ಬ್ರಹ್ಮಾನಂದ ಸಾಗರ ಜಾಗರಿ ಇಂಡಸ್ಟ್ರಿ ಮತ್ತು ಅಸ್ಕಿನ್ಸ್ ಬಯೋಪಿಲ್ಸ್ ಕಾರ್ಖಾನೆ ಸಿಬ್ಬಂದಿ ಮುತ್ತಿಗೆ ಹಾಕಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಈ ವೇಳೆ ಕಾರ್ಖಾನೆಯ ಮಾಲೀಕ ಮತ್ತು ಕಾರ್ಮಿಕರ ಆತ್ಮಹತ್ಯೆಯ ಹೈಡ್ರಾಮಾವೇ ಜರುಗಿತು. ಮೂರು ವರ್ಷಗಳಿಂದ ಪರಿಸರ ಇಲಾಖೆಯಿಂದ ಅನುಮತಿ ಸಿಗದೇ ಇರುವುದೇ ಕಾರಣ ಎನ್ನುವುದೇ ಘಟನೆಗೆ ಕಾರಣವಾಗಿದೆ. ಅಲ್ಲದೆ, ಕೊನೆಗೆ ಅಧಿಕಾರಿಗಳೇ ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸಬೇಕಾಯಿತು.ಕಾರ್ಖಾನೆಯ ಸುಮಾರು 300ಕ್ಕೂ ಅಧಿಕ ಸಿಬ್ಬಂದಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ 50ಕ್ಕೂ ಹೆಚ್ಚಿನ ಸಿಬ್ಬಂದಿ ಕುತ್ತಿಗೆಗೆ ನೇಣು ಹಗ್ಗ ಹಾಕಿಕೊಂಡು ನಿಂತರೆ, ಮತ್ತೆ ಕೆಲವರು ವಿಷದ ಬಾಟಲಿಯನ್ನು ತಮ್ಮ ಮುಂದೆ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಒತ್ತಡದ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪರಿಸರ ನಿಯಂತ್ರಣ ಮಂಡಳಿಯು ಕಾರ್ಖಾನೆಗೆ ಅನುಮತಿ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದೇ ಪ್ರದೇಶದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಒಡೆತನಕ್ಕೆ ಸೇರಿದ ಸಕ್ಕರೆ ಕಾರ್ಖಾನೆಯಿದೆ. ಹಾಗಾಗಿ, ಜಾಗರಿ, ಇಥೆನಾಲ್ ಘಟಕಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಕಾರ್ಖಾನೆ ಮಾಲೀಕರಾದ ಅಶೋಕ ಅಸ್ತಿ ಅವರು ₹150 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಆದರೆ, ವಿನಾಕಾರಣ ಅನುಮತಿ ನೀಡದೇ ಸತಾಯಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.ಪ್ರತಿಭಟನಾನಿರತ ಕಾರ್ಮಿಕರು ಕಚೇರಿಯ ಬಾಗಿಲನ್ನು ಒಳಗಿನಿಂದಲೇ ಬಂದ್ ಮಾಡಿಕೊಂಡಿದ್ದರು. ಅಲ್ಲದೇ, ಹಗ್ಗವನ್ನು ನೇಣಿಗೆ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಈ ಘಟನೆಯಿಂದ ಎಚ್ಚೆತ್ತುಕೊಂಡ ಪೊಲೀಸರು, ಪರಿಸರ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿದರು. ಕಚೇರಿ ಬಾಗಿಲನ್ನು ತೆರೆಯುವಂತೆ ಮನವಿ ಮಾಡಿದರು. ಆದರೆ, ಕಾರ್ಮಿಕರು ಬಾಗಿಲನ್ನು ತೆರೆಯಲು ನಿರಾಕರಿಸಿದರು. ಸ್ಥಳಕ್ಕೆ ಪರಿಸರ ಮತ್ತು ಸಕ್ಕರೆ ಸಚಿವರು ಬರಬೇಕು ಎಂದು ಪಟ್ಟುಹಿಡಿದರು. ಕಚೇರಿ ಹೊರಭಾಗದಲ್ಲಿ ನಿಂತಿದ್ದ ಪೊಲೀಸರು, ಅಧಿಕಾರಿಗಳು ಕಚೇರಿಯ ಗಾಜು ಒಡೆದು ಒಳಗೆ ನುಗ್ಗಲು ಪ್ರಯತ್ನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾನಿರತ ಕಾರ್ಮಿಕರು ಗಾಜು ಒಡೆದು ಕಚೇರಿ ಒಳಗೆ ಬಂದರೆ ನಾವು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.ನಂತರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯನ್ನು ಕಾರ್ಖಾನೆ ಮಾಲೀಕ ಅಶೋಕ ಅಸ್ಕಿ ಎಂಬುವರು ಒಳಗಿನಿಂದಲೇ ಬಂದ್ ಮಾಡಿದರು. ಬಾಗಿಲು ತೆರೆಯುವಂತೆ ಪೊಲೀಸರು ಹಲವು ಬಾರಿ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಈ ಘಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಡಿವೈಎಸ್ಪಿ, ನಾಲ್ಕು ಜನ ಎಸಿಪಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಸಚಿವರು ಬರುವವರೆಗೆ ನಾವು ಬಾಗಿಲನ್ನು ತೆರೆಯುವುದಿಲ್ಲ ಎಂದು ಅಶೋಕ ಅಸ್ಕಿ ಪಟ್ಟುಹಿಡಿದರು. ಈ ವೇಳೆ ಪ್ರತಿಭಟನಾಕಾರರ ಜೊತೆಗೆ ಕೆಲ ಪತ್ರಕರ್ತರು ಮತ್ತು ಸಿಬ್ಬಂದಿಯೂ ಕಚೇರಿಯಲ್ಲೇ ಸಿಕ್ಕಿಹಾಕಿಕೊಂಡಿದ್ದರು. ಈ ಮಧ್ಯೆ ಅಶೋಕ ಅಸ್ಕಿ ಅವರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೂ ಯತ್ನಿಸಿದರು.ಕೊನೆಗೆ ಶತಾಯಗತಾಯ ಎಂಬಂತೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ಅಶೋಕ ಬಸ್ಕಿ ಜೊತೆಗೆ ಮಾತುಕತೆ ನಡೆಸಿ, ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ಬಾಗಿಲು ತೆರೆದರು. ಆನಂತರ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಯಿತು. ಬಳಿಕವೇ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಹಿಂದಕ್ಕೆ ಪಡೆದರು.