ಕಾರ್ಮಿಕರ ಏಕತೆ, ಹಕ್ಕುಗಳಿಗಾಗಿ ಹೋರಾಟದ ಸಂಕೇತವಾಗಿದ್ದ ಕೆಂಬಾವುಟಗಳು ಈ ಬಾರಿ ನಗರದಲ್ಲಿ ವಿರಳವಾಗಿ ಕಾಣಿಸಿಕೊಂಡವು.
ಮಂಜುನಾಥ ಕೆ.ಎಂ.
ಬಳ್ಳಾರಿ: ಕಾರ್ಮಿಕ ಹಕ್ಕುಗಳ ಪ್ರತೀಕವಾಗಿದ್ದ ಮೇ ದಿನಾಚರಣೆ ಶುಕ್ರವಾರ ಇಲ್ಲಿ ಸಾಂಕೇತಿಕವಾಗಿ ಜರುಗಿತು. ಗಣಿ ಜಿಲ್ಲೆಯ ಹೋರಾಟದ ಹೊಳಪು ಭಾಗಶಃ ಮಂಕಾಗಿದೆ.
ಕಾರ್ಮಿಕರ ಏಕತೆ, ಹಕ್ಕುಗಳಿಗಾಗಿ ಹೋರಾಟದ ಸಂಕೇತವಾಗಿದ್ದ ಕೆಂಬಾವುಟಗಳು ಈ ಬಾರಿ ನಗರದಲ್ಲಿ ವಿರಳವಾಗಿ ಕಾಣಿಸಿಕೊಂಡವು. ಈ ಹಿಂದೆ ಸಿಐಟಿಯು, ಎಐಟಿಯುಸಿ, ಎಐಯುಟಿಯುಸಿ ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ಕಾರ್ಮಿಕರು ಮೆರವಣಿಗೆ ನಡೆಸಿ, ಘೋಷಣೆಗಳನ್ನು ಕೂಗಿ ತಮ್ಮ ಹಕ್ಕುಗಳಿಗಾಗಿ ಧ್ವನಿಯಾಗುತ್ತಿದ್ದರು.
ಗಣಿಗಾರಿಕೆ, ಕಟ್ಟಡ ಕಾರ್ಮಿಕರು, ಕಾರ್ಖಾನೆ, ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತರು ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕರು ಒಂದೇ ವೇದಿಕೆಯಡಿ ಸೇರುತ್ತಿದ್ದರಿಂದ ಇಡೀ ಬಳ್ಳಾರಿ ಮಹಾನಗರದಲ್ಲಿ ಎಲ್ಲಿ ನೋಡಿದರಲ್ಲಿ ಕುಡುಗೋಲು-ಸುತ್ತಿಗೆ ಚಿಹ್ನೆಯ ಬಾವುಟಗಳು ರಾರಾಜಿಸುತ್ತಿದ್ದವು. ಬರೀ ಎರಡು ದಶಕಗಳ ಅವಧಿಯಲ್ಲಿಯೇ ಇಡೀ ಕಾರ್ಮಿಕ ಆಂದೋಲನ ಕುಸಿತ ಕಂಡಿದ್ದು ದುಡಿವ ಜನರ ಹೋರಾಟದ ಧ್ವನಿ ಬಹುತೇಕ ಕ್ಷೀಣಿಸಿದಂತೆ ಕಂಡು ಬರುತ್ತಿದೆ.
ಮಂಕಾದ ಹೋರಾಟದ ಕಿಚ್ಚು:
ಸಂಘಟನೆಗಳಿಗೆ ಹೊಸ ನಾಯಕರ ಕೊರತೆ, ಸೀಮಿತ ಚಟುವಟಿಕೆಗಳು, ಯುವ ಸಮುದಾಯದಲ್ಲಿ ಹೋರಾಟದ ಮನೋಭಾವ ಕುಗ್ಗುತ್ತಿರುವುದು ಕಾರ್ಮಿಕ ಚಳವಳಿಯನ್ನು ಬಡವಾಗಿಸಿದ್ದರೆ, ಮತ್ತೊಂದೆಡೆ ಸುದೀರ್ಘ ಹೋರಾಟದ ನಡುವೆಯೂ ಸಿಗದ ಪ್ರತಿಫಲದಿಂದ ಚಳವಳಿಯತ್ತ ಆಸ್ಥೆ ತೋರುವವರ ಸಂಖ್ಯೆಯಲ್ಲೂ ಗಮನಾರ್ಹ ಇಳಿಕೆಯಾಗಿದೆ.
ಈ ಹಿಂದೆ ಬಳ್ಳಾರಿ ಗಣಿಗಾರಿಕೆ, ಕೈಗಾರಿಕಾ ಚಟುವಟಿಕೆಗಳ ಕೇಂದ್ರವಾಗಿದ್ದರಿಂದ ಕಾರ್ಮಿಕ ಸಂಘಟನೆಗಳು ಬಹಳ ಸಕ್ರಿಯವಾಗಿದ್ದವು. ಗಣಿಗಾರಿಕೆ, ಕಾರ್ಖಾನೆ, ಸಾರಿಗೆ, ಕಟ್ಟಡ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಮೆರವಣಿಗೆಗಳಲ್ಲಿ ಭಾಗವಹಿಸುತ್ತಿದ್ದರು. ಕೆಂಬಾವುಟಗಳು ಕೇವಲ ಸಂಕೇತವಲ್ಲ, ಅದು ಹೋರಾಟದ ಘೋಷಣೆಯೇ ಆಗಿತ್ತು. ಆದರೆ, ಇತ್ತೀಚೆಗೆ ಆ ಚೈತನ್ಯ ನಿಧಾನವಾಗಿ ಕುಗ್ಗುತ್ತಿದೆ.
ಈ ಬಾರಿ ಮೇ ದಿನಾಚರಣೆಯಲ್ಲಿ ದೊಡ್ಡ ಮಟ್ಟದ ಮೆರವಣಿಗೆಗಳು ನಗರದಲ್ಲಿ ನಡೆಯಲಿಲ್ಲ. ಒಂದೆರೆಡು ಸಂಘಟನೆಗಳು ಮಾತ್ರ ಸಾಂಕೇತಿಕವಾಗಿ ಮೆರವಣಿಗೆ ನಡೆಸಿ, ಕೈ ತೊಳೆದುಕೊಂಡರು. ಹೀಗಾಗಿ ಒಂದು ಕಾಲದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಕೆಂಬಾವುಟಗಳ ಸಾಗರವೇ ಹರಿದುಹೋದಂತೆ ಕಂಡು ಬರುತ್ತಿದ್ದ ದೃಶ್ಯವೀಗ ಆ ರಸ್ತೆಗಳಲ್ಲಿ ಮೌನ ಆವರಿಸಿದಂತೆ ಕಂಡು ಬಂತು.
ಬದುಕೇ ದೊಡ್ಡ ಸವಾಲು:
ಕಾರ್ಮಿಕ ಮುಖಂಡರು ಹೇಳುವ ಪ್ರಕಾರ, ಉದ್ಯೋಗದ ಅನಿಶ್ಚಿತತೆ, ದಿನನಿತ್ಯದ ಬದುಕಿನ ಒತ್ತಡಗಳು ಕಾರ್ಮಿಕರನ್ನು ಹೋರಾಟದಿಂದ ದೂರ ಉಳಿಯುವಂತೆ ಮಾಡಿವೆ. ಇಂದು ಬಹುತೇಕ ಕಾರ್ಮಿಕರು ಅನೌಪಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಶಾಶ್ವತ ಉದ್ಯೋಗ, ವೇತನ ಭದ್ರತೆ, ಸಾಮಾಜಿಕ ಭದ್ರತೆ ಸೌಲಭ್ಯಗಳು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೋರಾಟಕ್ಕಿಂತ ಬದುಕು ನಡೆಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಮತ್ತೊಂದೆಡೆ ಅನೇಕ ವರ್ಷಗಳ ಹೋರಾಟಗಳ ನಡುವೆಯೂ ಬೇಡಿಕೆಗಳು ಈಡೇರದಿರುವುದು ಚಳವಳಿಯಲ್ಲಿ ಭಾಗವಹಿಸುವವರಿಗೆ ಭ್ರಮನಿರಸನವಾಗಿದೆ. ಸಂಘಟನೆಯಲ್ಲಿ ಗುರುತಿಸಿಕೊಳ್ಳುವವರು ಕಾರ್ಖಾನೆ ಮಾಲೀಕರ ಕೆಂಗಣ್ಣಿಗೆ ಗುರಿಯಾಗಿ, ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗೆ ಚಳವಳಿಯತ್ತ ವಾಲುವವರ ಪ್ರಮಾಣ ತೀವ್ರ ಇಳಿಮುಖವಾಗಿದೆ.
ಬಳ್ಳಾರಿಯಲ್ಲಿ ಕೆಂಬಾವುಟಗಳ ಕಣ್ಮರೆ ಕೇವಲ ದೃಶ್ಯ ಬದಲಾವಣೆಯಲ್ಲ. ಅದು ಕಾರ್ಮಿಕ ಚಳವಳಿಯ ದುರ್ಬಲತೆಯ ಪ್ರತಿಬಿಂಬವಾಗಿದೆ. ಕಾರ್ಮಿಕರ ಧ್ವನಿ ಮತ್ತೆ ಗಟ್ಟಿಯಾಗಲು, ಹೊಸ ದಿಕ್ಕಿನಲ್ಲಿ ಸಂಯುಕ್ತ ಪ್ರಯತ್ನಗಳು ನಿರಂತರವಾಗಿ ನಡೆಯಬೇಕಿದೆ.ಈ ಹಿಂದೆ ಮೇ ದಿನ ಎಂದರೆ ನಮ್ಮ ಹಕ್ಕುಗಳಿಗಾಗಿ ಒಂದಾಗಿ ಹೋರಾಡುವ ದಿನವಾಗಿತ್ತು. ಈಗ ಅದು ಕೇವಲ ಆಚರಣೆಗೆ ಸೀಮಿತವಾಗಿದೆ. ಕಾರ್ಮಿಕ ಕಾಯ್ದೆ ತಿದ್ದುಪಡಿ ಬಳಿಕ ಸಂಘಟನೆ ಮಾಡುವುದು ಕಷ್ಟವಾಗಿದೆ. ಕಾರ್ಮಿಕರ ಧ್ವನಿಯನ್ನು ಪುನಃ ಜೀವಂತಗೊಳಿಸಲು ಸಮಗ್ರ ಪ್ರಯತ್ನಗಳ ಅಗತ್ಯವಿದೆ ಎನ್ನುತ್ತಾರೆ ಎಐಟಿಯುಸಿ ಮುಖಂಡ ಎ.ಆದಿಮೂರ್ತಿ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.