ದ್ವಿತೀಯ ಪಿಯುಸಿ: ಜಿಲ್ಲೆಗೆ 12ನೇ ಸ್ಥಾನ

KannadaprabhaNewsNetwork | Published : Apr 9, 2025 2:00 AM

ಸಾರಾಂಶ

ಕಳೆದ ಬಾರಿ ಇಡೀ ರಾಜ್ಯದಲ್ಲಿ 17ನೇ ಸ್ಥಾನ ಪಡೆದುಕೊಂಡಿದ್ದ ಮೈಸೂರು ಜಿಲ್ಲೆ ಈ ಬಾರಿಯ ಫಲಿತಾಂಶದಲ್ಲಿ ಸುಧಾರಿಸಿಕೊಂಡಿದ್ದು,

ಕನ್ನಡಪ್ರಭ ವಾರ್ತೆ ಮೈಸೂರು

2024- 25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮೈಸೂರು ಜಿಲ್ಲೆಗೆ ಶೇ.74.13 ರಷ್ಟು ಫಲಿತಾಂಶದೊಂದಿಗೆ ರಾಜ್ಯ ಮಟ್ಟದಲ್ಲಿ 12ನೇ ಸ್ಥಾನ ಪಡೆದುಕೊಂಡಿದೆ.

ಕಳೆದ ಬಾರಿ ಇಡೀ ರಾಜ್ಯದಲ್ಲಿ 17ನೇ ಸ್ಥಾನ ಪಡೆದುಕೊಂಡಿದ್ದ ಮೈಸೂರು ಜಿಲ್ಲೆ ಈ ಬಾರಿಯ ಫಲಿತಾಂಶದಲ್ಲಿ ಸುಧಾರಿಸಿಕೊಂಡಿದ್ದು, ಶೇ.74.13 ರಷ್ಟು ಫಲಿತಾಂಶ ಪಡೆಯುವ ಮೂಲಕ 12ನೇ ಸ್ಥಾನಕ್ಕೆ ಏರುವ ಮೂಲಕ 5 ಸ್ಥಾನ ಹೆಚ್ಚಿಸಿಕೊಂಡಿದೆ.

ರಾಜ್ಯ ಮಟ್ಟದಲ್ಲಿ ಟಾಪ್ 10ರ ಒಳಗೆ ಸ್ಥಾನ ಪಡೆಯಲು ಜಿಲ್ಲಾಡಳಿತ, ಶಿಕ್ಷಣ ಇಲಾಖೆ ವರ್ಷವಿಡೀ ಕಾರ್ಯಕ್ರಮಗಳನ್ನು ರೂಪಿಸಿದ್ದರೂ, ಟಾಪ್‌ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಮೈಸೂರು ಜಿಲ್ಲೆ ವಿಫಲವಾಗಿದೆ.

23485 ವಿದ್ಯಾರ್ಥಿಗಳು ಉತ್ತೀರ್ಣ

ಜಿಲ್ಲೆಯಲ್ಲಿ 34224 ವಿದ್ಯಾರ್ಥಿಗಳ ಪೈಕಿ ಹೊಸದಾಗಿ 31610 ವಿದ್ಯಾರ್ಥಿಗಳು, 1649 ಪುನರಾವರ್ತಿತ, ಖಾಸಗಿಯಾಗಿ 965 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ಹೊಸದಾಗಿ ಪರೀಕ್ಷೆ ಬರೆದಿದ್ದ 31610 ವಿದ್ಯಾರ್ಥಿಗಳಲ್ಲಿ ಪೈಕಿ 23485 ಉತ್ತೀರ್ಣರಾಗಿದ್ದು, ಶೇ.74.13 ರಷ್ಟು ಫಲಿತಾಂಶ ಜಿಲ್ಲೆಗೆ ಲಭ್ಯವಾಗಿದೆ.

ಈ ಬಾರಿಯ ಪರೀಕ್ಷೆಯಲ್ಲಿ 15733 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 9635 ಮಂದಿ ಉತ್ತೀರ್ಣರಾಗಿದ್ದು, ಶೇ.61.24 ಫಲಿತಾಂಶ ಪಡೆದಿದ್ದಾರೆ. 18491 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, ಇವರಲ್ಲಿ 14323 ಉತ್ತೀರ್ಣರಾಗಿದ್ದು, ಶೇ.77.46 ರಷ್ಟು ಫಲಿತಾಂಶದೊಂದಿಗೆ ಈ ಬಾರಿಯೂ ಹೆಣ್ಣು ಮಕ್ಕಳೆ ಜಿಲ್ಲೆಯಲ್ಲಿ ಮೇಲುಗೈ ಸಾಧಿಸಿದ್ದಾರೆ.

ಹಾಗೆಯೇ, ವಾಣಿಜ್ಯ, ಕಲಾ ಹಾಗೂ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದವರು ಹೆಣ್ಣು ಮಕ್ಕಳೇ ಆಗಿರುವುದು ವಿಶೇಷ.

ಜಿಲ್ಲೆಯಲ್ಲಿ ಈ ಬಾರಿಯೂ ದ್ವಿತೀಯ ಪಿಯುಸಿ ಕಲಾ ವಿಷಯದಲ್ಲಿ ಕಡಿಮೆ ಫಲಿತಾಂಶ ಬಂದಿದೆ. 6794 ವಿದ್ಯಾರ್ಥಿಗಳು ಕಲಾ ವಿಷಯ ಪರೀಕ್ಷೆ ಬರೆದಿದ್ದು, ಇವರಲ್ಲಿ 3915 ಮಂದಿ ಉತ್ತೀರ್ಣರಾಗಿದ್ದು, ಶೇ.57.62 ರಷ್ಟು ಫಲಿತಾಂಶ ಬಂದಿದೆ.

ವಾಣಿಜ್ಯ ವಿಷಯದಲ್ಲಿ 10941 ವಿದ್ಯಾರ್ಥಿಗಳ ಪೈಕಿ 8206 ಮಂದಿ ಉತ್ತೀರ್ಣರಾಗಿದ್ದು, ಶೇ.75 ರಷ್ಟು ಫಲಿತಾಂಶ ಬಂದಿದೆ. ಹಾಗೆಯೇ, ವಿಜ್ಞಾನ ವಿಷಯದಲ್ಲಿ 13875 ವಿದ್ಯಾರ್ಥಿಗಳ ಪೈಕಿ 11364 ಮಂದಿ ಉತ್ತೀರ್ಣರಾಗಿದ್ದು, ಶೇ.81.95 ಫಲಿತಾಂಶ ಬಂದಿದೆ.

----

ಬಾಕ್ಸ್...

ಜಿಲ್ಲೆಗೆ ತೇಜಸ್ವಿನಿ ಟಾಪರ್

ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಭಾರತ್ ಮಾತಾ ಪಿಯು ಕಾಲೇಜಿನ ಎಂ.ಎ. ತೇಜಸ್ವಿನಿ ಅವರು ವಾಣಿಜ್ಯ ವಿಭಾಗದಲ್ಲಿ 598 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 2ನೇ ಸ್ಥಾನ ಹಾಗೂ ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

ಮೈಸೂರಿನ ಸದ್ವಿದ್ಯಾ ಸೆಮಿ ರೆಸಿಡೆನ್ಶಿಯಲ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಧಾತ್ರಿ 596 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದು, ಜಿಲ್ಲೆಯ ದ್ವಿತೀಯ ಟಾಪರ್ ಆಗಿದ್ದಾರೆ.

ಹಾಗೆಯೇ, ಜ್ಞಾನೋದಯ ಪಿಯು ಕಾಲೇಜಿನ ಅನಘಾ ಎಸ್. ಕರ್ನಿಸ್ (ವಿಜ್ಞಾನ), ಬಿಜಿಎಸ್ ಬಾಲಕಿಯರ ಪಿಯು ಕಾಲೇಜಿನ ಎಸ್. ಸಂಗೀತಾ (ವಿಜ್ಞಾನ) ಮತ್ತು ಹರ್ಷಿನಿ ಆಚಾರ್ (ವಾಣಿಜ್ಯ) 594 ಅಂಕ ಪಡೆಯುವ ಮೂಲಕ ಜಂಟಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ.

Share this article