ರಾಮನವಮಿ: ಮಂಗಳೂರಿನಲ್ಲಿ ಇಸ್ಕಾನ್‌ ವೈಭವದ ಶೋಭಾಯಾತ್ರೆ

KannadaprabhaNewsNetwork |  
Published : Apr 09, 2025, 12:49 AM IST
ಇಸ್ಕಾನ್‌ನಿಂದ ವೈಭವದ ಶೋಭಾಯಾತ್ರೆ ನಡೆಯಿತು. | Kannada Prabha

ಸಾರಾಂಶ

ಕೊಡಿಯಾಲಬೈಲ್ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಇಸ್ಕಾನ್ ಧಾರ್ಮಿಕ ಸಂಸ್ಥೆಯ ಆಶ್ರಯದಲ್ಲಿ ಶ್ರೀ ರಾಮನವಮಿ ಮಹೋತ್ಸವ ಹಾಗೂ ಶ್ರೀ ರಾಮ- ಲಕ್ಷ್ಮಣ ಅಲಂಕೃತ ಶೋಭಾಯಾತ್ರೆಯು ಸಂಸ್ಥೆಯ ಮುಖ್ಯಸ್ಥ ಶ್ರೀ ಗುಣಾಕರ ರಾಮದಾಸರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಕೊಡಿಯಾಲಬೈಲ್ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಇಸ್ಕಾನ್ ಧಾರ್ಮಿಕ ಸಂಸ್ಥೆಯ ಆಶ್ರಯದಲ್ಲಿ ಶ್ರೀ ರಾಮನವಮಿ ಮಹೋತ್ಸವ ಹಾಗೂ ಶ್ರೀ ರಾಮ- ಲಕ್ಷ್ಮಣ ಅಲಂಕೃತ ಶೋಭಾಯಾತ್ರೆಯು ಸಂಸ್ಥೆಯ ಮುಖ್ಯಸ್ಥ ಶ್ರೀ ಗುಣಾಕರ ರಾಮದಾಸರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಈ ಧಾರ್ಮಿಕ ಉತ್ಸವವು ಪ್ರಾತಃಕಾಲ ಅರ್ಚಕ ಶ್ರೀ ದೇವಕಿತನಯದಾಸ ಅವರಿಂದ ಶ್ರೀ ರಾಮ, ಶ್ರೀ ಲಕ್ಷ್ಮಣ, ಸೀತೆ ಮತ್ತು ಹನುಮಾನ್ ವಿಗ್ರಹಗಳಿಗೆ ಅಲಂಕಾರ ಮತ್ತು ಶೃಂಗಾರ ಪೂಜಾ ವಿಧಿ ವಿಧಾನಗಳೊಂದಿಗೆ ಪ್ರಾರಂಭವಾಯಿತು. ಸಂಜೆ ಶ್ರೀ ರಾಮ, ಶ್ರೀ ಲಕ್ಷ್ಮಣ, ಸೀತೆ ಮತ್ತು ಹನುಮಾನ್ ವಿಗ್ರಹಗಳನ್ನು ಆಕರ್ಷಕ ವಿಶೇಷ ಅಲಂಕೃತ ರಥದಲ್ಲಿ ಕೂರಿಸಿ, ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ರಥದಲ್ಲಿ ಹರಿಚರಣ್ ದಾಸ್, ಗುಣಾಕರ ರಾಮದಾಸ ಅವರು ಪೂಜೆ ನೆರವೇರಿಸಿದರು. ಗಣ್ಯರು ಸೇರಿದಂತೆ ಭಕ್ತಾದಿಗಳು ರಥವನ್ನೆಳೆದರು. ಈ ಪವಿತ್ರ ಭವ್ಯ ರಥಯಾತ್ರೆಯು ಪಿ.ವಿ.ಎಸ್. ಸಂಕೀರ್ಣದಿಂದ ಮೆರವಣಿಗೆಯಲ್ಲಿ ಹೊರಟು, ಸಹಸ್ರಾರು ಭಕ್ತಾಭಿಮಾನಿಗಳು ಶ್ರದ್ಧಾ ಭಕ್ತಿಯಿಂದ ಹರೇಕೃಷ್ಣ ಹರೇರಾಮ ಜಪದೊಂದಿಗೆ ಭಜನೆ, ಕೀರ್ತನೆ, ವಾದ್ಯಗಳೊಂದಿಗೆ ಬೆಸೆಂಟ್ ಶಾಲಾ ರಸ್ತೆ, ಎಂ.ಜಿ. ರಸ್ತೆ, ಪಿ.ವಿ.ಎಸ್. ವೃತ್ತ, ನವಭಾರತ್ ವೃತ್ತದ ಮೂಲಕ ಸಾಗಿ ಶಾರದಾ ವಿದ್ಯಾಲಯದ ಪ್ರಾಂಗಣವನ್ನು ತಲುಪಿತು. ಮೆರವಣಿಗೆಯಲ್ಲಿ ಶಾಲಾ ಮಕ್ಕಳು ಶ್ರೀ ರಾಮ, ಶ್ರೀ ಲಕ್ಷಣ, ಸೀತೆ ಮತ್ತು ಹನುಮಾನ್ ದೇವರ ವೇಷಭೂಷಣಗಳನ್ನು ಧರಿಸಿ ರಥದ ಮುಂದೆ ಸಾಗಿದರು. ಇದೊಂದು ಮುಖ್ಯ ಆಕರ್ಷಣೆಯಾಗಿ, ಭಕ್ತ ಸಮೂಹವು ಭಕ್ತಿಯ ಕಡಲಲ್ಲಿ ಮಿಂದೇಳುವಂತೆ ಮಾಡಿತು. ಶಿಕ್ಷಣ ತಜ್ಞ ಪ್ರೊ.ಎಂ.ಬಿ. ಪುರಾಣಿಕ್, ಎಸ್.ಎಲ್. ಶೇಟ್ ಜ್ಯುವೆಲ್ಲರ್ಸ್ ಪಾಲುದಾರ ನಿಶಾಂತ್ ಶೇಟ್, ಮಂಗಳೂರಿನ ಹೃದ್ರೋಗ ತಜ್ಞ ಡಾ.ಮೋಹನ್ ಪೈ, ಉಡುಪಿಯ ಉದ್ಯಮಿ ಅಜಯ್ ಶೆಟ್ಟಿ, ಮಂಗಳೂರಿನ ಉದ್ಯಮಿ ಅಭಿನವ್ ಬನ್ಸಾಲ್ ಮತ್ತಿತರರು ಪಾಲ್ಗೊಂಡಿದ್ದರು. ಸಂತ ಅಲೋಶಿಯಸ್ ಕಾಲೇಜಿನ ಎನ್ಎಸ್ಎಸ್ ಕೆಡೆಟ್ಗಳು ಮೆರವಣಿಗೆಗೆ ರಕ್ಷಣೆ ಒದಗಿಸಿ, ಭಕ್ತಾದಿಗಳಿಗೆ ನೀರು, ಪ್ರಸಾದ ವಿತರಿಸಿದರು. ಶಾರದಾ ವಿದ್ಯಾಲಯದ ಪ್ರಾಂಗಣದಲ್ಲಿ ಜರುಗಿದ ಸಭಾ ಕಾರ್ಯಕ್ರಮವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಶ್ವೇತ ದ್ವೀಪ ದಾಸರ ನಿರೂಪಣೆಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಇಸ್ಕಾನ್ ಸಂಸ್ಥೆಯ ಮುಖ್ಯಸ್ಥ ಶ್ರೀ ಗುಣಾಕರ ರಾಮ ದಾಸರು ಶ್ರೀ ರಾಮ ನವಮಿಯ ಉದ್ದೇಶ ಮತ್ತು ಮಹತ್ವವನ್ನು ಭಕ್ತರಿಗೆ ಸವಿಸ್ತಾರವಾಗಿ ವಿವರಿಸಿದರು.

ಶ್ರೀ ರಾಮ, ಶ್ರೀ ಲಕ್ಷ್ಮಣ, ಸೀತೆ ಮತ್ತು ಹನುಮಾನ್ ವಿಗ್ರಹಗಳಿಗೆ ಮಹಾಭಿಷೇಕ ಮತ್ತು ಮಹಾ ಮಂಗಳಾರತಿ ಸಲ್ಲಿಸಿದ ಬಳಿಕ ರಥವು ಇಸ್ಕಾನ್ ದೇವಾಲಯವನ್ನು ತಲುಪಿ, ನಂತರ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸುವುದರೊಂದಿಗೆ ಶೋಭಾಯಾತ್ರೆಯು ಭಕ್ತಿ ಭಾವದಿಂದ ಸಂಪನ್ನಗೊಂಡಿತು. ಇಸ್ಕಾನ್ ಸಂಸ್ಥೆಯ ಶ್ರೀ ಸನಂದನ ದಾಸ, ಶ್ರೀ ಸುಂದರ ಗೌರದಾಸ, ಶ್ರೀ ನಂದನ ದಾಸ ಈ ಕಾರ್ಯಕ್ರಮವನ್ನು ಸಂಘಟಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ