ಎಲ್ಲ ಪಕ್ಷದವರನ್ನು ಸಮ್ಮೇಳನಕ್ಕೆ ಒಳಗೊಳ್ಳಿಸಿಕೊಳ್ಳುವಲ್ಲಿ ವಿಫಲ

KannadaprabhaNewsNetwork | Published : Dec 3, 2024 12:30 AM

ಸಾರಾಂಶ

ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಮ್ಮೇಳನಕ್ಕೆ ಚಿನ್ನದ ಗರಿ ಮೂಡಿಸಿದೆ. ಕನ್ನಡ ನುಡಿ ಜಾತ್ರೆ ಪಕ್ಷಾತೀತವಾಗಿ ನಡೆಯುವಂತಹದ್ದು, ಕನ್ನಡ ಹಬ್ಬಕ್ಕೆ ವಿವಿಧ ರಾಜಕೀಯ ಪಕ್ಷದವರನ್ನು ಸಮಿತಿಗಳಿಗೆ ಸೇರಿಸಿಕೊಂಡು ಸಮ್ಮೇಳನ ನಡೆಸುವಲ್ಲಿ ಪರಿಷತ್ ರಾಜ್ಯಾಧ್ಯಕ್ಷರು ಆಸಕ್ತಿ ಮತ್ತು ಜವಾಬ್ದಾರಿ ವಹಿಸಿದಂತೆ ಕಂಡುಬರುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೂವತ್ತು ವರ್ಷಗಳ ಬಳಿಕ ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕನ್ನಡದ ತೇರನ್ನು ಎಳೆಯಲು ಒಗ್ಗೂಡಿಸಿಕೊಂಡು ಮುನ್ನಡೆಯುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ವಿಫಲರಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಆರೋಪಿಸಿದರು.

ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಮ್ಮೇಳನಕ್ಕೆ ಚಿನ್ನದ ಗರಿ ಮೂಡಿಸಿದೆ. ಕನ್ನಡ ನುಡಿ ಜಾತ್ರೆ ಪಕ್ಷಾತೀತವಾಗಿ ನಡೆಯುವಂತಹದ್ದು, ಕನ್ನಡ ಹಬ್ಬಕ್ಕೆ ವಿವಿಧ ರಾಜಕೀಯ ಪಕ್ಷದವರನ್ನು ಸಮಿತಿಗಳಿಗೆ ಸೇರಿಸಿಕೊಂಡು ಸಮ್ಮೇಳನ ನಡೆಸುವಲ್ಲಿ ಪರಿಷತ್ ರಾಜ್ಯಾಧ್ಯಕ್ಷರು ಆಸಕ್ತಿ ಮತ್ತು ಜವಾಬ್ದಾರಿ ವಹಿಸಿದಂತೆ ಕಂಡುಬರುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲರಿಗೂ ಸೇರಿರುವಂತಹದ್ದು. ಎಲ್ಲರಿಗೂ ಕನ್ನಡ ನುಡಿ ತೇರನ್ನು ಎಳೆಯಲು ಉತ್ಸಾಹವಿರುತ್ತದೆ. ಅದಕ್ಕೆ ಅವಕಾಶ ನೀಡಬೇಕಿರುವುದು ಪಕ್ಷದ ರಾಜ್ಯಾಧ್ಯಕ್ಷರ ಕರ್ತವ್ಯ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತಕ್ಕೆ ಬೇರೆ ಬೇರೆ ರೀತಿಯ ಜವಾಬ್ದಾರಿಗಳಿವೆ. ಎಲ್ಲರನ್ನೂ ಪಕ್ಷಾತೀತವಾಗಿ ಮುನ್ನಡೆಸಿಕೊಂಡು ಹೋಗಬೇಕಾದ ರಾಜ್ಯಾಧ್ಯಕ್ಷರು ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಪ್ರಮುಖ ರಾಜಕೀಯ ಪಕ್ಷಗಳ ನಾಯಕರು, ಮುಖಂಡರ ಸಭೆ ಕರೆದು ಸಲಹೆ, ಸಹಕಾರ, ಅಭಿಪ್ರಾಯಗಳನ್ನು ಕೇಳಲಿಲ್ಲ. ಅವರನ್ನೂ ಒಳಗೊಂಡಂತೆ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಗಮನಹರಿಸದಿರುವುದು ವಿಪರ್ಯಾಸದ ಸಂಗತಿ ಎಂದರು.

ಸಾಹಿತ್ಯ ಸಮ್ಮೇಳನ ಮುನ್ನಡೆಸುವುದಕ್ಕೆ ೨೮ ಸಮಿತಿ ರಚಿಸಲಾಗಿದೆ. ಅದರಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು, ಸಂಘಟನೆಗಳ ಮುಖಂಡರು-ಕಾರ್ಯಕರ್ತರನ್ನು ಸಮಿತಿಗಳಿಗೆ ಸೇರಿಸಿಕೊಂಡಿದ್ದರೆ ಎಲ್ಲರನ್ನೂ ಪರಿಗಣಿಸಿದಂತಾಗುತ್ತಿತ್ತು. ಆ ಕೆಲಸವನ್ನು ಯಾರೂ ಮಾಡದಿರುವುದರಿಂದ ಎಲ್ಲೋ ಒಂದು ಕಡೆ ಕಾಂಗ್ರೆಸ್ ಹೊರತುಪಪಡಿಸಿ ಬೇರೆ ಪಕ್ಷದವರನ್ನು ಕಡೆಗಣಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಇಂತಹ ಧೋರಣೆಗಳು ಬದಲಾಗಬೇಕು ಎಂದರು.

ಮೂರು ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯಸರ್ಕಾರ ೩೦ ಕೋಟಿ ರು. ಹಣ ಖರ್ಚು ಮಾಡುತ್ತಿರುವುದು ದುಂದುವೆಚ್ಚವಾಗಿದೆ. ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ, ಆಡಂಬರವಾಗಿ ನಡೆಸುವುದು ಬೇಡ. ಊಟಕ್ಕಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡುವ ಅಗತ್ಯವಿಲ್ಲ ಎಂದು ಅನೇಕ ಹಿರಿಯ ಸಾಹಿತಿಗಳೇ ಹೇಳಿದ್ದಾರೆ. ಸಮ್ಮೇಳನ ಸರಳವಾಗಿ

ನಡೆದರೂ ಭಾಷೆಗೆ ಶ್ರೀಮಂತಿಕೆ ತರುವ ನಿಟ್ಟಿನಲ್ಲಿ, ಬೆಳವಣಿಗೆ ದೃಷ್ಟಿಯಲ್ಲಿ, ಬಳಸುವ ವಿಧಾನದಲ್ಲಿ ಎಂತಹ ಕಾರ್ಯಯೋಜನೆ ರೂಪಿಸಲಾಗಿದೆ ಎನ್ನುವುದು ಮುಖ್ಯವಾಗುತ್ತದೆ. ಆ ಸಂದೇಶವನ್ನು ರಾಷ್ಟ್ರಮಟ್ಟಕ್ಕೆ ರವಾನಿಸಿದರೆ ಸಾಕು ಎಂದಿರುವಾಗ ಸಮ್ಮೇಳನಕ್ಕೆ ೩೦ ಕೋಟಿ ಖರ್ಚು ಮಾಡುವ ಅಗತ್ಯವೇನಿದೆ. ಈ ೩೦ ಕೋಟಿ ರು. ಹಣವನ್ನು ಕನ್ನಡ ತಂತ್ರಾಂಶ ಅಭಿವೃದ್ಧಿ, ಕನ್ನಡ ಭಾಷೆಯ ಸಂಶೋಧನೆ, ಕನ್ನಡ ಅಧ್ಯಯನದಲ್ಲಿ ತೊಡಗಿರುವವರಿಗೆ, ಜಾಗತಿಕ ಮಟ್ಟದಲ್ಲಿ ಕನ್ನಡ ಬಳಕೆಯನ್ನು ಹೆಚ್ಚಿಸುವುದು ಸೇರಿದಂತೆ ಕನ್ನಡ ಕಲಿಕೆ, ಬೆಳವಣಿಗೆಗೆ ಪೂರಕವಾದ ಯೋಜನೆಗಳಿಗೆ ಬಳಸುವುದು ಹೆಚ್ಚು ಔಚಿತ್ಯಪೂರ್ಣ ಎಂದರು.

ಸಮ್ಮೇಳನದ ಚಟುವಟಿಕೆಗಳು ಈಗಷ್ಟೇ ಶುರುವಾಗಿರುವುದರಿಂದ ಈಗಲಾದರೂ ವಿವಿಧ ಪಕ್ಷದವರನ್ನು ಪರಿಗಣಿಸಿ ಸಮಿತಿಗಳಿಗೆ ಸೇರಿಸಿಕೊಂಡು ಕನ್ನಡ ತೇರನ್ನು ಎಳೆಯುವುದಕ್ಕೆ ಅವಕಾಶ ನೀಡಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ಎಂದು ಹೇಳಿದರು.

ಬಿಜೆಪಿ ನಗರ ಅಧ್ಯಕ್ಷ ವಸಂತ್‌ಕುಮಾರ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ್, ಮುಖಂಡರಾದ ಬಿ.ಕೃಷ್ಣ, ಪ್ರಸನ್ನಕುಮಾರ್, ನಾಗಾನಂದ್ ಗೋಷ್ಠಿಯಲ್ಲಿದ್ದರು.

Share this article