ಮಹಿಳೆಯರ ಕನಿಷ್ಠ ಅಗತ್ಯ ಪೂರೈಸದಿರುವುದು ಕಳವಳಕಾರಿ

KannadaprabhaNewsNetwork |  
Published : Oct 24, 2026, 03:15 AM IST
ಬೆಳಗಾವಿ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಮಹಿಳೆಯರು ನಮಗೆ ಶೌಚಾಲಯ ಬೇಕು ಎಂದು ಕೇಳುವ ಸ್ಥಿತಿ ಇಂದಿಗೂ ಇದೆ. ಅವರ ಕನಿಷ್ಠ ಅಗತ್ಯವನ್ನೂ ಪೂರ್ಣ ಈಡೇರಿಸಲು ಸಾಧ್ಯವಾಗಿಲ್ಲ ಎಂಬುದು ಕಳವಳಕಾರಿ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತೀವ್ರ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಿಳೆಯರು ನಮಗೆ ಶೌಚಾಲಯ ಬೇಕು ಎಂದು ಕೇಳುವ ಸ್ಥಿತಿ ಇಂದಿಗೂ ಇದೆ. ಅವರ ಕನಿಷ್ಠ ಅಗತ್ಯವನ್ನೂ ಪೂರ್ಣ ಈಡೇರಿಸಲು ಸಾಧ್ಯವಾಗಿಲ್ಲ ಎಂಬುದು ಕಳವಳಕಾರಿ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತೀವ್ರ ಬೇಸರ ವ್ಯಕ್ತಪಡಿಸಿದರು.

ಕಿತ್ತೂರು ವಿಜಯದ 202ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ಕಿತ್ತೂರು ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಕೆಲಸಗಳಿಗೆ ಹಣ ಖರ್ಚು ಮಾಡುತ್ತೇವೆ. ಆದರೆ, ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕೆ ಮಾತ್ರ ಕಡಿಮೆ ವೆಚ್ಚ ಮಾಡುತ್ತಿದ್ದೇವೆ. ಶಿಕ್ಷಕರ ಕೊರತೆ ಹಾಗೂ ಮೂಲಸೌಕರ್ಯಗಳ ಅಭಾವದಿಂದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಅಡ್ಡಿಯಾಗುತ್ತಿದೆ. ಯಾವುದೇ ಸರ್ಕಾರವಿದ್ದರೂ ಈ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಗುಣಮಟ್ಟದ ಶಿಕ್ಷಣದ ಬಗ್ಗೆ ಗಂಭೀರವಾಗಿ ಚಿಂತಿಸಿದಾಗ ಮಾತ್ರ ಉತ್ತಮ ಜಿಲ್ಲೆ, ರಾಜ್ಯ ಹಾಗೂ ದೇಶ ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಪ್ರಸ್ತಾಪಿಸಿದ ರೈತರ ಸಮಸ್ಯೆಗಳು, ಶಿಕ್ಷಣ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಿದ ಸಚಿವರು, ಹೋರಾಟಗಾರರು, ಬುದ್ಧಿಜೀವಿಗಳು ಹಾಗೂ ಸಾಹಿತಿಗಳ ಚಿಂತನೆಗಳು ಸರ್ಕಾರದ ಕಾರ್ಯಗಳಲ್ಲಿ ಪ್ರತಿಫಲಿಸಬೇಕು. ಅವರ ವಿಚಾರಗಳನ್ನು ಅನುಷ್ಠಾನಕ್ಕೆ ತಂದಾಗ ಮಾತ್ರ ಉತ್ಸವದ ಆಶಯ ಈಡೇರಿದಂತಾಗುತ್ತದೆ. ಸಮಾರಂಭದಲ್ಲಿ ಪ್ರಸ್ತಾಪವಾದ ವಿಷಯಗಳ ಪರಿಹಾರಕ್ಕೆ ಸರ್ಕಾರ ಪ್ರಯತ್ನಿಸಲಿದೆ ಎಂದು ಭರವಸೆ ನೀಡಿದರು.

ಕಿತ್ತೂರು ಇತಿಹಾಸ ದೆಹಲಿಗೂ ತಲುಪಲಿ:

ಕಿತ್ತೂರು ರಾಣಿ ಚನ್ನಮ್ಮಳ ಹೋರಾಟ ಹಾಗೂ ಸಂಸ್ಥಾನದ ಇತಿಹಾಸ ಜಿಲ್ಲೆಗೆ ಸೀಮಿತವಾಗದೆ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ತಲುಪಬೇಕು.ಉತ್ಸವವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ಸರ್ಕಾರ ಚಿಂತನೆ ನಡೆಸುತ್ತಿದೆ. ಚನ್ನಮ್ಮನಂತಹ ಧೈರ್ಯಶಾಲಿ ಮಹಿಳೆಯರ ಹೋರಾಟದ ಇತಿಹಾಸವನ್ನು ಹೊಸ ಪೀಳಿಗೆಗೆ ಪರಿಚಯಿಸಬೇಕು. ಮುಂದಿನ ದಿನಗಳಲ್ಲಿ ಮೈಸೂರು ದಸರಾಕ್ಕೆ ಹೋಲಿಕೆಯಾಗುವಂತೆ ಕಿತ್ತೂರು ಉತ್ಸವವನ್ನು ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಅಭಿವೃದ್ಧಿಗೆ ಈ ಬಾರಿಯೂ ₹೫ ಕೋಟಿ

ಕಿತ್ತೂರಿನ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ಕಳೆದ ಮೂರು ವರ್ಷಗಳಲ್ಲಿ ತಲಾ ₹೫ ಕೋಟಿಯಂತೆ ಒಟ್ಟು ₹೧೫ ಕೋಟಿ ನೀಡಲಾಗಿದೆ. ಈ ಬಾರಿಯೂ ₹೫ ಕೋಟಿ ಒದಗಿಸಿ ರಸ್ತೆ, ಚರಂಡಿ, ಶೌಚಾಲಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಶಾಸಕ ಬಾಬಾಸಾಹೇಬ ಪಾಟೀಲ ನೇತೃತ್ವದಲ್ಲಿ ಕಿತ್ತೂರಿನ ಅಭಿವೃದ್ಧಿಗೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಉತ್ಸವವು ಪ್ರವಾಸಿಗರನ್ನು ಆಕರ್ಷಿಸುವುದರ ಜತೆಗೆ ಸ್ಥಳೀಯ ವ್ಯಾಪಾರ ವೃದ್ಧಿ ಹಾಗೂ ಉದ್ಯೋಗಾವಕಾಶಗಳಿಗೂ ನೆರವಾಗಬೇಕು. ಮೊದಲ ಬಾರಿಗೆ ಆಯೋಜಿಸಿರುವ ಜಾನುವಾರು ಜಾತ್ರೆ ವಿಶೇಷ ಆಕರ್ಷಣೆಯಾಗಿದೆ. ಮುಂದಿನ ವರ್ಷ ಜಾತ್ರೆಯನ್ನು ಮೂರು ದಿನಗಳವರೆಗೆ ನಡೆಸಲು ಪ್ರಯತ್ನಿಸಲಾಗುವುದು. ಸ್ಥಳೀಯ ಕಲಾವಿದರ ಪ್ರತಿಭೆ ಅನಾವರಣಕ್ಕೂ ಉತ್ಸವ ವೇದಿಕೆಯಾಗಬೇಕು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಹಂಗಾಮಿನಲ್ಲಿ ಕಬ್ಬಿನ ಇಳುವರಿ ಕಡಿಮೆ
ಚನ್ನಮ್ಮಳ ಶೌರ್ಯ, ದೇಶಪ್ರೇಮ ಮಹಿಳೆಯರಿಗೆ ಸ್ಫೂರ್ತಿ