ಧಾರವಾಡ:
ರಾಜಕಾರಣಿಗಳು ಸಮಾನತೆ ಬಗ್ಗೆ ಬರೋಬ್ಬರಿ ಭಾಷಣ ಮಾಡುತ್ತೇವೆ. ಆದರೆ, ನಾವೇ ಸರ್ಕಾರಿ ಶಾಲೆಗಳ ಮಕ್ಕಳಿಗೆ ಅಸಮಾನತೆ ತೋರುತ್ತಿದ್ದೇವೆ. ರಾಜ್ಯದ ಇನ್ನೂ ಅನೇಕ ಶಾಲೆಗಳಿಗೆ ಕಂಪ್ಯೂಟರ್ ಸೇರಿದಂತೆ ಮೂಲಭೂತ ಸೌಕರ್ಯ ನೀಡಲು ವಿಫಲರಾಗಿದ್ದೇವೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷಣ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.ಇಲ್ಲಿಯ ಆಲೂರು ವೆಂಕಟರಾವ್ ಸಭಾಭವನದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆಯು ವಿವಿಧ ಖಾಸಗಿ ಕಂಪನಿಗಳ ಜೊತೆಗೆ ಕಲಬುರಗಿ ಹಾಗೂ ಬೆಳಗಾವಿ ವಿಭಾಗದ ಸರ್ಕಾರಿ ಶಾಲೆಗಳಲ್ಲಿ ಸಿಎಸ್‌ಆರ್ ಅನುದಾನದ ಅಡಿ ನಡೆಸುತ್ತಿರುವ ವೃತ್ತಿ ಮಾರ್ಗದರ್ಶನ ಮತ್ತು ಕೌಶಲ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಚಿವರು ಮಾತನಾಡಿದರು.
ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳ 2400 ಸರ್ಕಾರಿ ಪ್ರೌಢಶಾಲೆಗಳಲ್ಲಿ ಅಂದಾಜು 4 ಲಕ್ಷ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಹಾದಿಯನ್ನು ಯಶಸ್ವಿಗೊಳಿಸಲು ಅಗತ್ಯ ಕೌಶಲ್ಯ ಮತ್ತು ಜ್ಞಾನ ಹೊಂದಲು ವಿವಿಧ ಕಂಪನಿಗಳ (ಕಾಗ್ನಿಜೆಂಟ್, ಡೆಲ್) ಸಿಎಸ್‌ಆರ್ ಅಡಿ ಇಂಡಿಯಾ ಲಿಟರಸಿ ಪ್ರೊಜೆಕ್ಟ್ (ಐಎಲ್‌ಪಿ) ಶುರು ಮಾಡಲಾಗಿದೆ. ರಾಜ್ಯ ಸರ್ಕಾರ ಈ ವಿಭಾಗಗಳ ಶಾಲೆಗಳಿಗೆ ಕಂಪ್ಯೂಟರ್ ಒದಗಿಸಿದರೆ ಯೋಜನೆ ಅಡಿ ಸಾಫ್ಟವೇರ್ ಒದಗಿಸಿ ಈ ಮೂಲಕ ಮಕ್ಕಳಿಗೆ ಕೌಶಲ್ಯ ಕಲ್ಪಿಸಲಾಗುತ್ತದೆ. ಆದರೆ, ಮಾಹಿತಿ ಪ್ರಕಾರ ಎರಡೂ ವಿಭಾಗಗಳ 600 ಶಾಲೆಗಳಿಗೆ ಸರ್ಕಾರ ಕಂಪ್ಯೂಟರ್ ಒದಗಿಸಲು ಸಾಧ್ಯವಾಗಿಲ್ಲ ಎಂಬ ಬೇಸರ ನನಗಿದೆ. ಈ ವ್ಯವಸ್ಥೆಗೆ ಸರ್ಕಾರ ಪ್ರಯತ್ನ ನಡೆಯುತ್ತಿದ್ದರೂ ಕಂಪ್ಯೂಟರ್‌ಗಳನ್ನು ಸಹ ಖಾಸಗಿ ಕಂಪನಿಗಳು ತಮ್ಮ ಸಿಎಸ್‌ಆರ್ ಅನುದಾನದ ಅಡಿ ಸರ್ಕಾರಿ ಶಾಲೆಗಳಿಗೆ ಒದಗಿಸಿದರೆ ತಮ್ಮದೇನೂ ಅಭ್ಯಂತರ ಇಲ್ಲ ಎಂದು ಮನವಿ ಮಾಡಿದರು.ಕೈ ಸರ್ಕಾರ ಕಾರಣವಲ್ಲ:
ಸರ್ಕಾರಿ ಶಾಲೆಗಳಿಗೆ ಬರೀ ಕಂಪ್ಯೂಟರ್ ಮಾತ್ರವಲ್ಲದೇ ಇತರೆ ಮೂಲಭೂತ ಸೌಕರ್ಯಗಳಿಲ್ಲ. ಈ ಸೌಕರ್ಯ ಕಲ್ಪಿಸದೇ ಇರಲು ರಾಜ್ಯ ಕಾಂಗ್ರೆಸ್ ಸರ್ಕಾರ ಕಾರಣವಲ್ಲ. ಈ ಸಮಸ್ಯೆಯು ಹತ್ತಿಪ್ಪತ್ತು ವರ್ಷಗಳಿಂದಲೂ ಇದೆ. ರಾಜ್ಯ ಕಾಂಗ್ರೆಸ್ ಸರ್ಕಾರ ನಿಧಾನವಾಗಿ ಈ ಸಮಸ್ಯೆಗೆ ಪರಿಹಾರ ಒದಗಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿವಿಧ ಕಂಪನಿಗಳನ್ನು ಕರೆದು ಸಿಎಸ್‌ಆರ್ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಬೇಕೆಂದು ಮನವಿ ಮಾಡಿದ್ದರ ಫಲವಾಗಿ ಇಂದು ಸರ್ಕಾರಿ ಶಾಲೆಗಳು ಎಂದೂ ಕಾಣದ ಸೌಲಭ್ಯಗಳನ್ನು ಕಾಣುವಂತಾಗಿದೆ. ಅದರಲ್ಲೂ ಅಜೀಮ್ ಪ್ರೇಮಜಿ ಫೌಂಡೇಶನ್‌ಗೆ ಎಷ್ಟು ಧನ್ಯವಾದ ಹೇಳಿದರೂ ತಪ್ಪಿಲ್ಲ. ₹ 1591 ಕೋಟಿ ವೆಚ್ಚದಲ್ಲಿ ಮೂರು ವರ್ಷ ನಿತ್ಯವೂ ಮಕ್ಕಳಿಗೆ ಮೊಟ್ಟೆ ನೀಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಹಲವು ಕಂಪನಿಗಳು ತಮ್ಮ ಸಿಎಸ್‌ಆರ್ ಅನುದಾನದಲ್ಲಿ ಗ್ರಂಥಾಲಯ, ಶೌಚಾಲಯ, ಮೈದಾನ, ಕಾಂಪೌಂಡ್, ಸ್ಮಾರ್ಟ್ ಕ್ಲಾಸ್, ಬೋರ್ಡ್ ಅಂತಹ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಪ್ರಸ್ತುತ ಸಿಎಸ್‌ಆರ್ ಅನುದಾನ ನೀಡಿ ಮಕ್ಕಳ ಶಿಕ್ಷಣಕ್ಕೆ ಹಲವು ಕಂಪನಿಗಳು ಸಹಕಾರ ಒದಗಿಸುತ್ತಿದ್ದು, ಇಲ್ಲದೇ ಹೋದಲ್ಲಿ ನಮ್ಮ ಮಕ್ಕಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಮಾನವ ಸಂಪನ್ಮೂಲ ಅದರಲ್ಲೂ ಸರ್ಕಾರಿ ಶಾಲಾ ಮಕ್ಕಳು ಸಂಖ್ಯೆ ಸಾಕಷ್ಟಿದೆ. ಅವರಿಗೆ ಅಗತ್ಯ ಸೌಲಭ್ಯ, ಕೌಶಲ್ಯ ಇಲ್ಲದೇ ಕೀಳರಿಮೆ ಎದುರಿಸುತ್ತಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯ, ಕೌಶಲ್ಯ ಹಾಗೂ ಆತ್ಮವಿಶ್ವಾಸ ಒದಗಿಸಿದರೆ ಯಾರಿಗೂ ಕಡಿಮೆ ಇಲ್ಲದ ಸಾಧನೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ಮಧು ಬಂಗಾರಪ್ಪ ಹೇಳಿದರು.
ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಅಪರ ಆಯುಕ್ತರಾದ ಜಯಶ್ರೀ ಶಿಂತ್ರಿ, ರಾಜ್ಯ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕ ರಮೇಶ ಕೆ.ಎನ್., ಇಂಡಿಯಾ ಲಿಟರಸಿ ಪ್ರೋಜೆಕ್ಟ್‌ನ ಕಾರ್ಯದರ್ಶಿ ಪ್ರಮೋದ್ ಶ್ರೀಧರಮೂರ್ತಿ ಸೇರಿದಂತೆ ಕಲಬುರ್ಗಿ ಹಾಗೂ ಬೆಳಗಾವಿ ವಿಭಾಗದ ಡಿಡಿಪಿಐ, ಬಿಇಒ ಸೇರಿದಂತೆ ಶಿಕ್ಷಣಾಧಿಕಾರಿಗಳು ಇದ್ದರು.