ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ನಾಡಿನ ಅನೇಕ ಮಠಾಧಿಪತಿಗಳು, ಧಾರ್ಮಿಕ ಮುಖಂಡರುಗಳು, ಗಣ್ಯರು ಭಾಗವಹಿಸಿದ್ದರು.ಸಮ್ಮೇಳನದ ನಂತರ ನಡೆದ ಶ್ರೀಕಾಲಭೈರವೇಶ್ವರ ತಿರುಗಣಿ ಉತ್ಸವ ಮತ್ತು ಪುಷ್ಕರಣಿಯಲ್ಲಿ ನಡೆದ ತೆಪ್ಪೋತ್ಸವವನ್ನು ಅಪಾರಸಂಖ್ಯೆಯ ಭಕ್ತರು ವೀಕ್ಷಿಸಿ ಕಣ್ತುಂಬಿಕೊಂಡರು.
ಧಾರ್ಮಿಕ ಮುಖಂಡರಿಂದ ಉಪನ್ಯಾಸ:ಸರ್ವಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮ ಕುರಿತು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಮಾತನಾಡಿದರು. ಜೈನ ಧರ್ಮ ಕುರಿತು ಹಾಸನ ಜಿಲ್ಲೆ ಶ್ರವಣಬೆಳಗೊಳದ ದಿಗಂಬರ ಜೈನ ಮಹಾಸಂಸ್ಥಾನಮಠದ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯಸ್ವಾಮೀಜಿ ಮಾತನಾಡಿದರು. ಕ್ರೈಸ್ತ ಧರ್ಮ ಕುರಿತು ಶಿವಮೊಗ್ಗದ ಸೇಕ್ರೇಡ್ ಹಾರ್ಟ್ ಚರ್ಚ್‌ನ ಧರ್ಮಗುರು ರೆವೆಂಡರ್ ಫಾದರ್ ಸ್ಟ್ಯಾನಿ ಡಿಸೋಜ ಮಾತನಾಡಿದರು.
ಬೌದ್ಧ ಧರ್ಮ ಕುರಿತು ಬೆಂಗಳೂರು ಗಾಂಧಿ ನಗರದ ಮಹಾಬೋಧಿ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಆನಂದ ಮಹಾಥೇರೋ ಮತ್ತು ಮಹಾಬೋಧಿ ಸಂಶೋಧನಾ ಕೇಂದ್ರದ ಸಂಶೋಧನ ಮಾರ್ಗದರ್ಶಕ ಡಾ.ರಾಜೇಂದ್ರ ಸುಪನ್ಯೋ ಮಾತನಾಡಿದರೆ, ಇಸ್ಲಾಂ ಧರ್ಮ ಕುರಿತು ಉಡುಪಿಯ ದಾರುಲ್ ಅಮಾನ್ ಶಿಕ್ಷಣ ಸಂಸ್ಥೆ ಉಪನ್ಯಾಸಕ ಮಹಮದ್ ಸ್ವಾದಿಖ್ ಮಾತನಾಡಿದರು.ಒಟ್ಟಾರೆ ಎಲ್ಲಾ ಧರ್ಮಗಳ ಸಂದೇಶವೂ ಸಹ ಒಂದೇ ಎಂಬ ಸಾರವನ್ನು ಸಮಾಜಕ್ಕೆ ಸಾರುತ್ತಿರುವ ಶ್ರೀಮಠದ ಕಾರ್ಯವನ್ನು ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು ವೇದಿಕೆಯಲ್ಲಿ ಶ್ಲಾಘಿಸಿದರು.
ಸರ್ವಧರ್ಮ ಸಮ್ಮೇಳನದ ಸಾನಿಧ್ಯ ವಹಿಸಿದ್ದ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಆಶೀರ್ವಚನ ನೀಡಿದರು.ವಿದ್ಯುತ್ ದೀಪಗಳಿಂದ ಕಂಗೊಳಿಸಿದ ಶ್ರೀಮಠ:
ಸಭಾ ಕಾರ್ಯಕ್ರಮದ ನಂತರ ತೆಪ್ಪೋತ್ಸವ ಆರಂಭಗೊಳ್ಳುತ್ತಿದ್ದಂತೆ ಬಣ್ಣ ಬಣ್ಣದ ಪಟಾಕಿಗಳು ಸಿಡಿದು ಬಾನಂಗಳದಲ್ಲಿ ಚಿತ್ತಾರಗಳು ಬಿಡಿಸಿದವು. ಶ್ರೀಮಠವನ್ನು ವಿದ್ಯುತ್ ದೀಪಾಲಂಕಾರಗಳಿಂದ ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು.ಜಾತ್ರಾ ಮಹೋತ್ಸವವು ಈ ಬಾರಿ ಅತ್ಯಂತ ವಿಜೃಂಭಣೆ ಮತ್ತು ವೈಭವಯುತವಾಗಿ ನೆರವೇರಿದ ಹಿನ್ನಲೆಯಲ್ಲಿ ನಾಡಿನ ವಿವಿದೆಡೆಗಳಿಂದ ಸಾಗರೋಪಾದಿಯಲ್ಲಿ ಭಕ್ತ ಸಮೂಹ ಹರಿದುಬಂದಿತ್ತು.
ಕ್ಷೇತ್ರದ ರಥದ ಬೀದಿ, ಕಲ್ಯಾಣಿ ಬೀದಿ ಸೇರಿದಂತೆ ಶ್ರೀಮಠದ ಬೆಟ್ಟದ ತಪ್ಪಲಿನ ಇಕ್ಕೆಲಗಳಲ್ಲಿ ಭಕ್ತರು ತುಂಬಿ ತುಳುಕುತ್ತಿದ್ದ ದೃಶ್ಯ ಕಂಡುಬಂತು. ದೂರದ ಊರುಗಳಿಂದ ಭಕ್ತರನ್ನು ಹೊತ್ತುತಂದಿದ್ದ ವಾಹನಗಳು ಶ್ರೀ ಕ್ಷೇತ್ರದ ಮುಖ್ಯದ್ವಾರದಿಂದ ತುಮಕೂರು ಹಾಗೂ ಮೈಸೂರು ಮಾರ್ಗಗಳ ಎರಡೂ ಬದಿಯಲ್ಲಿ ಕಿಲೋಮೀಟರ್‌ವರೆಗೆ ನಿಂತಿದ್ದವು.ಜಾತ್ರಾ ಮಹೋತ್ಸವ ದೃಶ್ಯಾವಳಿಗಳನ್ನು ಭಕ್ತಾದಿಗಳು ವೀಕ್ಷಿಸಿ ಕಣ್ತುಂಬಿಕೊಳ್ಳಲು ದೊಡ್ಡ ದೊಡ್ಡ ಎಲ್.ಇ.ಡಿ. ಪರದೆಗಳನ್ನು ಹತ್ತಾರು ಸ್ಥಳದಲ್ಲಿ ಅಳವಡಿಸಲಾಗಿತ್ತು.
ಸಾಂಸ್ಕೃತಿಕ ಕಲರವ:ಜಾತ್ರೆ ಪ್ರಯುಕ್ತ ಗುರುವಾರ ಇಡೀ ರಾತ್ರಿ ಬಿಜಿಎಸ್ ಸಭಾ ಭವನ ಹಾಗೂ ಶ್ರೀಮಠದ ಕೆಳಭಾಗದಲ್ಲಿರುವ ಮೂರ್‍ನಾಲ್ಕು ಸ್ಥಳಗಳಲ್ಲಿ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪೌರಾಣಿಕ ನಾಟಕ ಪ್ರದರ್ಶನಗೊಂಡು ನೆರೆದಿದ್ದ ಭಕ್ತ ಸಮೂಹದ ಭಕ್ತಿ ಸಂತಸವನ್ನು ಹೆಚ್ಚಿಸಿದವು.
ಬಿಗಿ ಪೊಲೀಸ್ ಬಂದೋಬಸ್ತ್: ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಗಣ್ಯರು, ಸಾಧುಸಂತರು ಹಾಗೂ ಸಹಸ್ರಾರು ಸಂಖ್ಯೆ ಭಕ್ತರ ಸುರಕ್ಷತೆ ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ಬಿ.ಚಲುವರಾಜು, ಸಿಪಿಐ ನಿರಂಜನ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು.ಸರ್ವಧರ್ಮ ಸಮ್ಮೇಳನದ ವೇದಿಕೆಯಲ್ಲಿ ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಬಿಜಿಎಸ್ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಬೆಂಗಳೂರು ಶಾಖಾ ಮಠದ ಪ್ರಕಾಶನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭೂನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಶ್ರೀಮಠದ ಚೈತನ್ಯನಾಥ ಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು, ಗಣ್ಯರು ಇದ್ದರು.