ಕನ್ನಡಪ್ರಭ ವಾರ್ತೆ ಮಡಿಕೇರಿ
2025-26 ರ ಸಾಲಿನ ರಾಜ್ಯ ಬಜೆಟ್ ಕೊಡಗು ಜಿಲ್ಲೆಯ ಪಾಲಿಗೆ ಗೋಲ್ಡನ್ ಬಜೆಟ್ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಬಣ್ಣಿಸಿದ್ದಾರೆ.ಮಡಿಕೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಜಿಲ್ಲೆಗೆ ಈ ಬಾರಿ ಲಭ್ಯವಾಗಿರುವ ವಿಶೇಷ ಕೊಡುಗೆಗಳ ದಾಖಲೆಯನ್ನು ವಿವರಿಸಿ ಮಾತನಾಡಿದ ಅವರು ಜನತೆಯ ನಿರೀಕ್ಷೆಗೂ ಮೀರಿ ಜಿಲ್ಲೆಗೆ ಅನುದಾನ ತರುವಲ್ಲಿ ಶಾಸಕದ್ವಯರು ಯಶಸ್ವಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
2025-26 ನೇ ಸಾಲಿನ ಬಜೆಟ್ ಅನ್ನು ಅವಲೋಕಿಸಿದಾಗ, ಕೊಡಗು ಜಿಲ್ಲೆಗೆ ಘೋಷಣೆಯಾಗಿರುವ ವಿಶೇಷ ಕೊಡುಗೆಗಳನ್ನು ಗಮನಿಸಿದಾಗ ಕೊಡಗಿನ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರು ತಾವು ರೂಢಿಯೊಳಗೆ ಉತ್ತಮರು ಎಂದು ಸಾಬೀತು ಪಡಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಶಾಸಕದ್ವಯರ ಪರಿಶ್ರಮ, ಕ್ರಿಯಾಶೀಲತೆ ಹಾಗೂ ಬದ್ದತೆಯ ಪರಿಣಾಮ 2025-26 ರ ರಾಜ್ಯ ಬಜೆಟ್ ನಲ್ಲಿ 1800 ಕೋಟಿ ರು. ಗಳಿಗೂ ಹೆಚ್ಚಿನ ಭರಪೂರ ಅನುದಾನವನ್ನು ಮಾನ್ಯ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ನವರು ಘೋಷಣೆ ಮಾಡಿದೆ. ಹಾಗಾಗಿ ಈ ಬಾರಿಯ ಬಜೆಟ್ ಕೊಡಗಿನ ಪಾಲಿಗೆ ಗೋಲ್ಡನ್ ಬಜೆಟ್ ಆಗಿ ಇತಿಹಾಸ ನಿರ್ಮಿಸಿದೆ.
ಇದಕ್ಕಾಗಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ನವರು, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ , ಮಂತ್ರಿಮಂಡಲದ ಎಲ್ಲ ಸದಸ್ಯರು ಹಾಗೂ ಕೊಡಗಿನ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ಅವರಿಗೆ ಕೊಡಗು ಜಿಲ್ಲೆಯ ಸಮಸ್ತ ನಾಗರೀಕರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ ಎಂದು ತಿಳಿಸಿದರು.ಹಿಂದಿನ ಸರ್ಕಾರಗಳು ಕೊಡಗು ಜಿಲ್ಲೆಯನ್ನು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬ ರೀತಿಯಲ್ಲಿ ಬಜೆಟ್ ನಲ್ಲಿ ಪರಿಗಣಿಸಿಕೊಂಡು ಬಂದಿರುವುದನ್ನು ನಾವೆಲ್ಲಾ ಗಮನಿಸಿದ್ದೇವೆ. ಆದರೆ ಈ ಬಾರಿ ಸರ್ಕಾರ ವಿಶೇಷ ಕಾಳಜಿ ವಹಿಸಿ ಕೊಡಗು ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದೆ. ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಆದ್ಯತೆ ನೀಡಿದೆ.ವಿರಾಜಪೇಟೆಗೆ 250 ಕೋಟಿ ರು. ವೆಚ್ಚದ ಜಿಲ್ಲಾಸ್ಪತ್ರೆ ದರ್ಜೆಯ 400 ಬೆಡ್ ಸಾಮರ್ಥ್ಯದ ಆಸ್ಪತ್ರೆ, 75 ಕೋಟಿ ವೆಚ್ಚದಲ್ಲಿ ಕುಶಾಲ ನಗರ ಆಸ್ಪತ್ರೆ ಆಧುನೀಕರಣ, 65 ಕೋಟಿ ರು. ವೆಚ್ಚದಲ್ಲಿ ಪೊನ್ನಂಪೇಟೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆಗೆ ಬಜೆಟ್ ನಲ್ಲಿ ಘೋಷಣೆ ಮಾಡಿದೆ.
ಕೊಡಗಿನಲ್ಲಿ ಐದು ಕರ್ನಾಟಕ ಪಬ್ಲಿಕ್ ಶಾಲೆಗಳು ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗಾಗಿ ಎರಡು ಹಿಂದುಳಿದ ವರ್ಗಗಳ ಹಾಸ್ಟೆಲ್ ಗೆ ಮಂಜೂರಾತಿ ನೀಡಿದೆ.ಆದಿವಾಸಿ ಜನಾಂಗಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು 33.5 ಕೋಟಿ ರು. ಗಳನ್ನು ಒದಗಿಸಲಾಗಿದೆ. ಭೂ ಕುಸಿತ ತಡೆಯಲು ತಡೆಗೋಡೆ ನಿರ್ಮಾಣ ಕಾರ್ಯಕ್ಕೆ 50 ಕೋಟಿ ರು. ಮೀಸಲಿಡಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲೆಗೆ ಐದು ಕೋಟಿ ರು. ಗಳ ಅನುದಾನ ನೀಡಲಾಗಿದೆ.
2024-25 ರಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಗೆ ತಲಾ 25 ಕೋಟಿ ನೀಡಿದ್ದರು. 2025- 26 ರಲ್ಲಿ ಅದನ್ನು ದುಪ್ಪಟ್ಟು ಮಾಡಿದ್ದು ತಲಾ ಕ್ಷೇತ್ರಕ್ಕೆ 50 ಕೋಟಿ ರು. ಗಳ ಹಾಗೆ ಒಟ್ಟು ಜಿಲ್ಲೆಗೆ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ 100 ಕೋಟಿ ರು. ಗಳು ಲಭ್ಯವಾಗಿದೆ.ಇವು ವಿಶೇಷ ಅನುದಾನಗಳಾಗಿದ್ದರೆ ಸಾಮಾನ್ಯ ಕಾರ್ಯಕ್ರಮಗಳಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕ್ರೀಡಾ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ, ಮುಜರಾಯಿ ಇಲಾಖೆ, ಸೇರಿದಂತೆ ಎಲ್ಲಾ ಇಲಾಖೆಗಳಿಂದ ಹಿಂದಿನ ವರ್ಷಗಳಿಗಿಂತಲೂ ಅತ್ಯಧಿಕ ಅನುದಾನಗಳನ್ನು ಮೀಸಲಿಡಲಾಗಿದೆ.
ಬಜೆಟ್ ನಲ್ಲಿ ಕೊಡಗು ಜಿಲ್ಲೆಗೆ ಹೆಚ್ಚಿನ ಅನುದಾನ ಬರುವ ಸುಳಿವು ಇದ್ದ ಕೊಡಗಿನ ಮಾಜಿ ಶಾಸಕರು ಹಾಗೂ ಕೊಡಗು ಬಿಜೆಪಿ ಮುಖಂಡರು ಜನರ ದೃಷ್ಟಿ ಕೋನ ಬದಲಿಸಲು ಅನಾವಶ್ಯಕ ಪ್ರತಿಭಟನೆ ನಡೆಸುತ್ತಿದೆ.ಕೊಡಗು ವಿ.ವಿ ಬಗ್ಗೆ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಧನಾತ್ಮಕವಾಗಿ ಅಭಿಪ್ರಾಯ ಹೊಂದಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾದ ಯಾವುದೇ ಪೂರ್ವ ಸಿದ್ದತೆ ಇಲ್ಲದೆ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡಿದೆ.
ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಶಾಸಕರು, ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಕಾರ್ಯೋನ್ಮುಖವಾಗಿ ಕೆಲಸ ಮಾಡುತ್ತಿದೆ.ಇದನ್ನು ರಾಜಕೀಯ ಲಾಭ ಮಾಡಿಕೊಳ್ಳಲು ಬಿಜೆಪಿ ಪ್ರಯತ್ನ ಪಡುತ್ತಿರುವುದ ಅವರ ಭಂಡತನ ವನ್ನು ಹೊರಹಾಕಿದೆ. ಪ್ರತಿಭಟನೆಯಲ್ಲಿ ಕೆಲವು ರೌಡಿ ಶೀಟರ್ ಗಳು ಮನ ಬಂದಂತೆ ಶಾಸಕರ ಬಗ್ಗೆ ಅವಹೇಳನಕರ ಪದ ಪ್ರಯೋಗ ಮಾಡಿರುವುದು ಅವರ ನೈತಿಕ ಮಟ್ಟ ಎಷ್ಟು ಕುಸಿದಿದೆ ಎಂಬುದನ್ನು ತೋರಿಸುತ್ತದೆ.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ, ಸೇವಾದಳ ಜಿಲ್ಲಾಧ್ಯಕ್ಷರಾದ ಕಾನೆಹಿತ್ಲು ಮೊಣ್ಣಪ್ಪ, ಡಿಸಿಸಿ ಸದಸ್ಯರಾದ ಪ್ರಕಾಶ್ ಆಚಾರ್ಯ, ಖಲೀಲ್ ಬಾಷಾ, ಮಾಜಿ ನಗರ ಸಭಾ ಸದಸ್ಯರಾದ ಕೆ.ಜೆ.ಪೀಟರ್ ಸುದ್ದಿಗೋಷ್ಠಿಯಲ್ಲಿದ್ದರು.