ಮುಂಬೈ, ದೆಹಲಿ ಮಾದರಿ ಹೋಳಿಗೆ ಕೊಪ್ಪಳ ಸಜ್ಜು

KannadaprabhaNewsNetwork |  
Published : Mar 14, 2025, 12:33 AM IST
13ಕೆಪಿಎಲ್102 ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಹೋಳಿಯಾಟಕ್ಕ ಸಕಲ ಸಿದ್ಧತೆ ಮಾಡಿರುವುದನ್ನು ಸಂಸದ ರಾಜಶೇಖರ ಹಿಟ್ನಾಳ ಅವರು ಪತ್ನಿಯೊಂದಿಗೆ ಪರಿಶೀಲನೆ ಮಾಡುತ್ತಿರುವುದು. | Kannada Prabha

ಸಾರಾಂಶ

ಜಿಲ್ಲಾ ಅಥ್ಲೆಟಿಕ್ಸ್ ಆಯೋಜನೆ ಮಾಡಿರುವ ಈ ಹೋಳಿಯಾಟದ ಕಲ್ಪನೆ ಮತ್ತು ಉಸ್ತುವಾರಿಯನ್ನು ಸಂಸದ ರಾಜಶೇಖರ ಹಿಟ್ನಾಳ ನೋಡಿಕೊಳ್ಳುತ್ತಿದ್ದಾರೆ. ಅವರೇ ಮುತುವರ್ಜಿ ವಹಿಸಿ ಮುಂಬೈ, ದೆಹಲಿ ಮಾದರಿಯ ಹೋಳಿಯಾಟಕ್ಕೆ ಸಿದ್ಧತೆ ಮಾಡಿಸಿದ್ದಾರೆ.

ಕೊಪ್ಪಳ:

ಇದೇ ಮೊದಲ ಬಾರಿಗೆ ಮುಂಬೈ, ದೆಹಲಿ ಮಾದರಿಯ ಹೋಳಿಯಾಟಕ್ಕೆ ಕೊಪ್ಪಳದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜಿಲ್ಲಾ ಅಥ್ಲೆಟಿಕ್ಸ್ ಆಯೋಜನೆ ಮಾಡಿರುವ ಈ ಹೋಳಿಯಾಟದ ಕಲ್ಪನೆ ಮತ್ತು ಉಸ್ತುವಾರಿಯನ್ನು ಸಂಸದ ರಾಜಶೇಖರ ಹಿಟ್ನಾಳ ನೋಡಿಕೊಳ್ಳುತ್ತಿದ್ದಾರೆ. ಅವರೇ ಮುತುವರ್ಜಿ ವಹಿಸಿ ಮುಂಬೈ, ದೆಹಲಿ ಮಾದರಿಯ ಹೋಳಿಯಾಟಕ್ಕೆ ಸಿದ್ಧತೆ ಮಾಡಿಸಿದ್ದಾರೆ. ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಮಾ. 14ರಂದು ನಡೆಯುವ ಹೋಳಿ ಹಬ್ಬದ ಅಂಗವಾಗಿ ರೇನ್ ಡ್ಯಾನ್ಸ್‌ಗಾಗಿ ಸಿದ್ಧತೆ ಮಾಡಲಾಗಿದೆ. ಬೃಹತ್ ಕಬ್ಬಿಣದ ಚೌಕಟ್ಟು ನಿರ್ಮಿಸಿ, ಅವುಗಳಿಗೆ ಪೈಪ್‌ಲೈನ್ ಅಳವಡಿಸಿ, ಪಂಪ್ ಸಹ ಅಳವಡಿಸಲಾಗಿದೆ. ಏಕಕಾಲಕ್ಕೆ ನೂರಾರು ಜನರು ರೇನ್ ಡ್ಯಾನ್ಸ್ ಮಾಡುವ ವ್ಯವಸ್ಥೆ ಮಾಡಿದ್ದು, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿದೆ.

ಸಾವಯವ ಬಣ್ಣ: ಬಣ್ಣ ಆಡಲು ಬರುವವರು ಬಣ್ಣ ತರುವಂತಿಲ್ಲ. ಸಾವಯವ ಬಣ್ಣವನ್ನು ಅಲ್ಲಿಯೇ ವಿತರಣೆ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ಕಳಪೆ ಬಣ್ಣಗಳನ್ನು ತರದಂತೆ ಮನವಿ ಮಾಡಲಾಗಿದೆ.

ಮೊದಲ ಬಾರಿಗೆ:

ಕೊಪ್ಪಳ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಂತಹ ವಿನೂತನ, ದೊಡ್ಡ ಪ್ರಮಾಣದ ಹೋಳಿಯಾಟ ಆಯೋಜನೆ ಮಾಡಲಾಗಿದೆ. 1990ನೇ ಇಸ್ವಿಯ ಆಸುಪಾಸು ಹಾಗೂ 1995ರ ವರೆಗೂ ಕೊಪ್ಪಳ ನಗರದ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಂದ ಜವಾಹರ ರಸ್ತೆಯಲ್ಲಿ ಹೋಳಿಯಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿತ್ತು. ರಸ್ತೆಯುದ್ದಕ್ಕೂ ಬಂಡಿಗಳಲ್ಲಿ ಬಣ್ಣದ ನೀರು ತುಂಬಿದ ಬ್ಯಾರಲ್‌ಗಳನ್ನು ಇಟ್ಟು, ರಸ್ತೆಯಲ್ಲಿ ಸಾಗುತ್ತಿದ್ದರು. ಯಾರು ಬೇಕಾದರೂ ಬಂದು ತೆಗೆದುಕೊಂಡು ಬಣ್ಣ ಆಡುವ ವ್ಯವಸ್ಥೆ ಇರುತ್ತಿತ್ತು.

ಡಿಜೆ ಸೌಂಡ್:

ಕೊಪ್ಪಳ ತಾಲೂಕು ಕ್ರಿಡಾಂಗಣದಲ್ಲಿ ಡಿಜೆ ಸೌಂಡ್ ವ್ಯವಸ್ಥೆ ಮಾಡಲಾಗಿದೆ. ಬಣ್ಣ ಆಡುವವರು ಹುಚ್ಚೆದ್ದು ಕುಣಿಯುವುದಕ್ಕೆ ಇದು ಪೂರಕವಾಗಲಿದೆ.

ಉಪಾಹಾರದ ವ್ಯವಸ್ಥೆ:

ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಮಾ.14ರ ಬೆಳಗ್ಗೆ 7 ಗಂಟೆಗೆ ಹೋಳಿಯಾಟ ಪ್ರಾರಂಭವಾಗಲಿದೆ. ಅದರ ಜತೆಗೆ ಬೆಳಗ್ಗೆಯೇ ಬಣ್ಣ ಆಡಲು ಬರುವವರಿಗೆ ಉಪಾಹಾರ ವ್ಯವಸ್ಥೆಯನ್ನೂ ಮಾಡಲಾಗಿದೆ.ಕೊಪ್ಪಳದಲ್ಲಿ ಅದ್ಧೂರಿಯಾಗಿ ಬಣ್ಣ ಆಡಬೇಕು ಎಂದು ಜಿಲ್ಲಾ ಅಥ್ಲೆಟಿಕ್ಸ್ ಯುವಕರು ಕೇಳುತ್ತಿದ್ದರು. ಇದಕ್ಕಾಗಿ ಆಯೋಜನೆ ಮಾಡಲಾಗಿದೆ. ರೇನ್ ಡ್ಯಾನ್ಸ್ ಸಹ ಇರುತ್ತದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ