ಹೊಸಕೋಟೆ: ಪೂರ್ವಿಕರೂ ಪಾರಂಪರಿಕವಾಗಿ ಆಚರಣೆ ಮಾಡಿಕೊಂಡು ಬಂದಿರುವ ಗ್ರಾಮದೇವತೆ ಉತ್ಸವಗಳಿಗೆ ಮನ್ನಣೆ ನೀಡಿದರೆ ಗ್ರಾಮಗಳಲ್ಲಿ ಸಾಮರಸ್ಯ ಬೆಳೆಸಲು ಸಾಧ್ಯವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೆಂಕಟೇಶ್ ತಿಳಿಸಿದರು.
ಗ್ರಾಮದಲ್ಲಿ ಗ್ರಾಮ ದೇವತೆಗಳ ಉತ್ಸವವನ್ನು ತಲತಲಾಂತರಗಳಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದು ಅದರಂತೆ ಯುವಕರಾದ ನಾವು ಇದನ್ನ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಪ್ರತಿ ಮೂರು ವರ್ಷಕ್ಕೊಮ್ಮೆ ಈ ಹಿಂದೆ ಗ್ರಾಮ ದೇವತೆ ಉತ್ಸವವನ್ನು ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಐದು ವರ್ಷದ ನಂತರ ಆಚರಣೆ ಮಾಡುತ್ತಿದ್ದೇವೆ. ಪೂರ್ವಿಕರ ಆಚರಣೆಗಳನ್ನು ನಾವು ಮುಂದುವರೆಸಿಕೊಂಡು ಹೋಗುವುದರಿಂದ ಗ್ರಾಮದಲ್ಲಿ ಶಾಂತಿ ನೆಮ್ಮದಿ ಹಾಗೂ ಸಾಮರಸ್ಯದ ವಾತಾವರಣ ಕಾಣಲು ಸಾಧ್ಯವಾಗಿದೆ ಎಂದರು.
ಕನಕ ಸಮೃದ್ಧಿ ಬ್ಯಾಂಕ್ ಅಧ್ಯಕ್ಷ ಮುನಿರಾಜು ಮಾತನಾಡಿ, ಗ್ರಾಮದಲ್ಲಿ ಗ್ರಾಮದೇವತೆ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದು, ಮನೆ ಮನೆಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಹಿಳೆಯರು ದೀಪಗಳನ್ನ ತಲೆ ಮೇಲೆ ಹೊತ್ತು ಮೆರವಣಿಗೆ ಮಾಡಿ ಗ್ರಾಮ ದೇವತೆಗೆ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ. ಅಷ್ಟೇ ಅಲ್ಲದೆ ಬಾಯಿಗೆ ಬೀಗ ಚುಚ್ಚಿಸಿಕೊಂಡು ಹರಕೆ ತೀರಿಸುವುದು ವಿಶೇಷವಾಗಿದೆ ಎಂದರು.ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ತಂಬಿಟ್ಟಿನ ದೀಪ ಹೊತ್ತು, ಕೇರಳದ ಚಂಡೆ ವಾದ್ಯ, ಉತ್ತರ ಕರ್ನಾಟಕದ ಡೊಳ್ಳು ಕುಣಿತದೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಹರೀಶ್, ಕನಕ ಸಮೃದ್ಧಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಮುಖಂಡರಾದ ಕೆಂಪಣ್ಣ, ಚನ್ನವೀರಪ್ಪ, ರಾಜಣ್ಣ, ನಾರಾಯಣಸ್ವಾಮಿ ಹಾಜರಿದ್ದರು.ಫೋಟೋ : 28 ಹೆಚ್‌ಎಸ್‌ಕೆ 2ಹೊಸಕೋಟೆ ತಾಲೂಕಿನ ಕುರುಬರಹಳ್ಳಿಯಲ್ಲಿ ಗ್ರಾಮ ದೇವತೆಗಳಾದ ಸಫಲಮ್ಮ, ಮಹೇಶ್ವರಮ್ಮ ದೊಡ್ಡಮ್ಮದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಹಿಳೆಯರು ದೀಪೋತ್ಸವ ಮಾಡಿದರು.