ಘಟಿಕೋತ್ಸವದ ನಕಲಿ ಪ್ರಮಾಣಪತ್ರ ಪ್ರಕರಣ; ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇಮಕ

KannadaprabhaNewsNetwork |  
Published : Jun 18, 2025, 12:05 AM ISTUpdated : Jun 18, 2025, 12:06 AM IST
( ಈ ವರದಿಗೆ ಬಳ್ಳಾರಿ ವಿವಿಯ ಫೋಟೋ ಕಳಿಸಲಾಗಿದೆ )  | Kannada Prabha

ಸಾರಾಂಶ

ಕಾನೂನು ಬಾಹಿರ ಆದೇಶಗಳ ಕುರಿತಂತೆ ತನಿಖೆ ನಡೆಸಲು ಬೆಳಗಾವಿಯ ನಿವೃತ್ತ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಡಿ.ಎಸ್. ಶಿಂಧೆ ತನಿಖಾಧಿಕಾರಿಯನ್ನಾಗಿ ವಿಶ್ವವಿದ್ಯಾಲಯ ನೇಮಿಸಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ರಾಜ್ಯದ ಗಮನ ಸೆಳೆದಿದ್ದ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಕಲಿ ಘಟಿಕೋತ್ಸವ ಪ್ರಮಾಣಪತ್ರ ಹಗರಣ ಹಾಗೂ ವಿವಿಯ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅನಂತ್ ಎಲ್. ಝಂಡೇಕರ್ ವಿವಿಯ ಪ್ರಭಾರಿ ಕುಲಪತಿಯಾಗಿದ್ದ ವೇಳೆಯಲ್ಲಿನ ಕಾನೂನು ಬಾಹಿರ ಆದೇಶಗಳ ಕುರಿತಂತೆ ತನಿಖೆ ನಡೆಸಲು ಬೆಳಗಾವಿಯ ನಿವೃತ್ತ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಡಿ.ಎಸ್. ಶಿಂಧೆ ತನಿಖಾಧಿಕಾರಿಯನ್ನಾಗಿ ವಿಶ್ವವಿದ್ಯಾಲಯ ನೇಮಿಸಿದೆ.

ಪ್ರಕರಣಗಳ ತನಿಖೆಯನ್ನು 45 ದಿನದೊಳಗೆ ಪೂರ್ಣಗೊಳಿಸಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ:

ಕಳೆದ ಜೂನ್ 6ರಂದು ವಿಶ್ವವಿದ್ಯಾಲಯದಲ್ಲಿ ಜರುಗಿದ ಸಿಂಡಿಕೇಟ್ ಸಭೆಯಲ್ಲಿ ವಿವಿಯಲ್ಲಿ ಈ ಹಿಂದೆ ನಡೆದಿರುವ ಘಟಿಕೋತ್ಸವದ ನಕಲಿ ಪ್ರಮಾಣಪತ್ರದ ಕೋಟ್ಯಂತರ ರು. ಹಗರಣವನ್ನು ತನಿಖೆ ಕೈಗೊಳ್ಳಲು ಹಾಗೂ ಪ್ರಭಾರಿ ಕುಲಪತಿಯಾಗಿದ್ದ ವಿವಿಯ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅನಂತ್ ಎಲ್. ಝಂಡೇಕರ್ ಅವರ ಅವಧಿಯಲ್ಲಿನ ಕಾನೂನು ಬಾಹಿರ ಆದೇಶಗಳ ಕುರಿತಂತೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ವಹಿಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಣಯಿಸಿತ್ತು. ಘಟಿಕೋತ್ಸವದ ನಕಲಿ ಪ್ರಮಾಣಪತ್ರ ಹಗರಣದಿಂದ ವಿಶ್ವವಿದ್ಯಾಲಯದ ಘನತೆಗೆ ಮುಕ್ಕಾಗಿದೆ. ಕೋಟ್ಯಂತರ ರು.ಗಳ ಹಗರಣ ಇದಾಗಿದ್ದು ನಿವೃತ್ತ ನ್ಯಾಯಾಧೀಶರಿಂದ ಸೂಕ್ತ ತನಿಖೆ ಕೈಗೊಳ್ಳಬೇಕು. ಆದಷ್ಟು ಬೇಗ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ಪ್ರಭಾರಿ ಕುಲಪತಿಯಾಗಿದ್ದ ಝಂಡೇಕರ್ ಅವರ ಅವಧಿಯಲ್ಲಿನ ಕಾನೂನು ಬಾಹಿರ ಆದೇಶಗಳನ್ನು ಸಹ ತನಿಖೆಗೆ ಒಳಪಡಿಸಬೇಕು ಎಂದು ಸಿಂಡಿಕೇಟ್ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ಬೆಳಗಾವಿಯ ನಿವೃತ್ತ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಡಿ.ಎಸ್. ಶಿಂಧೆ ತನಿಖಾಧಿಕಾರಿಯನ್ನಾಗಿ ವಿಶ್ವವಿದ್ಯಾಲಯ ನೇಮಿಸಿದೆ.

ಏನಿದು ನಕಲಿ ಹಗರಣ?

ವಿಶ್ವವಿದ್ಯಾಲಯದ ಹೊರಗುತ್ತಿಗೆ ಸಿಬ್ಬಂದಿಯೊಬ್ಬ ವಿವಿಯ ವಿದ್ಯಾರ್ಥಿಗಳಿಂದ ಹಣ ಪಡೆದು ಘಟಿಕೋತ್ಸವದ ನಕಲಿ ಪ್ರಮಾಣಪತ್ರಗಳನ್ನು ನೀಡಿದ್ದ. ಘಟಿಕೋತ್ಸವ ಪ್ರಮಾಣಪತ್ರದ ಶುಲ್ಕ ನೀಡಿದ್ದ ವಿದ್ಯಾರ್ಥಿನಿಯೊಬ್ಬರು ರಸೀದಿ ಕೇಳಲು ಕಳೆದ ಫೆಬ್ರವರಿ 6ರಂದು ವಿವಿಗೆ ಆಗಮಿಸಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿತ್ತು. ಕೂಡಲೇ ಎಚ್ಚೆತ್ತ ವಿಶ್ವವಿದ್ಯಾಲಯ ಪ್ರಕರಣ ತನಿಖೆಗೆ ಮುಂದಾಯಿತಲ್ಲದೆ, ಫೆ.20ರಂದು ತನಿಖಾ ಸಮಿತಿ ರಚನೆ ಮಾಡಿತು.

ತನಿಖೆಯ ಪರಿಶೀಲನೆಯಲ್ಲಿ ವಿವಿಯಲ್ಲಿ 3,335ಕ್ಕೂ ಅಧಿಕ ನಕಲಿ ಘಟಿಕೋತ್ಸವ ಪ್ರಮಾಣ ಪತ್ರ ವಿತರಣೆ ಮಾಡಲಾಗಿದ್ದು, 2 ಕೋಟಿಗೂ ಅಧಿಕ ಹಣದ ಅಕ್ರಮ ನಡೆದಿರಬಹುದು ಎಂದು ತನಿಖಾ ಸಮಿತಿ ವರದಿ ನೀಡಿತ್ತು. ಪ್ರಕರಣವನ್ನು ತಾರ್ಕಿಕ ಅಂತ್ಯ ನೀಡಬೇಕು ಎಂಬ ಒತ್ತಾಯಕ್ಕೆ ಮಣಿದ ವಿಶ್ವವಿದ್ಯಾಲಯವು ಘಟಿಕೋತ್ಸವದ ನಕಲಿ ಪ್ರಮಾಣಪತ್ರ ಹಾಗೂ ವಿವಿಯ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅನಂತ್ ಎಲ್. ಝಂಡೇಕರ್ ಅವರು ವಿವಿಯ ಪ್ರಭಾರಿ ಕುಲಪತಿಯಾಗಿದ್ದ ವೇಳೆಯಲ್ಲಿನ ಕಾನೂನು ಬಾಹಿರ ಆದೇಶಗಳ ಕುರಿತಂತೆ ತನಿಖೆ ನಡೆಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಿತ್ತು.

ಘಟಿಕೋತ್ಸವದ ನಕಲಿ ಪ್ರಮಾಣಪತ್ರ ಹಾಗೂ ವಿವಿಯಲ್ಲಿನ ಕಾನೂನು ಬಾಹಿರ ಆದೇಶಗಳು ಸಂಬಂಧಿಸಿದಂತೆ ತನಿಖೆ ನಡೆಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಿದಂತೆ ನಿವೃತ್ತ ನ್ಯಾಯಾಧೀಶರನ್ನು ನೇಮಿಸಲಾಗಿದೆ. 45 ದಿನದೊಳಗೆ ವರದಿ ಬರಲಿದ್ದು, ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ವಿವಿ ಕುಲಪತಿ ಪ್ರೊ. ಎಂ. ಮುನಿರಾಜು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ