ಗಿರೀಶ್ ಮಾದೇನಹಳ್ಳಿ
ನಕಲಿ ಔಷಧ ಮಾರಾಟ ಜಾಲದ ಶೋಧನೆಗಿಳಿದಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ರಾಜ್ಯಾದ್ಯಂತ ಔಷಧಗಳ ಪೂರೈಕೆಗೆ ನಾಲ್ಕು ಕಂಪನಿಗಳನ್ನು ದಂಧೆಕೋರರು ಆರಂಭಿಸಿದ್ದರು ಎಂಬ ಮಹತ್ವದ ಸಂಗತಿಯನ್ನು ಪತ್ತೆ ಹಚ್ಚಿದೆ.
ನಕಲಿ ಔಷಧ ಮಾರಾಟ ಜಾಲದ ಪ್ರಮುಖ ಆರೋಪಿಗಳಾದ ಪ್ರಶಾಂತ್ ಹಾಗೂ ವೆಂಕಟೇಶ್ ಚೌಧರಿ ಹೆಸರಿನಲ್ಲಿದ್ದ ನಾಲ್ಕು ಕಂಪನಿಗಳ ಮಾಹಿತಿ ಎಸ್‌ಐಟಿಗೆ ಲಭಿಸಿದೆ. ಈ ಬೆನ್ನಲ್ಲೇ ಆ ನಾಲ್ಕು ಕಂಪನಿಗಳ ಔಷಧ ವಹಿವಾಟಿನ ಕುರಿತು ಸಮಗ್ರ ವಿವರ ಕಲೆ ಹಾಕುವಂತೆ ತಮ್ಮ ತಂಡದ ಔಷಧ ನಿಯಂತ್ರಕರಿಗೆ ಎಸ್‌ಐಟಿ ಅಧಿಕಾರಿಗಳು ‘ಟಾಸ್ಕ್’ ನೀಡಿದ್ದಾರೆ.ಇನ್ನು ಕುತೂಹಲ ಸಂಗತಿ ಅಂದರೆ ಪ್ರತಿಷ್ಠಿತ ಕಂಪನಿಗಳ ಔಷಧ ಮಾರಾಟದಲ್ಲಿ ಆರ್ಥಿಕವಾಗಿ ಕೈ ಸುಟ್ಟುಕೊಂಡ ಬಳಿಕ ಈ ಜೋಡಿ ನಕಲಿ ಔಷಧ ದಂಧೆ ಶುರು ಮಾಡಿತು ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ ಮಾಹಿತಿ ನೀಡಿವೆ.
ಖರೀದಿದಾರ ವೆಂಕಟೇಶ್, ಹಂಚಿಕೆದಾರ ಪ್ರಶಾಂತ್:
ಆಗಲೇ ಹಣ ಸಂಪಾದನೆಗೆ ಇಬ್ಬರೂ ಅಡ್ಡದಾರಿ ತುಳಿದಿದ್ದಾರೆ. ಔಷಧ ಮಾರಾಟ ಪ್ರತಿನಿಧಿಗಳಾಗಿದ್ದಾಗ ವೆಂಕಟೇಶ್ ಹಾಗೂ ಪ್ರಶಾಂತ್ ಪರಿಚಯಸ್ಥರಾಗಿದ್ದರು. ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರಿಂದ ಪರಸ್ಪರ ಮಾತುಕತೆ ಹೆಚ್ಚಾಗಿ ಆತ್ಮೀಯ ಒಡನಾಟ ಬೆಳದಿದೆ. ಈ ಸ್ನೇಹದಲ್ಲಿ ತಾವೇ ಔಷಧಗಳ ಕಂಪನಿಗಳನ್ನು ತೆರೆದು ಉದ್ಯಮಿಗಳಾಗಲು ಯೋಜಿಸಿದ್ದಾರೆ. ಆಗಲೇ ತಮ್ಮ ಹೆಸರುಗಳಲ್ಲಿ ತಲಾ ಎರಡೆರಡು ಕಂಪನಿಗಳನ್ನು ನೋಂದಣಿ ಮಾಡಿಸಿ ಜಿಎಸ್‌ಟಿ ಸಂಖ್ಯೆ ಪಡೆದಿದ್ದಾರೆ. ಎರಡು ವರ್ಷಗಳಿಂದ ಒಂದೇ ತಂಡವಾಗಿ ನಾಲ್ಕು ಕಂಪನಿಗಳ ಹೆಸರಿನಲ್ಲಿ ಇಬ್ಬರು ವ್ಯವಹರಿಸುತ್ತಿದ್ದರು.
ಇನ್ನು ತಮ್ಮ ಔಷಧ ಬ್ಯುಸಿನೆಸ್‌ನಲ್ಲಿ ಕೆಲಸಗಳನ್ನು ಹಂಚಿಕೊಂಡು ಈ ಜೋಡಿ ಸಂಘಟಿತವಾಗಿ ನಡೆಸಿದೆ. ಚೆನ್ನೈ, ಮುಂಬೈ ಹಾಗೂ ಚಂಡೀಗಢ ಸೇರಿದಂತೆ ದೇಶದ ಇತರೆ ರಾಜ್ಯಗಳ ಔಷಧ ಕಂಪನಿಗಳ ಜತೆ ವೆಂಕಟೇಶ್ ವ್ಯವಹರಿಸುತ್ತಿದ್ದ. ಅದೇ ರೀತಿ ವಿದೇಶದ ಕಂಪನಿಗಳೊಂದಿಗೆ ಪ್ರಶಾಂತ್ ‘ಡೀಲ್’ ಕುದುರಿಸುತ್ತಿದ್ದ. ಔಷಧ ಖರೀದಿ ನಿರ್ವಹಣೆಯ ಹೊಣೆಗಾರಿಕೆ ವೆಂಕಟೇಶ್ ಹೆಗಲಿಗೆ ಬಿದ್ದಿತ್ತು. ಆ ಕಂಪನಿಗಳಿಂದ ಖರೀದಿಸಿದ ಅಗ್ಗದ ಔಷಧಿಗಳಿಗೆ ತಮ್ಮ ಕಂಪನಿಯ ಹೆಸರಿನಲ್ಲಿ ದುಬಾರಿ ಬೆಲೆಯ ಲೇಬಲ್ ಹಾಗೂ ನಕಲಿ ಔಷಧಿಗಳಿಗೆ ಪ್ರತಿಷ್ಠಿತ ಕಂಪನಿಗಳ ಲೇಬಲ್ ಹಚ್ಚಿ ಅಂಗಡಿಗಳಿಗೆ ಸರಬರಾಜು ಮಾಡುವ ಹಂಚಿಕೆದಾರನಾಗಿ ಪ್ರಶಾಂತ್ ಕೆಲಸ ಮಾಡುತ್ತಿದ್ದ. ಇದಕ್ಕಾಗಿಯೇ ಬೆಂಗಳೂರು ದಕ್ಷಿಣ ತಾಲೂಕಿನ ತಾವೆರೆಕೆರೆ ಸಮೀಪ ಸಿ.ಕೆ.ತಾಂಡ್ಯ ಗ್ರಾಮದಲ್ಲಿ ತೋಟದ ಮನೆಯನ್ನು ಪ್ರಶಾಂತ್ ಬಾಡಿಗೆ ಪಡೆದಿದ್ದ ಎಂದು ಮೂಲಗಳು ವಿವರಿಸಿವೆ.
ನನಗೇನು ಗೊತ್ತಿಲ್ಲ: ಪ್ರಶಾಂತ್ ಪತ್ನಿ
ಆರೋಪಿ ಪ್ರಶಾಂತ್ ಕಂಪನಿಗಳ ಬಗ್ಗೆ ಮಾಹಿತಿ ನೀಡುವಂತೆ ಆತನ ಪತ್ನಿಗೆ ಪೊಲೀಸರು ಸೂಚಿಸಿದ್ದರು. ಆದರೆ ವಿಚಾರಣೆ ವೇಳೆ ತನಗೆ ಕಂಪನಿಗಳ ವಿಷಯ ಗೊತ್ತಿಲ್ಲ ಎಂದಿದ್ದಾರೆ.
ಇನ್ನು ಆರೋಪಿಗಳು ಪದವೀಧರರಾಗಿದ್ದು, ಅವರ ಶೈಕ್ಷಣಿಕ ಅರ್ಹತೆಗೂ ಅವರ ಬ್ಯುಸಿನೆಸ್‌ಗೂ ಕಿಂಚಿತ್ತೂ ಸಂಬಂಧವಿಲ್ಲ. ಬಿಎ ಓದಿ ಮೆಡಿಕಲ್ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.