ಎಐಸಿಸಿ ಅಧಿವೇಶನದಲ್ಲಿ ನಕಲಿ ಗಾಂಧಿಗಳು: ಎಚ್ಡಿಕೆ ಹೇಳಿಕೆಗೆ ಸಿ.ಡಿ.ಗಂಗಾಧರ್ ಖಂಡನೆ

KannadaprabhaNewsNetwork |  
Published : Dec 30, 2024, 01:03 AM IST
29ಕೆಎಂಎನ್ ಡಿ23 | Kannada Prabha

ಸಾರಾಂಶ

ಕೇಂದ್ರ ಸಚಿವರನ್ನು ಮುಖ್ಯಮಂತ್ರಿ ಮಾಡಿದ್ದು, ಅವರ ತಂದೆ ಎಚ್.ಡಿ.ದೇವೇಗೌಡರನ್ನು ಪ್ರಧಾನಿಯನ್ನಾಗಿ ಮಾಡಿದ್ದು ಕಾಂಗ್ರೆಸ್ ಎಂಬುದನ್ನು ಮರೆತು ಮಾತನಾಡುತ್ತಿದ್ದಾರೆ. ಈಗ ದೇವೇಗೌಡರು ರಾಜ್ಯಸಭಾ ಸದಸ್ಯರಾಗಿರುವುದೂ ಸಹ ಕಾಂಗ್ರೆಸ್ ಬೆಂಬಲದಿಂದಲೇ.

ಕನ್ನಡಪ್ರಭ ವಾರ್ತೆ ಮಂಡ್ಯ

ಬೆಳಗಾವಿ ಎಐಸಿಸಿ ಅಧಿವೇಶನದಲ್ಲಿ ನಕಲಿ ಗಾಂಧಿಗಳೇ ರಾರಾಜಿಸುತ್ತಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಖಂಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಎಲ್ಲಿಯೂ ಮಹಾತ್ಮ ಗಾಂಧಿಯೊಂದಿಗೆ ಓಲೈಕೆ ಮಾಡುವ ಸಾಹಸ ಮಾಡಿಲ್ಲ. ಆದರೆ, ಕುಮಾರಸ್ವಾಮಿ ಅವರು ಈ ಬಗ್ಗೆ ಟೀಕಿಸುತ್ತಿರುವುದಕ್ಕೆ ವಿಷಾದಿಸಿದರು.

ಕೇಂದ್ರ ಸಚಿವರನ್ನು ಮುಖ್ಯಮಂತ್ರಿ ಮಾಡಿದ್ದು, ಅವರ ತಂದೆ ಎಚ್.ಡಿ.ದೇವೇಗೌಡರನ್ನು ಪ್ರಧಾನಿಯನ್ನಾಗಿ ಮಾಡಿದ್ದು ಕಾಂಗ್ರೆಸ್ ಎಂಬುದನ್ನು ಮರೆತು ಮಾತನಾಡುತ್ತಿದ್ದಾರೆ. ಈಗ ದೇವೇಗೌಡರು ರಾಜ್ಯಸಭಾ ಸದಸ್ಯರಾಗಿರುವುದೂ ಸಹ ಕಾಂಗ್ರೆಸ್ ಬೆಂಬಲದಿಂದಲೇ ಎಂದು ತಿರುಗೇಟು ನೀಡಿದರು.

ಇಡೀ ರಾಷ್ಟ್ರವೇ ಮೆಚ್ಚುವ ಗ್ಯಾರಂಟಿ ಯೋಜನೆ ತಂದಿರುವುದನ್ನು ಸಹಿಸಲಾಗದೆ 40 ಮಂದಿ ಕಳ್ಳರಿಗೆ ಹೋಲಿಸಿರುವುದನ್ನು ನೋಡಿದರೆ ಇವರು ವಿರೋಧ ಪಕ್ಷದಲ್ಲಿದ್ದಾರೋ ಅಥವಾ ಆಡಳಿತ ಪಕ್ಷದಲ್ಲಿರುವರೋ ಎಂಬ ಅನುಮಾನ ಮೂಡುತ್ತಿದೆ ಎಂದರು.

ಅಪಾರ ಜ್ಞಾನ ಹೊಂದಿರುವ ಗೃಹ ಸಚಿವ ಡಾ.ಪರಮೇಶ್ವರ್ ಅವರು ಹೆಬ್ಬೆಟ್ಟು ಎಂದು ಹೇಳಿರುವುದು ಸರಿಯಲ್ಲ. ಅವರಷ್ಟು ಜ್ಞಾನವನ್ನು ನೀವು ಹೊಂದಿಲ್ಲ. ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಕುಮಾರಸ್ವಾಮಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.

ಪುತ್ರ ನಿಖಿಲ್‌ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸೋಲುಂಡರು, ಚನ್ನಪಟ್ಟಣದಲ್ಲಿ ಸೋಲಿನ ನಂತರ ಹತಾಶರಾಗಿ ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರದ ಸಚಿವರ ವಿರುದ್ಧ ಇಂತಹ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಕೇಂದ್ರ ಸಚಿವರಾಗಿ ತಮ್ಮ ಜವಾಬ್ದಾರಿಗೆ ತಕ್ಕಂತೆ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ರಾಜಕಾರಣದಲ್ಲಿ ಕಟ್ ಅಂಡ್ ಪೇಸ್ಟ್‌ ರಾಜಕೀಯ ಪ್ರಾರಂಭವಾಗಿದೆ. ಭಾವನಾತ್ಮಕ ಮಾತುಗಳನ್ನಾಡಿ ಪ್ರಚೋದಿಸುತ್ತಿರುವುದನ್ನು ಖಂಡಿಸುತ್ತೇವೆ. ದೇವೇಗೌಡರು ನಾಡು ಕಟ್ಟಿದ ಕೆಂಪೇಗೌಡರ ಬಗ್ಗೆ ಕೇವಲವಾಗಿ ಮಾತನಾಡಿರುವುದು ಅವರ ಚಿಂತನೆ ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಸ್ಥಾಪಿಸಿರುವ ತಮ್ಮ ಸ್ವಂತ ಶಾಲೆಗೆ ಸರ್ಕಾರಿ ಹಣವನ್ನು ಬಳಸಿಕೊಂಡಂತೆ ನಮ್ಮ ಕಾಂಗ್ರೆಸ್ ನಾಯಕರು, ಶಾಸಕರು ಬಳಸಿಕೊಂಡಿಲ್ಲ. ಇಂತಹ ವ್ಯಕ್ತಿ ಅಭಿವೃದ್ಧಿ ಬಗ್ಗೆ ಟೀಕಿಸುವ ನೈತಿಕತೆ ಇಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯ ಶ್ರೀಧರ್, ಕೆಪಿಸಿಸಿ ಸದಸ್ಯೆ ವಿಜಯಲಕ್ಷ್ಮಿ ರಘುನಂದನ್, ಮುಖಂಡರಾದ ಅಪ್ಪಾಜಿ, ಸಿ.ಆರ್. ರಮೇಶ್, ಶಿವಲಿಂಗು, ನಾಗರಾಜು, ಸಿ.ಎಂ.ದ್ಯಾವಪ್ಪ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ