ನಕಲಿ ಗಾಂಧಿಗಳಿಂದ ಅಂಬೇಡ್ಕರ್ ವ್ಯಕ್ತಿತ್ವಕ್ಕೆ ಮಸಿ

KannadaprabhaNewsNetwork | Published : Feb 8, 2025 12:33 AM

ಸಾರಾಂಶ

ಸಾಗರ: ಸಂವಿಧಾನವನ್ನು ವಿರೂಪಗೊಳಿಸಿದ್ದು, ಸಂವಿಧಾನದ ಮೇಲೆ ದೌರ್ಜನ್ಯ ನಡೆಸಿ, ಡಾ.ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು ಮತ್ತು ೭೫ಕ್ಕೂ ಹೆಚ್ಚುಬಾರಿ ಸಂವಿಧಾನ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

ಸಾಗರ: ಸಂವಿಧಾನವನ್ನು ವಿರೂಪಗೊಳಿಸಿದ್ದು, ಸಂವಿಧಾನದ ಮೇಲೆ ದೌರ್ಜನ್ಯ ನಡೆಸಿ, ಡಾ.ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು ಮತ್ತು ೭೫ಕ್ಕೂ ಹೆಚ್ಚುಬಾರಿ ಸಂವಿಧಾನ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.ಇಲ್ಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಗುರುವಾರ ಸಿಟಿಜನ್ ಫಾರ್ ಸೋಶಿಯಲ್ ಜೆಸ್ಟಸ್ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಸನ್ಮಾನ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಲಾಗಲಾಯ್ತಿನಿಂದ ಅಂಬೇಡ್ಕರ್ ಅಸ್ತಿತ್ವ ಉಳಿಸಲು, ಸಂವಿಧಾನದ ಆಶಯ ಕಾಪಾಡಲು ಸಂಘ ಪರಿವಾರ ಮತ್ತು ಬಿಜೆಪಿ ಶ್ರಮಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಎಲ್ಲಾ ಸಂದರ್ಭದಲ್ಲಿಯೂ ಡಾ.ಅಂಬೇಡ್ಕರ್ ಮತ್ತು ಸಂವಿಧಾನ ಉಳಿಸಿ ಮುಂದಿನ ಪೀಳಿಗೆಗೆ ಜೋಪಾನವಾಗಿ ತೆಗೆದುಕೊಂಡು ಹೋಗುವ ಸಂಕಲ್ಪದಿಂದ ಕೆಲಸ ಮಾಡಿದೆ ಎಂದರು. ಕಾಲಕಾಲಕ್ಕೆ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಹಿಮ್ಮೆಟ್ಟಿಸುವ ಕೆಲಸ ಮಾಡಿಕೊಂಡು ಬಂದಿದೆ. ಅಂಬೇಡ್ಕರ್ ಚುನಾವಣೆಗೆ ನಿಂತಾಗ ಅವರನ್ನು ಸೋಲಿಸಲು ಪ್ರಯತ್ನ ನಡೆಸಿತ್ತು. ಅಂಬೇಡ್ಕರ್ ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಬಾಂಗ್ಲಾ ದೇಶಕ್ಕೆ ಸೇರಿಸಿತ್ತು. ಅಂಬೇಡ್ಕರ್ ಉಪ ಚುನಾವಣೆಗೆ ನಿಂತಾಗ ಅವರ ವಿರುದ್ಧ ಅಂದು ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ ಎರಡು ಬಾರಿ ಪ್ರಚಾರಕ್ಕೆ ಬಂದಿದ್ದರು. ಅಂಬೇಡ್ಕರ್ ಮರಣ ಹೊಂದಿದ ಆರು ತಿಂಗಳಿಗೆ ಅವರ ಪತ್ನಿಗೆ ಸರ್ಕಾರಿ ಮನೆ ಖಾಲಿ ಮಾಡಲು ಆದೇಶ ನೀಡಿತ್ತು. ಅಂಬೇಡ್ಕರ್ ಅವರ ಸ್ಮಾರಕ ಸ್ಥಾಪಿಸಲು ಅವಕಾಶ ನೀಡಲಿಲ್ಲ. ಅಂಬೇಡ್ಕರ್ ಬದುಕಿದ್ದಾಗ ಮಾತ್ರವಲ್ಲದೆ ಅವರ ಮರಣಾನಂತರ ಸಹ ಕಾಂಗ್ರೆಸ್ ಪಕ್ಷ ಅವರನ್ನು ಕಾಡಿತ್ತು. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷ ಮಾಡಿರುವ ಅವಮಾನವನ್ನು ದೇಶದ ಪ್ರತಿಯೊಬ್ಬ ನಾಗರಿಕರೂ ತಿಳಿದುಕೊಳ್ಳಬೇಕು ಎಂದರು. ಮಹಾತ್ಮಾ ಗಾಂಧೀಜಿ ಮತ್ತು ಡಾ.ಅಂಬೇಡ್ಕರ್ ಅವರನ್ನು ಕೆಲವು ನಕಲಿ ಗಾಂಧಿಗಳು ಬಳಸಿಕೊಂಡು ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನವನ್ನು ಟೂಲ್ಕಿಟ್ ಆಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದ ಅವರು, ಸಂವಿಧಾನ ಆಧುನಿಕ ಸ್ಮೃತಿ ಇದ್ದಂತೆ. ಪ್ರತಿಯೊಬ್ಬರ ಮನೆಯಲ್ಲಿ ಭಗವದ್ಗೀತೆ ಹೇಗೆ ಇರಿಸಿಕೊಳ್ಳುತ್ತೇವೆಯೋ, ಅದೇ ರೀತಿ ಸಂವಿಧಾನವನ್ನು ಸಹ ಇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಮಾತನಾಡಿದರು.ನಿವೃತ್ತ ಸಬ್‌ಇನ್‌ಸ್ಪೆಕ್ಟರ್ ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಎ.ಟಿ.ನಾಗರತ್ನ, ರೇವಪ್ಪ ಹೊಸಕೊಪ್ಪ, ಗಾಯಿತ್ರಿ ಮಲ್ಲೇಶಪ್ಪ, ವಿಕಾಸ್ ಪುತ್ತೂರು, ರೇಖಾ, ರವಿ ಗೌತಮಪುರ, ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಮತ್ತಿತರರಿದ್ದರು.

Share this article