ನಕಲಿ ಪ್ರತಿಮೆ ಪ್ರಕರಣ: ನಿರ್ಮಿತಿ ಕೇಂದ್ರ ಅಧಿಕಾರಿಗಳ ವಜಾಕ್ಕೆ ಕಾರ್ಕಳ ಕಾಂಗ್ರೆಸ್ ಮನವಿ

KannadaprabhaNewsNetwork |  
Published : Aug 11, 2025, 12:54 AM IST
ನಿರ್ಮಿತಿ ಕೇಂದ್ರದ ಅಧಿಕಾರಿಗಳ ಸೇವೆಯಿಂದ ವಜಾ ಮಾಡುವಂತೆ ಕಾರ್ಕಳ ಕಾಂಗ್ರೆಸ್ ಮನವಿ | Kannada Prabha

ಸಾರಾಂಶ

ಪರಶುರಾಮ ಥೀಮ್ ಪಾರ್ಕ್ ಸಂಬಂಧಿತ ನಕಲಿ ಕಂಚಿನ ಪ್ರತಿಮೆ ಪ್ರಕರಣದಲ್ಲಿ ಆರೋಪಿತರಾಗಿರುವ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಹಾಗೂ ಎಂಜಿನಿಯರ್ ಸಚಿನ್‌ ವೈ. ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ನಿಯೋಗವು ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಪರಶುರಾಮ ಥೀಮ್ ಪಾರ್ಕ್ ಸಂಬಂಧಿತ ನಕಲಿ ಕಂಚಿನ ಪ್ರತಿಮೆ ಪ್ರಕರಣದಲ್ಲಿ ಆರೋಪಿತರಾಗಿರುವ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಹಾಗೂ ಎಂಜಿನಿಯರ್ ಸಚಿನ್‌ ವೈ. ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ನಿಯೋಗವು ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಕಾರ್ಕಳದ ಎರ್ಲಪಾಡಿ ಗ್ರಾಮದ ಉಮ್ಮಿಕಲ್ ಬೆಟ್ಟದಲ್ಲಿ ನಿರ್ಮಿತವಾಗಿರುವ ಪರಶುರಾಮ ಪ್ರತಿಮೆ ಸಂಬಂಧ, ಕಾಮಗಾರಿಯ ಷರತ್ತುಗಳನ್ನು ಉಲ್ಲಂಘಿಸಿದ್ದು, ಕಂಚಿನ ಬದಲು ಇತರ ಲೋಹಗಳನ್ನು ಬಳಸಲಾಗಿದೆ. ಅಲ್ಲದೆ ಪ್ರತಿಮೆಯ ಮೇಲ್ಭಾಗವನ್ನು ಶೆಡ್‌ನಲ್ಲಿ ಇರಿಸಿದ್ದೆವು ಎಂದು ಸುಳ್ಳು ಹೇಳಿಕೆ ನೀಡಿರುವ ಆರೋಪವಿದೆ. ಈ ಹಿನ್ನೆಲೆಯಲ್ಲಿ ಕಾರ್ಕಳ ಪೊಲೀಸರು ವಂಚನೆ, ನಂಬಿಕೆಯ ದುರ್ಬಳಕೆ, ಸಾಕ್ಷಿ ನಾಶ, ಒಳಸಂಚು ಸೇರಿದಂತೆ ಅನೇಕ ಗಂಭೀರ ವಿಧಿಗಳಡಿಯಲ್ಲಿ 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಈ ಪ್ರಕರಣವು ಈಗಾಗಲೇ ಕರ್ನಾಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪಗಳಲ್ಲಿಯೂ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕರ ಧಾರ್ಮಿಕ ಭಾವನೆಗೂ ಧಕ್ಕೆ ಉಂಟುಮಾಡಿದೆ. ಆರೋಪಿಗಳ ಸ್ಥಾನದಲ್ಲಿರುವ ಅಧಿಕಾರಿಗಳನ್ನು ಉಡುಪಿ ಜಿಲ್ಲೆಯಲ್ಲಿ ಮುಂದುವರಿಸಿ ಕರ್ತವ್ಯ ನಿರ್ವಹಣೆಗೆ ಅವಕಾಶ ನೀಡಿದರೆ, ಮತ್ತಷ್ಟು ಅಕ್ರಮಗಳಿಗೆ ದಾರಿ ತೆರೆಯಲಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಆತಂಕವಿದೆ ಎಂಬುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನು ಗಮನದಲ್ಲಿಟ್ಟು, ತಪ್ಪಿತಸ್ಥ ಅಧಿಕಾರಿಗಳನ್ನು ತಕ್ಷಣ ಸೇವೆಯಿಂದ ವಜಾ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷ ಸುಬಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಣೈ, ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ, ರಹೀಮ್ ಅಜೆಕಾರ್, ವಕ್ತಾರ ಪ್ರದೀಪ್ ಬೇಲಾಡಿ, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಯೋಗೀಶ್ ಇನ್ನಾ, ಗ್ಯಾರಂಟಿ ಸಮಿತಿ ಸದಸ್ಯ ಸಂತೋಷ್ ದೇವಾಡಿಗ, ಪಂಚಾಯಿತಿ ಸದಸ್ಯ ದೀಕ್ಷಿತ್, ದೀಪಕ್ ಶೆಟ್ಟಿ, ರಂಜಿತ್ ಮಾಳ್, ಸುಹಾಸ್ ಖಾವ್ ಮೊದಲಾದವರು ಉಪಸ್ಥಿತರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ