ಸಿಎಂ ವಿರುದ್ಧ ಸುಳ್ಳು ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಕಾಂಗ್ರೆಸ್ ದೂರು

KannadaprabhaNewsNetwork |  
Published : Nov 13, 2024, 12:09 AM IST
9 | Kannada Prabha

ಸಾರಾಂಶ

ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ನಿವೇಶನ ನೋಂದಣಿಗೆ ವಿಶೇಷ ತಹಸೀಲ್ದಾರ್ ಅವರೇ ಮುದ್ರಾಂಕ ಶುಲ್ಕ ಪಾವತಿ ಮಾಡಿರುತ್ತಾರೆ ಎಂದು ಅಪಪ್ರಚಾರ ಮಾಡಿರುತ್ತಾರೆ. ಇವರ ಫೇಸ್ ಬುಕ್ ನಲ್ಲಿ ಹಾಕಿರುವ ನೋಂದಣಿ ಹಾಗೂ ಮುದ್ರಾಂಕ ಪ್ರಮಾಣ ಪತ್ರದಲ್ಲಿ 550 ರು. ನಿಗದಿತ ಮುದ್ರಾಂಕ ಶುಲ್ಕವಾಗಿ ಪಾವತಿಸಿರುವುದನ್ನು ಅಧಿಕಾರ ದುರುಪಯೋಗ ಎಂದು ಹೇಳಿಕೊಳ್ಳುತ್ತಿರುವುದು ಜನರ ದಿಕ್ಕನ್ನು ತಪ್ಪಿಸುವುದು ಮತ್ತು ಮುಖ್ಯಮಂತ್ರಿಗಳನ್ನು ಖಳನಾಯಕರನ್ನಾಗಿ ಬಿಂಬಿಸುವ ದುರುದ್ದೇಶವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರು ಮೈಸೂರಿನ ದೇವರಾಜ ಠಾಣೆಯ ಪೊಲೀಸರಿಗೆ ಮಂಗಳವಾರ ದೂರು ನೀಡಿದರು.

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗವು ದೇವರಾಜ ಠಾಣೆಯ ಪೊಲೀಸರಿಗೆ ದೂರು ನೀಡಿ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಆರೋಪ ಮಾಡುತ್ತಿರುವ ಸ್ನೇಹಮಯಿ ಕೃಷ್ಣ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಸ್ನೇಹಮಯಿ ಕೃಷ್ಣ, ಕ್ರಯಪತ್ರ ನೋಂದಣಿ ಮಾಡಿಸಿಕೊಳ್ಳುವವರು ನೋಂದಣಿಗೆ ಸಂಬಂಧಿಸಿದ ಶುಲ್ಕಗಳನ್ನು ಪಾವತಿ ಮಾಡಬೇಕು. ಅದೇ ರೀತಿ ಎನ್. ಮಂಜುನಾಥ್ ಅವರ ಶುಲ್ಕ ಪಾವತಿ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಕ್ರಯಪತ್ರ ಗಮನಿಸಿ, ಮುಡಾದ ವಿಶೇಷ ತಹಸೀಲ್ದಾರ್ ಮುದ್ರಾಂಕ ಶುಲ್ಕ ಪಾವತಿ ಮಾಡಿದ್ದಾರೆ ಎಂಬುದು ಖಚಿತವಾಗಿ ತಿಳಿದು ಬಂದಿರುತ್ತದೆ. ನನ್ನ ಆರೋಪಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಸಿದ್ದರಾಮಯ್ಯ ರಾಜ್ಯದ ಜನತೆಗೆ ಉತ್ತರಿಸುವರೇ? ಎಂದು ಒತ್ತಾಯಿಸಿದ್ದಾರೆ.

ಈ ರೀತಿ ಸುಳ್ಳು ಆರೋಪಗಳನ್ನು ನಿರಂತರವಾಗಿ ಮಾಡುತ್ತ ಮುಖ್ಯಮಂತ್ರಿಗಳ ತೇಜೋವಧೆ ಮಾಡುವುದಲ್ಲದೆ ಜನ ಸಾಮಾನ್ಯರಲ್ಲಿ ತಪ್ಪು ಕಲ್ಪನೆ ಮತ್ತು ತಪ್ಪಿತಸ್ಥರು ಎಂದು ಬಿಂಬಿಸುವ ಕೆಲಸವನ್ನು ಕಳೆದ 2 ತಿಂಗಳಿಂದ ಸ್ನೇಹಮಯಿ ಕೃಷ್ಣ ಮಾಡುತ್ತಿದ್ದಾರೆ. ಇದಲ್ಲದೆ ಇವರು ಮತ್ತು ಟಿ.ಜೆ. ಅಬ್ರಹಾಂ ನ್ಯಾಯಾಲಯದ ಮೊರೆ ಹೋಗಿ ಮುಡಾ ವಿಚಾರಕ್ಕೆ ಲೋಕಾಯುಕ್ತ ತನಿಖೆಗೆ ವಹಿಸಬೇಕೆಂದು ಕೋರಿದ್ದಾರೆ. ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಆದರೆ, ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ತನಿಖೆ ಸರಿಯಾಗಿ ನಡೆಸುತ್ತಿಲ್ಲವೆಂದು ಮತ್ತು ತನಿಖಾಧಿಕಾರಿಯ ವಿರುದ್ಧ ಲೋಕಾಯುಕ್ತ ಎಡಿಜಿಪಿಗೆ ದೂರು ನೀಡುವುದಲ್ಲದೆ ತನಿಖಾಧಿಕಾರಿಗೆ ದಿನ ನಿತ್ಯ ಬ್ಲಾಕ್ ಮೇಲ್ ಮತ್ತು ಒತ್ತಡ ತರುತ್ತಿದ್ದಾರೆ. ತನಿಖೆಯ ವರದಿಯನ್ನು ನ್ಯಾಯಾಲಯಕ್ಕೆ ಲೋಕಾಯುಕ್ತ ಅಧಿಕಾರಿಗಳು ಇನ್ನೂ ಸಲ್ಲಿಸಿರುವುದಿಲ್ಲ. ತನಿಖೆ ವಿಚಾರಣೆ ಹಂತದಲ್ಲಿರುವಾಗ ತನಿಖೆ ಸರಿಯಿಲ್ಲ ಎಂದು ಹೇಳುತ್ತಿರುವುದು ಹೇಗೆ ಎಂಬುದು ಗೊತ್ತಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ನಿವೇಶನ ನೋಂದಣಿಗೆ ವಿಶೇಷ ತಹಸೀಲ್ದಾರ್ ಅವರೇ ಮುದ್ರಾಂಕ ಶುಲ್ಕ ಪಾವತಿ ಮಾಡಿರುತ್ತಾರೆ ಎಂದು ಅಪಪ್ರಚಾರ ಮಾಡಿರುತ್ತಾರೆ. ಇವರ ಫೇಸ್ ಬುಕ್ ನಲ್ಲಿ ಹಾಕಿರುವ ನೋಂದಣಿ ಹಾಗೂ ಮುದ್ರಾಂಕ ಪ್ರಮಾಣ ಪತ್ರದಲ್ಲಿ 550 ರು. ನಿಗದಿತ ಮುದ್ರಾಂಕ ಶುಲ್ಕವಾಗಿ ಪಾವತಿಸಿರುವುದನ್ನು ಅಧಿಕಾರ ದುರುಪಯೋಗ ಎಂದು ಹೇಳಿಕೊಳ್ಳುತ್ತಿರುವುದು ಜನರ ದಿಕ್ಕನ್ನು ತಪ್ಪಿಸುವುದು ಮತ್ತು ಮುಖ್ಯಮಂತ್ರಿಗಳನ್ನು ಖಳನಾಯಕರನ್ನಾಗಿ ಬಿಂಬಿಸುವ ದುರುದ್ದೇಶವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸ್ನೇಹಮಯಿ ಕೃಷ್ಣ ಅವರ ಆರೋಪವು ಸತ್ಯಕ್ಕೆ ದೂರವಾದದ್ದು ಮತ್ತು ದುರುದ್ದೇಶದಿಂದ ಕೂಡಿರುತ್ತದೆ. ಸತ್ಯಾಸತ್ಯತೆಗಳನ್ನು ಪರಿಶೀಲಿಸಿ, ಸುಳ್ಳು ಸುದ್ದಿ ಹರಡುವುದನ್ನು ಮತ್ತು ಬ್ಲಾಕ್ ಮೇಲ್ ಮಾಡುತ್ತಿರುವ ಸ್ನೇಹಮಯಿ ಕೃಷ್ಣ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮುಖಂಡರಾದ ಗಿರೀಶ್, ಕೆ. ಮಹೇಶ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌